ಉದ್ಯೋಗ ಖಾತರಿ ಯೋಜನೆ ನಿಷ್ಕ್ರಿಯ: ಬಿಜೆಪಿ ಆಡಳಿತ ರಾಜ್ಯದಲ್ಲಿ ರೈತರ ಆಕ್ರೋಶ
ಮುಂಬೈ, ಫೆ.3: ಶುಕ್ರವಾರ ವಿತ್ತ ಸಚಿವ ಪಿಯೂಷ್ ಗೋಯೆಲ್ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಎಂನರೇಗ)ಗೆ ಕಳೆದ ವರ್ಷಕ್ಕಿಂತ 5 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ಘೋಷಿಸಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಈ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಮಹಾರಾಷ್ಟ್ರದ ಬರಪೀಡಿತ ಪ್ರದೇಶವಾಗಿರುವ ಮರಾಠವಾಡದ ಪ್ರಭಾನಿ ಜಿಲ್ಲೆಯಲ್ಲಿ ಕಳೆದ ವಾರ ಉದ್ಯೋಗಕ್ಕೆ ಆಗ್ರಹಿಸಿ ಸ್ಥಳೀಯರು ಮೂರು ದಿನ ಪ್ರತಿಭಟನೆ ನಡೆಸಿದ್ದರು. ಪ್ರಭಾನಿ ಜಿಲ್ಲೆಯಲ್ಲಿ ಯಾರಿಗೂ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಸಿಗುತ್ತಿಲ್ಲ ಅಥವಾ ಸಾಲ ಕೂಡಾ ಸಿಗುತ್ತಿಲ್ಲ. ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮರಾಠವಾಡ ಸೇರಿದಂತೆ ಎಲ್ಲೆಡೆ ನೀರಿನ ಕೊರತೆಯಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಬರಪರಿಹಾರ ನಿಧಿಯಿಂದ 7 ಸಾವಿರ ಕೋಟಿ ರೂ. ನೀಡುವಂತೆ ಮಹಾರಾಷ್ಟ್ರ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಮಂಗಳವಾರ ಕೇಂದ್ರ ಸರಕಾರ 4,700 ಕೋಟಿ ರೂ. ನೆರವು ನೀಡಿದೆ.
ಎಂನರೇಗಾ ಯೋಜನೆಯಡಿ ರಾಜ್ಯದಲ್ಲಿ 2.15 ಕೋಟಿ ಜನತೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇವರಲ್ಲಿ ಕೇವಲ ಶೇ.25ರಷ್ಟು ಮಂದಿ ಸಕ್ರಿಯವಾಗಿ ಉದ್ಯೋಗ ನಿರ್ವಹಿಸುತ್ತಿದ್ದಾರೆ. ಒಂದು ಕುಟುಂಬಕ್ಕೆ ಸರಾಸರಿ ಉದ್ಯೋಗದ ದಿನ 100 ಎಂದು ನಿಗದಿಯಾಗಿದ್ದರೂ ಈ ಪ್ರಮಾಣ 49ರಿಂದ 41 ದಿನಕ್ಕೆ ಇಳಿದಿದೆ. ಅಲ್ಲದೆ 100 ದಿನದ ಖಾತರಿ ಉದ್ಯೋಗ ನಿರ್ವಹಿಸಿದ ಕುಟುಂಬದ ಸಂಖ್ಯೆ ಕೇವಲ 1.5 ಲಕ್ಷ ಎಂದು ಅಂಕಿಅಂಶ ತಿಳಿಸಿದೆ. ಈ ಅಂಕಿಅಂಶದ ಗಂಭೀರತೆಯ ಬಗ್ಗೆ ಪರಿಶೀಲಿಸುವುದಾಗಿ ಸರಕಾರ ತಿಳಿಸಿದೆ. ಸರಕಾರದ ಅಸಡ್ಡೆಯಿಂದ ಈ ಸಮಸ್ಯೆ ಉದ್ಭವಿಸಿದ್ದರೆ ಈ ಬಗ್ಗೆ ತಕ್ಷಣ ಗಮನ ಹರಿಸಲಾಗುವುದು ಎಂದು ಮಹಾರಾಷ್ಟ್ರದ ವಿತ್ತ ಸಚಿವ ಸುಧೀರ್ ಮುಂಗಂಟಿವಾರ್ ತಿಳಿಸಿದ್ದಾರೆ. ಆದರೆ ನಿರುದ್ಯೋಗಿಗಳ ಪ್ರಮಾಣ ರಾಜ್ಯದಲ್ಲಿ ಹೆಚ್ಚಿರುವುದಾಗಿ ಮಹಾರಾಷ್ಟ್ರದ ಕಾರ್ಮಿಕ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ.
2016ರಲ್ಲಿ ರಾಜ್ಯದಲ್ಲಿ 33.5 ಲಕ್ಷ ನಿರುದ್ಯೋಗಿಗಳಿದ್ದರೆ 2018ರಲ್ಲಿ(ಸೆಪ್ಟೆಂಬರ್ ವರೆಗೆ) ಈ ಪ್ರಮಾಣ 42.2 ಲಕ್ಷಕ್ಕೆ ಹೆಚ್ಚಿದೆ ಎಂದು ಅಂಕಿಅಂಶ ತಿಳಿಸಿದೆ. ಈ ಬಗ್ಗೆ ವಿಪಕ್ಷಗಳು ಸರಕಾರವನ್ನು ಕಟುವಾಗಿ ಟೀಕಿಸಿವೆ. ಮಹಾರಾಷ್ಟ್ರದಲ್ಲಿ ಈಗ ತೀವ್ರ ಬರಗಾಲವಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತೀ ದಿನ ಕನಿಷ್ಟ 20 ಲಕ್ಷ ಜಾಬ್‌ಕಾರ್ಡ್ ಇರಬೇಕಿತ್ತು. ಆದರೆ ಅವರು(ರಾಜ್ಯ ಸರಕಾರ) ಜನರಿಗೆ ಉದ್ಯೋಗ ನೀಡುತ್ತಿಲ್ಲವಾದ್ದರಿಂದ ಜನತೆ ಬೇರೆ ರಾಜ್ಯಕ್ಕೆ ಗುಳೇ ಹೋಗುವ ಪರಿಸ್ಥಿತಿ ಬಂದಿದೆ ಎಂದು ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಹೇಳಿದ್ದಾರೆ.