‘ಅಸಮ್ಮತಿ’ ಎಂಬ ಪದದ ಘನತೆಗೆ ಕುಂದು ತಂದ ಖರ್ಗೆ: ಜೇಟ್ಲಿ ಟೀಕೆ

Update: 2019-02-03 14:24 GMT

ಹೊಸದಿಲ್ಲಿ, ಫೆ.3: ಸಿಬಿಐ ನಿರ್ದೇಶಕರ ನೇಮಕ ನಡೆಸುವ ಸಮಿತಿಯ ಎಲ್ಲಾ ನಿರ್ಧಾರದ ಬಗ್ಗೆ ಸದಾ ಅಸಮ್ಮತಿ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ‘ಅಸಮ್ಮತಿ’ ಎಂಬ ಪದದ ಮೌಲ್ಯ ಮತ್ತು ಘನತೆಗೆ ಕುಂದು ತಂದಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಟೀಕಿಸಿದ್ದಾರೆ. ಸಿಬಿಐ ನಿರ್ದೇಶಕರ ನೇಮಕ ಹಾಗೂ ವರ್ಗಾವಣೆಯನ್ನು ನಿರ್ಧರಿಸುವ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಖರ್ಗೆಯವರ ಅಸಮ್ಮತಿ ನಿರಂತರವಾಗಿರುತ್ತದೆ. ಸಿಬಿಐ ನಿರ್ದೇಶಕರಾಗಿ ರಿಶಿ ಕುಮಾರ್ ಶುಕ್ಲರ ನೇಮಕವನ್ನು ಮತ್ತೆ ಅವರು ವಿರೋಧಿಸಿದ್ದಾರೆ. ಈ ಹಿಂದೆ ಅಲೋಕ್ ವರ್ಮರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಿಸಿದಾಗ ಅವರು ವಿರೋಧಿಸಿದರು. ಅವರನ್ನು ವರ್ಗಾಯಿಸಿದಾಗಲೂ ವಿರೋಧಿಸಿದರು. ಈಗ ಶುಕ್ಲರನ್ನು ನೇಮಿಸುವಾಗಲೂ ವಿರೋಧಿಸಿದ್ದಾರೆ ಎಂದು ಫೇಸ್‌ಬುಕ್‌ನ ಬರಹದಲ್ಲಿ ತಿಳಿಸಿದ್ದಾರೆ.

 ರಾಜಕೀಯ ಕಾರಣಗಳಿಗಾಗಿ ಅಲೋಕ್‌ ವರ್ಮರ ವರ್ಗಾವಣೆಯನ್ನು ಖರ್ಗೆ ವಿರೋಧಿಸಿದ್ದಾರೆ. ವರ್ಮರನ್ನು ಬೆಂಬಲಿಸಿ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ಆದ್ದರಿಂದ ಅವರು ಸಮಿತಿಯಿಂದ ಹಿಂದೆ ಸರಿಯಬೇಕಿತ್ತು ಎಂದು ಜೇಟ್ಲಿ ಹೇಳಿದ್ದಾರೆ. ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡಲು ಸೇವಾ ಜ್ಯೇಷ್ಠತೆ ಏಕೈಕ ಮಾನದಂಡವಾಗದು ಎಂದು ಖರ್ಗೆ ಸಿಬಿಐ ನಿರ್ದೇಶಕರಾಗಿ ಶುಕ್ಲ ಆಯ್ಕೆಗೆ ಅಸಮ್ಮತಿ ಸೂಚಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥನ ಹುದ್ದೆಗೆ ಆಯ್ಕೆ ಮಾಡುವಾಗ ಸೇವಾ ಜ್ಯೇಷ್ಠತೆ, ಅನುಭವ ಮತ್ತು ಪ್ರಾಮಾಣಿಕತೆ - ಈ ಮೂರಕ್ಕೂ ಸಮಾನ ಪ್ರಾಧಾನ್ಯತೆ ನೀಡಬೇಕು ಎಂಬುದು ಖರ್ಗೆಯವರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News