ಕ್ಯಾನ್ಸರ್ ತಡೆಯುವ ನೆಲ್ಲಿಕಾಯಿಯ ಆರೋಗ್ಯ ಲಾಭಗಳು ಒಂದೆರಡಲ್ಲ

Update: 2019-02-02 17:49 GMT

ನೆಲ್ಲಿಕಾಯಿಯನ್ನು ಹೆಚ್ಚಿನವರು ಕೆಮ್ಮು ಮತ್ತು ಶೀತದಿಂದ ಪಾರಾಗಲು,ತಲೆಗೂದಲಿನ ಆರೋಗ್ಯವನ್ನು ಹೆಚ್ಚಿಸಲು ತಿನ್ನುತ್ತಾರೆ. ಆದರೆ ಇದು ಇನ್ನೂ ಹೆಚ್ಚಿನ ಆರೋಗ್ಯಲಾಭಗಳನ್ನು ಹೊಂದಿದ್ದು,ಹಾಗೆಯೇ ಹಸಿಯಾಗಿ ಅಥವಾ ಒಣಗಿಸಿಯೂ ತಿನ್ನಬಹುದು.

ಆಯುರ್ವೇದದಲ್ಲಿ ಸಾಮಾನ್ಯ ಕಾಯಿಲೆಗಳನ್ನು ತಡೆಯಲು ನೆಲ್ಲಿಯನ್ನು ಬಳಸಲಾಗುತ್ತದೆ ಮತ್ತು ಅದರ ರಸವು ವಾತ,ಪಿತ್ತ ಮತ್ತು ಕಫ ಈ ಮೂರು ದೋಷಗಳನ್ನು ಸಮತೋಲನದಲ್ಲಿಡುತ್ತದೆ. ಇಂತಹ ನೆಲ್ಲಿಯು ನೀಡುವ ಕೆಲವು ಆರೋಗ್ಯಲಾಭಗಳು ಇಲ್ಲಿವೆ...

►ನಂಜನ್ನು ನಿವಾರಿಸಲು ನೆರವಾಗುತ್ತದೆ

ನೆಲ್ಲಿಯಲ್ಲಿ ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳು ನಂಜುಗಳನ್ನು ಹೊರಕ್ಕೆ ಹಾಕಲು ನೆರವಾಗುತ್ತವೆ ಮತ್ತು ಶರೀರಕ್ಕೆ ಪೋಷಣೆ ನೀಡುವ ಜೊತೆಗೆ ಅದರ ನೈಸರ್ಗಿಕ ರೋಗ ನಿರೋಧಕ ವ್ಯವಸ್ಥೆಗೆ ರಕ್ಷಣೆಯನು ್ನನೀಡುತ್ತವೆ. ಶರೀರವನ್ನು ನಂಜುಮುಕ್ತವಾಗಿಸಲು ನೆಲ್ಲಿರಸವನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ನೆನಪಿರಲಿ,ನೆಲ್ಲಿರಸವನ್ನು ಅತಿಯಾದ ಪ್ರಮಾಣದಲ್ಲಿ ಸೇವಿಸಿದರೆ ಅದರಲ್ಲಿರುವ ಸಿ ವಿಟಾಮಿನ್‌ನಿಂದಾಗಿ ಆಮ್ಲೀಯತೆಯ ಸಮಸ್ಯೆ ಯುಂಟಾಗುತ್ತದೆ.

►ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸುತ್ತದೆ

ಶರೀರದಲ್ಲಿಯ ಹೆಚ್ಚುವರಿ ತ್ಯಾಜ್ಯ ಮತ್ತು ವಿಷವಸ್ತುಗಳನ್ನು ನಿವಾರಿಸುವಲ್ಲಿ ಯಕೃತ್ತು ಪ್ರಮುಖ ಪಾತ್ರವನ್ನು ವಹಿಸುತ್ತದೆ. ನೆಲ್ಲಿಯು ಯಕೃತ್ತಿಗೆ ಉಂಟಾಗುವ ಹಾನಿಯನ್ನು ತಡೆಯುತ್ತದೆ.

►ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ

ನೆಲ್ಲಿಯಲ್ಲಿ ಸಾಕಷ್ಟು ನಾರು ಇರುವುದರಿಂದ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಹೀಗಾಗಿ ಪದೇ ಪದೇ ಏನನ್ನಾದರೂ ತಿನ್ನುತ್ತಿರಬೇಕೆಂಬ ತುಡಿತವುಂಟಾಗುವುದಿಲ್ಲ. ಅದು ಚಯಾಪಚಯ ವೇಗವನ್ನು ಹೆಚ್ಚಿಸುವುದರಿಂದ ಶರೀರದ ತೂಕ ಇಳಿಯುತ್ತದೆ ಮತ್ತು ಹೊಸ ಶಕ್ತಿಯು ಶರೀರಕ್ಕೆ ದೊರೆಯುತ್ತದೆ.

►ಕಾಮಾಲೆಗೆ ಚಿಕಿತ್ಸೆ ನೀಡುತ್ತದೆ

ನೆಲ್ಲಿಯಲ್ಲಿರುವ ಔಷಧೀಯ ಗುಣಗಳು ಕಾಮಾಲೆಯ ಪರಿಣಾಮವನ್ನು ತಗ್ಗಿಸುತ್ತವೆ. ಆಯುರ್ವೇದದಲ್ಲಿ ಕಾಮಾಲೆ ರೋಗಕ್ಕೆ ಚಿಕಿತ್ಸೆ ನೀಡಲು ನೆಲ್ಲಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

►ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ನೆಲ್ಲಿಯು ರಕ್ತದಲ್ಲಿಯ ಕೊಲೆಸ್ಟಾಲ್ ಮಟ್ಟಗಳನ್ನು ತಗ್ಗಿಸುವ ಮೂಲಕ ಹೃದ್ರೋಗದ ಮತ್ತು ರಕ್ತನಾಳಗಳಲ್ಲಿ ಕೊಬ್ಬು ಶೇಖರಗೊಳ್ಳುವ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಅದು ಒಳ್ಳೆಯ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

►ಪಚನ ಕ್ರಿಯೆಗೆ ನೆರವಾಗುತ್ತದೆ

ನೆಲ್ಲಿಯು ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಹೊಟ್ಟೆ ಹುಣ್ಣುಗಳು ,ಗ್ಯಾಸ್ಟ್ರಿಕ್ ಹುಣ್ಣುಗಳನ್ನು ತಡೆಯುವ ಮೂಲಕ ಜಠರಕ್ಕೆ ರಕ್ಷಣೆ ನೀಡುತ್ತದೆ. ಊಟದ ಬಳಿಕ ನೆಲ್ಲಿಯನ್ನು ತಿನ್ನುವುದರಿಂದ ಅಥವಾ ಅದರ ರಸವನ್ನು ಸೇವಿಸುವುದು ಪಚನಕ್ರಿಯೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

►ಗ್ರಹಣ ಶಕ್ತಿಗೆ ಪೂರಕ

ನೆಲ್ಲಿಯು ಮಿದುಳಿನ ಕಾರ್ಯನಿರ್ವಹಣೆಯ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ನೆಲ್ಲಿರಸವು ಜ್ಞಾಪಕ ಶಕ್ತಿಯನ್ನು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೆಚ್ಚಿಸುತ್ತದೆ.

►ಮಲಬದ್ಧತೆಯನ್ನು ತಡೆಯುತ್ತದೆ

ತನ್ನಲ್ಲಿರುವ ವಿರೇಚಕ ಗುಣಗಳು ಮತ್ತು ನಾರಿನಿಂದಾಗಿ ನೆಲ್ಲಿಯು ಮಲಬದ್ಧತೆಯನ್ನು ತಡೆಯುತ್ತದೆ.

►ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ

ನೆಲ್ಲಿಯು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ನೆಲ್ಲಿರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಕ್ಯಾನ್ಸರ್ ಶೇ.60ರಷ್ಟು ಕಡಿಮೆಯಾಗುತ್ತದೆ ಎನ್ನುವುದನ್ನು ಸಂಶೋಧನೆಗಳು ಬೆಳಕಿಗೆ ತಂದಿವೆ. ಅದರಲ್ಲಿರುವ ಫೈಟೊಕೆಮಿಕಲ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳು ಶ್ವಾಸಕೋಶ,ದೊಡ್ಡಕರುಳು,ಯಕೃತ್ತು,ಸ್ತನ ಮತ್ತು ಅಂಡಾಶಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಎಂದೂ ಅಧ್ಯಯನಗಳು ಬೆಟ್ಟುಮಾಡಿವೆ.

►ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನೆಲ್ಲಿಯಲ್ಲಿರುವ ಉತ್ಕರ್ಷಣ ನಿರೋಧಕವಾಗಿರುವ ವಿಟಾಮಿನ್ ಸಿ ನಿರೋಧಕ ಶಕ್ತಿಗೆ ಹಾನಿಯನ್ನುಂಟು ಮಾಡುವ ಫ್ರೀ ರ್ಯಾಡಿಕಲ್‌ಗಳ ವಿರುದ್ಧ ಹೋರಾಡುತ್ತದೆ. ನೆಲ್ಲಿ ಮತ್ತು ನೆಲ್ಲಿರಸದ ಸೇವನೆಯು ಶೀತ,ಕೆಮ್ಮು ಮತ್ತು ಗಂಟಲು ಕೆರೆತಗಳಿಗೆ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತದೆ.

►ನೋವು ಮತ್ತು ಉರಿಯೂತವನ್ನು ತಗ್ಗಿಸುತ್ತದೆ

ಉರಿಯೂತವು ಸಂಧಿವಾತ,ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ಹೆಚ್ಚಿನ ದೀರ್ಘಕಾಲಿಕ ಕಾಯಿಲೆಗಳಿಗೆ ಮೂಲಕಾರಣವಾಗಿದೆ. ನೆಲ್ಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ.

►ಮಧುಮೇಹವನ್ನು ನಿಯಂತ್ರಿಸುತ್ತದೆ

ನೆಲ್ಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ನಾರು ರಕ್ತದಲ್ಲಿಯ ಸಹಜ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತವೆ. ನಾರು ರಕ್ತದಲ್ಲಿ ಸಕ್ಕರೆಯ ಹೀರುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಸಕ್ಕರೆ ಮಟ್ಟ ಹೆಚ್ಚುವುದನ್ನು ತಡೆಯುತ್ತದೆ. ಇದು ಮಧುಮೇಹ ಮತ್ತು ಅದರೊಂದಿಗೆ ಗುರುತಿಸಿಕೊಂಡಿರುವ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

►ಮೂಳೆಗಳನ್ನು ಸದೃಢಗೊಳಿಸುತ್ತದೆ

ನೆಲ್ಲಿಯು ಕ್ಯಾಲ್ಸಿಯಂ ಅನ್ನು ಸಮೃದ್ಧವಾಗಿ ಹೊಂದಿರುವುದರಿಂದ ಅಸ್ಥಿರಂಧ್ರತೆ ಮತ್ತು ಸಂಧಿವಾತದ ಅಪಾಯಗಳನ್ನು ಕಡಿಮೆಗೊಳಿಸುತ್ತದೆ. ಸದೃಢ ಮೂಳೆಗಳಿಗಾಗಿ ಕ್ಯಾಲ್ಸಿಯಂ ಅಗತ್ಯವಾಗಿದೆ.

►ತ್ವಚೆ ಮತ್ತು ತಲೆಗೂದಲ ಆರೋಗ್ಯವನ್ನು ಹೆಚ್ಚಿಸುತ್ತದೆ

ನೆಲ್ಲಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ತ್ವಚೆಯ ಆರೋಗ್ಯವನ್ನು ಹೆಚ್ಚಿಸುವ ಮೂಲಕ ವಯಸ್ಸಾಗುವುದನ್ನು ನಿಧಾನಗೊಳಿಸುತ್ತವೆ. ನೆಲ್ಲಿಯ ರಸವು ತ್ವಚೆಗೆ ಸೌಂದರ್ಯ ಮತ್ತು ಸ್ಥಿತಿಸ್ಥಾಪಕತ್ವ ಗುಣವನ್ನು ನೀಡುವ ಪ್ರೋಟಿನ್ ಆಗಿರುವ ಕೊಲಾಜೆನ್‌ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕೂದಲ ಬೆಳವಣಿಗೆಗೆ,ಕೂದಲ ಉದುರುವಿಕೆಯನ್ನು ತಡೆಯಲು ನೆರವಾಗುವ ನೆಲ್ಲಿಯು ವಿಟಾಮಿನ್ ಇ ಮತ್ತು ಪ್ರೋಟಿನ್‌ಗಳ ಸಮೃದ್ಧ ಮೂಲವಾಗಿರುವುದರಿಂದ ಕೂದಲುಗಳನ್ನು ಬೇರುಮಟ್ಟದಿಂದ ಸದೃಢಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News