ಅಮೆರಿಕವನ್ನು ಆವರಿಸಿದ ಭೀಕರ ಚಳಿ: ಅಂಟಾರ್ಕ್ಟಿಕ್‌ಗಿಂತಲೂ ಶೀತಲ ವಾತಾವರಣ

Update: 2019-01-31 17:37 GMT

ಶಿಕಾಗೊ, ಜ. 31: ಅಂಟಾರ್ಕ್ಟಿಕಕ್ಕಿಂತಲೂ ತಣ್ಣಗಿರುವ ಹಾಗೂ ಜೀವಿಗಳಿಗೆ ಅಪಾಯಕಾರಿಯಾಗಿರುವ ಅತ್ಯಂತ ಭಯಾನಕ ಶೀತಲ ವಾತಾವರಣ ಅಮೆರಿಕದ ಮಧ್ಯ-ಪಶ್ಚಿಮ ವಲಯವನ್ನು ಬುಧವಾರ ಆವರಿಸಿದೆ. ಭಯಾನಕ ಚಳಿಯು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ, ಪ್ರಯಾಣ ಯೋಜನೆಗಳನ್ನು ಬುಡಮೇಲುಗೊಳಿಸಿದೆ ಹಾಗೂ ಕೋಟ್ಯಂತರ ಜನರ ದೈನಂದಿನ ಜೀವನವನ್ನೇ ನಿಲ್ಲಿಸಿದೆ.

ಸುಮಾರು 12 ರಾಜ್ಯಗಳಲ್ಲಿ ಪತ್ರಗಳ ಬಟವಾಡೆಯನ್ನು ನಿಲ್ಲಿಸಲಾಗಿದೆ, ಶಾಲೆಗಳು ಮತ್ತು ಅಂಗಡಿಗಳನ್ನು ಮುಚ್ಚಲಾಗಿದೆ ಹಾಗೂ ಮನೆಯೊಳಗೇ ಇರುವಂತೆ ಜನರಿಗೆ ಸೂಚಿಸಲಾಗಿದೆ. ಮಂಗಳವಾರ ರಾತ್ರಿ ಈ ವಲಯದ ಉಷ್ಣತೆ ಪಾತಾಳಕ್ಕೆ ಕುಸಿದಿದೆ. ಒಂದು ತಲೆಮಾರಿನ ಅವಧಿಯಲ್ಲಿ ಇದು ಅಮೆರಿಕದ ಅತ್ಯಂತ ಶೀತಲ ಚಳಿಗಾಲವಾಗಿದೆ ಎಂದು ಹೇಳಲಾಗಿದೆ.

ಅಮೆರಿಕದ ಮೂರನೇ ಅತಿ ದೊಡ್ಡ ನಗರ ಶಿಕಾಗೊದಲ್ಲಿ ಬುಧವಾರ ಮುಂಜಾನೆಯ ಉಷ್ಣತೆ ಮೈನಸ್ 30 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಆದರೆ, ಕುಳಿರ್ಗಾಳಿಯಿಂದಾಗಿ ಅಲ್ಲಿ ಮೈನಸ್ 46 ಡಿಗ್ರಿ ಸೆಲ್ಸಿಯಸ್ ಉಷ್ಣತೆಯ ಅನುಭವವಾಯಿತು. ಅದು ಶೀತಲ ಖಂಡ ಅಂಟಾರ್ಕ್ಟಿಕದ ಕೆಲವು ಭಾಗಗಳಿಗಿಂತಲೂ ತಂಪಾಗಿತ್ತು.

ವಿಮಾನ, ರೈಲು, ಅಂಚೆ ಸ್ಥಗಿತ

ಶಿಕಾಗೊದ ಎರಡು ಪ್ರಮುಖ ವಿಮಾನ ನಿಲ್ದಾಣಗಳಲ್ಲಿ 1,500ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಲಾಯಿತು. ರೈಲು ಯಾನ ಸಂಸ್ಥೆ ‘ಆ್ಯಮ್‌ಟ್ರಾಕ್’ ತನ್ನ ಶಿಕಾಗೊ ಕೇಂದ್ರದಿಂದ ಹೊರಡುವ ರೈಲು ಸೇವೆಗಳನ್ನು ರದ್ದುಗೊಳಿಸಿದೆ.

