ಗಂಗಾ ಕುರಿತು ಆದೇಶ: ಎನ್‌ಜಿಟಿ ಸ್ಪಷ್ಟನೆ
ಹೊಸದಿಲ್ಲಿ,ಜ.30: ಡಾ.ಅನಿತಾ ರಾಯ್ ಅವರು ಗಂಗಾ ನದಿ ಪುನರುಜ್ಜೀವನ ಕಾರ್ಯದ ಉಸ್ತುವಾರಿಯನ್ನು ಹೊಂದಿರುವ ಉತ್ತರಾಖಂಡ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಯು.ಸಿ.ಧ್ಯಾನಿ ನೇತೃತ್ವದ ತ್ರಿಸದಸ್ಯ ಸಮಿತಿಯ ಸದಸ್ಯೆಯಾಗಿ ಮುಂದುವರಿಯುತ್ತಾರೆ ಎಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ)ವು ಬುಧವಾರ ಸ್ಪಷ್ಟಪಡಿಸಿದೆ.
ಮಾಜಿ ಐಪಿಎಸ್ ಅಧಿಕಾರಿ ಹಾಗೂ ಐಐಟಿ ಪ್ರತಿನಿಧಿ ರಾಯ್ ಅವರ ಕೋರಿಕೆಯ ಮೇರೆಗೆ ಈ ಸ್ಪಷ್ಟನೆಯನ್ನು ನೀಡಿದ ನ್ಯಾ.ಆದರ್ಶ ಕುಮಾರ ಗೋಯೆಲ್ ಅಧ್ಯಕ್ಷತೆಯ ಎನ್‌ಜಿಟಿ,ಉತ್ತರಾಖಂಡ ಸರಕಾರವು ಅವರಿಗೆ ಗೌರವಧನವನ್ನೂ ನೀಡಲಿದೆ ಎಂದು ತಿಳಿಸಿತು.
ಗೋಮುಖದಿಂದ ಹರಿದ್ವಾರದವರೆಗೆ ಮತ್ತು ಹರಿದ್ವಾರದಿಂದ ಕಾನ್ಪುರದವರೆಗೆ ಹೀಗೆ ಮೊದಲ ಹಂತದ ಎರಡು ವಿಭಾಗಗಳಿಗೆ ಸಮಿತಿಯ ಸದಸ್ಯರಾಗಿ ರಾಯ್ ಮುಂದುವರಿಯುತ್ತಾರೆ, ಆದರೆ ಒಂದು ಸರಕಾರವು ಮಾತ್ರ ಅವರಿಗೆ ಗೌರವಧನವನ್ನು ಪಾವತಿಸುತ್ತದೆ. ಈ ಗೌರವಧನವು ಅವರು ಈ ಹಿಂದೆ ಹೊಂದಿದ್ದ ಹುದ್ದೆಯಲ್ಲಿ ಹಾಲಿ ಮೂಲವೇತನದಷ್ಟು ಅಂದರೆ ಎರಡು ಲ.ರೂ.ಗಳಾಗಿರುತ್ತದೆ ಎಂದು ಪೀಠವು ತಿಳಿಸಿತು. ಇದರ ಜೊತೆಗೆ ಪ್ರಯಾಣಿಸಿದ ಪ್ರದೇಶವನ್ನು ಅವಲಂಬಿಸಿ ಉತ್ತರಾಖಂಡ/ಉತ್ತರ ಪ್ರದೇಶ ಸರಕಾರಗಳಿಂದ ಪ್ರಯಾಣ ಭತ್ಯೆ ಮತ್ತು ಖರ್ಚುಗಳನ್ನು ಪಡೆಯಲು ಅವರು ಅರ್ಹರಾಗಿದ್ದಾರೆ ಎಂದೂ ಅದು ಸ್ಪಷ್ಟಪಡಿಸಿತು.