ಅನುಕ್ತ: ಸುಪ್ತ ಸಾಗರದಾಚೆಗಿನ ಸತ್ಯ ಸಂಬಂಧ

Update: 2019-02-02 18:39 GMT

ಟ್ರೈಲರ್‌ನಿಂದಲೇ ದೆವ್ವ, ಭೂತದ ಕತೆ ಹೇಳುವ ಕರಾವಳಿಯ ಚಿತ್ರ ಎಂಬ ಕಲ್ಪನೆ ಮೂಡಿಸಿದ್ದ ಅನುಕ್ತ, ಆ ಕಲ್ಪನೆಗೆ ಅರ್ಧ ಮಾತ್ರವೇ ನ್ಯಾಯ ನೀಡಿದೆ. ಹಾಗಂತ ‘ರಂಗಿತರಂಗ’ ಚಿತ್ರಕ್ಕೆ ಹೋಲಿಕೆ ಮಾಡಲು ಹೋದರೆ ಅಷ್ಟೊಂದು ಕತೆ ಚಿತ್ರದಲ್ಲಿಲ್ಲ. ಹಾಗಾಗಿಯೇ ಆರಂಭ ಸಪ್ಪೆಯೆನಿಸುವುದು ಸಹಜ. ಆದರೆ ಮಧ್ಯಂತರದ ಬಳಿಕ ನಿರೀಕ್ಷಿಸಿರದಂಥ ಕತೆಯೊಂದು ಇರುವುದು ನಿಜ.

ಕರ್ತವ್ಯದ ಮೇಲೆ ಸದಾ ಮನೆ ಬಿಟ್ಟು ಹೊರಗಡೆ ಓಡಾಡುವ ಪೊಲೀಸ್ ತನಿಖಾಧಿಕಾರಿ ಕಾರ್ತಿಕ್. ನವ ದಾಂಪತ್ಯವಾಗಿದ್ದರೂ ಪತಿಯೊಂದಿಗೆ ಹೆಚ್ಚು ಸಮಯ ಕಳೆಯಲಾಗದ ಕೊರಗಿನಲ್ಲಿರುವ ಆತನ ಪತ್ನಿ ತನ್ವಿ. ಮನೆಯೊಳಗೆ ಆಕೆಯ ಒಂಟಿತನ, ಭಯ.. ಇವನ್ನು ಮಾತ್ರ ಇಟ್ಟುಕೊಂಡು ಮಧ್ಯಂತರದ ತನಕ ಕತೆ ಸಾಗುತ್ತದೆ. ಅಲ್ಲಿಗೆ ಡಿಪ್ರಶೆನ್‌ಗೆ ಒಳಗಾಗಿ ಆಸ್ಪತ್ರೆ ಸೇರುವ ತನ್ವಿಯೊಂದಿಗೆ ಪ್ರೇಕ್ಷಕರ ತನುಮನವೂ ಡಿಪ್ರೆಶನ್‌ಗೆ ಹೊರಳಿರುತ್ತದೆ.

ಚಿತ್ರದ ಆರಂಭದಲ್ಲಿ ಕರಾವಳಿ ಭಾಗದಲ್ಲಿ ನಡೆದ ಕೊಲೆಯೊಂದನ್ನು ತೋರಿಸಲಾಗಿರುತ್ತದೆ. ಅದರ ತನಿಖೆಗೆಂದು ಹೋಗುವ ಕಾರ್ತಿಕ್ ಜೊತೆಗೆ ತನ್ವಿ ಕೂಡ ಜೊತೆಯಾಗುತ್ತಾಳೆ. ಅಲ್ಲಿಂದ ಹೊಸ ಕತೆಯೊಂದು ಶುರುವಾಗುತ್ತದೆ. ಕರಾವಳಿಯಲ್ಲಿರುವ ಗುತ್ತಿನ ಮನೆಗೂ ತನಿಖಾಧಿಕಾರಿ ಕಾರ್ತಿಕ್‌ಗೂ ರಕ್ತ ಸಂಬಂಧವಿದೆ ಎನ್ನುವ ವಿಚಾರ ಬಯಲಾಗುತ್ತದೆ. ಆ ಸಂಬಂಧ ಏನು? ಕಾರ್ತಿಕ್ ಬೇರೆ ಮಂದಿಯ ದತ್ತುಪುತ್ರನಾಗಲು ಕಾರಣವೇನು? ಗುತ್ತಿನ ಮನೆಯಲ್ಲಿ ನಡೆದಂಥ ಕೊಲೆಗಳ ಹಿಂದಿನ ಕೈವಾಡ ಯಾರದು ಎನ್ನುವುದೇ ಚಿತ್ರದ ಒಳಗಿರುವ ಹೂರಣ.