ಹವಾಮಾನ ಪರಿಸ್ಥಿತಿ ಏನೇ ಇದ್ದರೂ ಪತ್ರಗಳನ್ನು ವಿತರಣೆ ಮಾಡುವ ಬದ್ಧತೆಯನ್ನು ಹೊಂದಿರುವ ಅಮೆರಿಕ ಅಂಚೆ ಸೇವೆಯು, ಇಂಡಿಯಾನ, ಮಿಶಿಗನ್, ಇಲಿನಾಯಿಸ್, ಓಹಿಯೊ, ಡಕೋಟ ರಾಜ್ಯಗಳು ಮತ್ತು ನೆಬ್ರಸ್ಕ ರಾಜ್ಯಗಳ ಕೆಲವು ಭಾಗಗಳಲ್ಲಿ ಪತ್ರ ಬಟವಾಡೆಯನ್ನು ಸ್ಥಗಿತಗೊಳಿಸಿದೆ.

ಭಯಾನಕ ಚಳಿಗೆ ಏನು ಕಾರಣ?

 ಧ್ರುವ ಸುಳಿ (ಪೋಲಾರ್ ವೊರ್ಟೆಕ್ಸ್)ಯಲ್ಲಿರುವ ಆರ್ಕ್‌ಟಿಕ್ ಗಾಳಿಯು ಸಾಮಾನ್ಯವಾಗಿ ಉತ್ತರ ಧ್ರುವವನ್ನು ಆವರಿಸುತ್ತದೆ. ಆದರೆ, ಈ ಬಾರಿ ಧ್ರುವ ಸುಳಿಯಿಂದ ತಪ್ಪಿಸಿಕೊಂಡಿರುವ ಗಾಳಿಯು ಅಮೆರಿಕದ ಕೆಲವು ಭಾಗಗಳಲ್ಲಿ ಸುತ್ತಾಡುತ್ತಿರುವುದು ಈ ಭಯಾನಕ ಚಳಿಗೆ ಕಾರಣವಾಗಿದೆ.

‘‘ದಾಖಲೆ ಪ್ರಮಾಣದ ಆರ್ಕ್‌ಟಿಕ್ ಗಾಳಿಯು ಮುಂದಿನ ಹಲವು ದಿನಗಳ ಕಾಲ ಮಧ್ಯ ಮತ್ತು ಪೂರ್ವ ಅಮೆರಿಕದ ಮೇಲೆ ಸುಳಿದಾಡುತ್ತಿರುತ್ತದೆ’’ ಎಂದು ರಾಷ್ಟ್ರೀಯ ಹವಾಮಾನ ಇಲಾಖೆ ತಿಳಿಸಿದೆ.

ಜೀವಕ್ಕೆ ಬೆದರಿಕೆಯಾಗಿರುವ ಚಳಿ

ತೀವ್ರ ಚಳಿಯು ಜೀವಕ್ಕೆ ಬೆದರಿಕೆಯಾಗಿದೆ ಎಂಬುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಅದೇ ವೇಳೆ, ಇಲಿನಾಯಿಸ್, ಮಿಶಿಗನ್ ಮತ್ತು ವಿಸ್ಕೋನ್ಸಿನ್ ರಾಜ್ಯಗಳು ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿವೆ.

ವಯೋವೃದ್ಧರು ಮುಂತಾದ ಅಸಹಾಯಕ ಜನರಿಗಾಗಿ ಬೆಚ್ಚಗಿನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಹಾಗೂ ಮನೆಯಿಲ್ಲದವರಿಗಾಗಿ ಆಶ್ರಯಧಾಮಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News