ಮಿಥಾಲಿ ರಾಜ್ 200 ಏಕದಿನ ಕ್ರಿಕೆಟ್ ಆಡಿದ ಮೊದಲ ಆಟಗಾರ್ತಿ

Update: 2019-02-01 08:09 GMT

ಹ್ಯಾಮಿಲ್ಟನ್, ಫೆ.1: ಭಾರತ ನಾಯಕಿ ಮಿಥಾಲಿ ರಾಜ್ ಶುಕ್ರವಾರ 200 ಏಕದಿನ ಪಂದ್ಯಗಳನ್ನು ಆಡಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ತನ್ನ ಯಶಸ್ವಿ ವೃತ್ತಿಜೀವನದಲ್ಲಿ ಮತ್ತೊಂದು ಸಾಧನೆಯ ಮೈಲುಗಲ್ಲು ಸ್ಥಾಪಿಸಿದ್ದಾರೆ.

36ರ ಹರೆಯದ ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 51.33ರ ಸರಾಸರಿಯಲ್ಲಿ ಏಳು ಶತಕಗಳ ಸಹಿತ 6,622 ರನ್ ಗಳಿಸಿದ್ದಾರೆ. ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

 ನ್ಯೂಝಿಲೆಂಡ್ ವಿರುದ್ಧ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಮಿಥಾಲಿ ತನ್ನ 200ನೇ ಪಂದ್ಯ ಆಡಿದ್ದಾರೆ. ಆದರೆ, ಅವರು 28 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದ್ದಾರೆ. ಭಾರತ ಕೇವಲ 149 ರನ್‌ಗೆ ಆಲೌಟಾಗಿದೆ.

ಮಿಥಾಲಿ 2ನೇ ಏಕದಿನ ಪಂದ್ಯದಲ್ಲಿ ಔಟಾಗದೆ 63 ರನ್ ಗಳಿಸಿ ಭಾರತಕ್ಕೆ ಸರಣಿಯಲ್ಲಿ 2-0 ಮುನ್ನಡೆ ಒದಗಿಸಿಕೊಟ್ಟಿದ್ದಾರೆ.

ಮಿಥಾಲಿ 1999ರಲ್ಲಿ ಏಕದಿನ ಕ್ರಿಕೆಟಿಗೆ ಕಾಲಿಟ್ಟಿದ್ದರು. ಭಾರತ ಆಡಿರುವ 263 ಏಕದಿನ ಪಂದ್ಯಗಳಲ್ಲಿ ಮಿಥಾಲಿ ಬರೋಬ್ಬರಿ 200 ಪಂದ್ಯಗಳನ್ನು ಆಡಿದ್ದಾರೆ. ಮಿಥಾಲಿ 85 ಟಿ-20 ಹಾಗೂ 10 ಟೆಸ್ಟ್ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ.

ಮಿಥಾಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ಆಡುತ್ತಿರುವ ಏಕೈಕ ಆಟಗಾರ್ತಿ. ಸಚಿನ್ ತೆಂಡುಲ್ಕರ್, ಸನತ್ ಜಯಸೂರ್ಯ ಹಾಗೂ ಜಾವೆದ್ ಮಿಯಾಂದಾದ್ ಬಳಿಕ ಈ ಸಾಧನೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News