12 ಗಂಟೆಗಳ ಅಸ್ಸಾಂ ಬಂದ್: ಬೋಡೋ ಪ್ರಾಬಲ್ಯದ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತ

Update: 2019-01-31 15:02 GMT

ಗುವಾಹಟಿ, ಜ.31: ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್(ಎನ್‌ಡಿಎಫ್‌ಬಿ)ನ ಅಧ್ಯಕ್ಷ ರಂಜನ್ ಡೈಮರಿ ಹಾಗೂ ಇತರ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಖಂಡಿಸಿ ಎನ್‌ಡಿಎಫ್‌ಬಿ ಕರೆಕೊಟ್ಟಿದ್ದ 12 ಗಂಟೆಗಳ ಅಸ್ಸಾಂ ಬಂದ್ ಪ್ರತಿಭಟನೆಯಿಂದಾಗಿ ಬೋಡೊ ಪ್ರಾಬಲ್ಯದ ಜಿಲ್ಲೆಗಳಲ್ಲಿ ಗುರುವಾರ ಜನಜೀವನ ಅಸ್ತವ್ಯಸ್ತಗೊಂಡಿದೆ.

ಬೆಳಿಗ್ಗೆ 5 ಗಂಟೆಯಿಂದ ಬಂದ್ ಆರಂಭಗೊಂಡಿದ್ದು ಕೊಕ್ರಜಾರ್, ಚಿರಂಗ್, ಬಾಕ್ಸ ಹಾಗೂ ಉದಲ್‌ಗುರಿ ಜಿಲ್ಲೆಗಳಲ್ಲಿ ಅಂಗಡಿ ಮತ್ತು ವ್ಯಾಪಾರ ಸಂಸ್ಥೆಗಳು ಬಾಗಿಲು ಮುಚ್ಚಿದ್ದವು. ವಾಹನಗಳು ರಸ್ತೆಗಿಳಿಯದ ಕಾರಣ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ನಾಲ್ಕು ಜಿಲ್ಲೆಗಳು ಬೋಡೊಲ್ಯಾಂಡ್ ಪ್ರಾದೇಶಿಕ ಪ್ರದೇಶದ ಜಿಲ್ಲೆ(ಬಿಟಿಎಡಿ)ಗಳಾಗಿವೆ. ಆದರೆ ಗುರುವಾರ ಸ್ಥಳೀಯ ರಜಾದಿನವಾಗಿದ್ದರಿಂದ ಸರಕಾರಿ ಕಚೇರಿಗಳು, ಕಾಲೇಜು ಹಾಗೂ ಇತರ ಶಿಕ್ಷಣ ಸಂಸ್ಥೆಗಳಿಗೆ ಮೊದಲೇ ರಜೆ ಸಾರಲಾಗಿತ್ತು. ರೈಲು ಸಂಚಾರ ಸಹಜವಾಗಿತ್ತು. ಬ್ರಹ್ಮಪುತ್ರ ಕಣಿವೆಯಲ್ಲಿ ಬಂದ್‌ಗೆ ಹೆಚ್ಚಿನ ಪ್ರತಿಕ್ರಿಯೆ ದೊರಕಿಲ್ಲ. ಬರಾಕ್ ಕಣಿವೆಯಲ್ಲಿ ಬಂದ್ ವಿಫಲವಾಗಿತ್ತು.

2008ರಲ್ಲಿ ಅಸ್ಸಾಂನಲ್ಲಿ 88 ಜನರನ್ನು ಬಲಿಪಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ಎನ್‌ಡಿಎಫ್‌ಬಿ ಅಧ್ಯಕ್ಷ ಡೈಮರಿ ಹಾಗೂ ಇತರ 9 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News