ಚಿತ್ರದ ಆರಂಭದಲ್ಲಿ ತೋರಿಸಿದ ಕೊಲೆಯ ಬಳಿಕದ ದೃಶ್ಯಗಳು ಕತೆಗೆ ಸಂಬಂಧವಿರದಂತೆ ಮುಂದುವರಿಯುವ ಕಾರಣ ಮೊದಲಾರ್ಧ ನೀರಸವೆನಿಸಬಹುದು. ಕಣ್ಣಲ್ಲೇ ನಟಿಸುವ ತನ್ವಿ ಪಾತ್ರಧಾರಿ ಸಂಗೀತಾ ಭಟ್ ಅವರ ಬಿಚ್ಚುಗೂದಲು ಕೂಡ ಚಿತ್ರಕ್ಕೆ ಹಾರರ್ ಭಾವ ತರುವಲ್ಲಿ ಯಶಸ್ವಿಯಾಗಿದೆ! ಕಾರ್ತಿಕ್ ಹೆಸರಿನ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಕಾರ್ತಿಕ್ ಅತ್ತಾವರ ಪೊಲೀಸ್ ಹಾವಭಾವಗಳನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಆದರೆ ಆರಡಿ ಎತ್ತರವಿದ್ದರೂ ಅವರ ಹೊರಮೈ ಲುಕ್‌ನಲ್ಲಿ ಒಬ್ಬ ಲವ್ವರ್‌ಬಾಯ್ ಮಾತ್ರ ಕಾಣಿಸುತ್ತಾನೆ. ದ್ವಿತೀಯಾರ್ಧದಲ್ಲಿ ಗುತ್ತಿನ ಮನೆ ಪ್ರವೇಶದ ದೃಶ್ಯಗಳು ಆಪ್ತಮಿತ್ರದ ಸನ್ನಿವೇಶಗಳನ್ನು ನೆನಪಿಸುತ್ತದೆ. ಆದರೆ ಇಲ್ಲಿ ದೈವ, ದೆವ್ವವನ್ನು ಬರೀ ಭ್ರಮೆಗೆ ಮಾತ್ರ ಬಳಸಿದಂತಿರುವುದು ಪ್ರೇಕ್ಷಕರ ಕುತೂಹಲಕ್ಕೆ ಹಿನ್ನಡೆ ನೀಡಿದಂತಾಗುತ್ತದೆ.

ಗುತ್ತಿನ ಮನೆಯವರ ಗತ್ತನ್ನು ಖಳನಟ ಸಂಪತ್‌ರಾಜ್ ತಮ್ಮದೇ ಖದರ್‌ನಲ್ಲಿ ನಿಭಾಯಿಸಿದ್ದಾರೆ. ಕೆ. ಎಸ್. ಶ್ರೀಧರ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಅಷ್ಟೇ ಆಕರ್ಷಕವಾಗಿ ನಿಭಾಯಿಸಿದ್ದಾರೆ. ಮನೆ ಕೆಲಸದ ಮೇರಿಯಾಗಿ ನಟಿಸಿರುವ ಉಷಾ ಭಂಡಾರಿ ಸಾಯುವ ಪಾತ್ರದಲ್ಲಿ ಜೀವಿಸಿದ್ದಾರೆ! ನೊಬಿನ್ ಪೌಲ್ ಹಿನ್ನೆಲೆ ಸಂಗೀತ ಅದ್ಭುತ. ಮಧ್ಯೆ ಮಧ್ಯೆ ಮರುಕಳಿಸುವ ಭೂತಕೋಲದ ನಾಗಸ್ವರ ಮೈನವಿರೇಳುವಂತೆ ಮಾಡುತ್ತದೆ.

ಒಂದು ಹಾಡಿನಲ್ಲಿ ಮಾತ್ರ ಕಾಣಿಸಿಕೊಂಡರೂ ತಾವೇ ಮೈಮರೆತು ಹಾಡಿರುವಂತೆ ಎಂ.ಕೆ. ಮಠ ಕಾಣಿಸಿಕೊಂಡಿದ್ದಾರೆ. ಚಿತ್ರ ಮೇಕಿಂಗ್ ಮೂಲಕ ಅಶ್ವಥ್ ಸ್ಯಾಮ್ಯುಯೆಲ್ ಗಮನ ಸೆಳೆದಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಸೊಗಸಾಗಿದೆ. ಮೊದಲಾರ್ಧದ ಮೇಲೆ ನಿರೀಕ್ಷೆ ಇರಿಸದೇ ಚಿತ್ರ ನೋಡಿದರೆ ಮೆಚ್ಚುವವರ ಸಂಖ್ಯೆ ಹೆಚ್ಚಬಹುದು.


ತಾರಾಗಣ: ಕಾರ್ತಿಕ್ ಅತ್ತಾವರ, ಸಂಗೀತಾ ಭಟ್
ನಿರ್ದೇಶನ: ಅಶ್ವಥ್ ಸಾಮ್ಯುಯೆಲ್
ನಿರ್ಮಾಣ: ಹರೀಶ್ ಬಂಗೇರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News