ಪ.ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು: ರಾಜನಾಥ್ ಸಿಂಗ್

Update: 2019-02-04 16:06 GMT

ಹೊಸದಿಲ್ಲಿ,ಫೆ.4: ಬಿಜೆಪಿಯು ಸೋಮವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಹೊರಗೆ ಅವಳಿ ದಾಳಿಗಳನ್ನು ಆರಂಭಿಸಿದೆ. ರವಿವಾರ ಕೋಲ್ಕತಾದಲ್ಲಿ ಸಿಬಿಐ ಅಧಿಕಾರಿಗಳನ್ನು ತಡೆದ ರೀತಿಯು ಅಭೂತಪೂರ್ವವಾಗಿತ್ತು ಎಂದು ಗೃಹಸಚಿವ ರಾಜನಾಥ ಸಿಂಗ್ ಅವರು ಸದನದಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದರೆ,ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್ ಅವರು,ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಜೈಲಿಗೆ ಹೋಗಿದ್ದವರನ್ನು ಬ್ಯಾನರ್ಜಿ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ತೋತಾ(ಗಿಳಿ) ಸಿಬಿಐ’ ಎಂಬ ಪ್ರತಿಪಕ್ಷಗಳ ಘೋಷಣೆಗಳ ನಡುವೆಯೇ ಸಿಂಗ್ ಅವರು,ಪ.ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು ಮತ್ತು ದೇಶದ ಯಾವುದೇ ಭಾಗದಲ್ಲಿ ಸಹಜ ಸ್ಥಿತಿಯನ್ನು ಕಾಯ್ದುಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ಕೇಂದ್ರಕ್ಕಿದೆ. ಕೋಲ್ಕತಾದಲ್ಲಿ ನಡೆದಿರುವ ಘಟನೆಯು ದೇಶದ ಒಕ್ಕೂಟ ರಾಜಕೀಯ ವ್ಯವಸ್ಥೆಗೆ ಬೆದರಿಕೆಯಾಗಿದೆ ಎಂದು ಹೇಳಿದರು.

ಶಾರದಾ ಚಿಟ್‌ಫಂಡ್ ಹಗರಣದಲ್ಲಿ ತನಿಖೆಗೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬಳಿಕವೇ ಕೋಲ್ಕತಾದ ಪೊಲೀಸ್ ಮುಖ್ಯಸ್ಥ ರಾಜೀವ್ ಕುಮಾರ್ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಮತ್ತು ಅವರಿಗೆ ಹಲವಾರು ಬಾರಿ ಸಮನ್‌ಗಳನ್ನು ನೀಡಲಾಗಿತ್ತು, ಆದರೆ ಅವುಗಳಿಗೆ ಅವರು ಪ್ರತಿಕ್ರಿಯಿಸಿರಲಿಲ್ಲ ಎಂದೂ ಸಿಂಗ್ ತಿಳಿಸಿದರು.

ತಾನು ಪ.ಬಂಗಾಳದ ರಾಜ್ಯಪಾಲರಿಂದ ವರದಿಯನ್ನು ಕೇಳಿದ್ದು,ಪರಿಸ್ಥಿತಿಯನ್ನು ಯಥಾಸ್ಥಿತಿಗೆ ಮರಳಿಸಲು ತಕ್ಷಣವೇ ಕ್ರಮಗಳನ್ನು ಕೈಗೊಳ್ಳುವಂತೆ ಅವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ ಸಿಂಗ್,ತನ್ನ ಸಚಿವಾಲಯವು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದೆ ಎಂದರು.

ಕೋಲ್ಕತಾದ ಪೊಲೀಸರು ಸಿಬಿಐ ಕಚೇರಿಗಳನ್ನು ಸುತ್ತುವರಿದಿದ್ದರಿಂದ ರಾಜ್ಯ ಸಿಬಿಐ ಕಚೇರಿಗೆ ಮತ್ತು ಅಧಿಕಾರಿಗಳ ನಿವಾಸಗಳಿಗೆ ಭದ್ರತೆಯನ್ನೊದಗಿಸಲು ಕೇಂದ್ರೀಯ ಪಡೆಗಳನ್ನು ನಿಯೋಜಿಸುವಂತಾಗಿತ್ತು ಎಂದು ಸಿಂಗ್ ತಿಳಿಸಿದರು.

ದೇಶದಲ್ಲಿಯ ಐಪಿಎಸ್ ಕೇಡರ್‌ನ್ನು ನಿಯಂತ್ರಿಸುವ ಗೃಹ ಸಚಿವಾಲಯವು ಈಗ ಕೋಲ್ಕತಾದಲ್ಲಿ ಶಾರದಾ ಹಗರಣದ ತನಿಖೆಯನ್ನು ನಡೆಸುತ್ತಿರುವ ಸಿಬಿಐ ತಂಡಕ್ಕೆ ತಡೆಯನ್ನೊಡ್ಡಿದ್ದ ಕೆಲವು ಹಿರಿಯ ಅಧಿಕಾರಿಗಳ ಪಾತ್ರದ ಕುರಿತು ಪರಿಶೀಲಿಸಲಿದೆ. ರಾಜೀವ ಕುಮಾರ ಅವರ ವಿಚಾರಣೆಯನ್ನು ತಡೆಯುವ ಮೂಲಕ ಅಧಿಕಾರಿಗಳು ಸೇವಾ ನಡತೆ ನಿಯಮಗಳನ್ನು ಉ್ಲಲಂಘಿಸಿದ್ದರೇ ಎನ್ನುವುದನ್ನು ಗೃಹ ಸಚಿವಾಲಯವು ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿದವು. ರಾಜೀವ ಕುಮಾರ್ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳು ತನಗೆ ಲಭಿಸಿವೆ ಎಂದು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿರುವ ಸಿಬಿಐ,ಅವರು ಚಿಟ್‌ಫಂಡ್ ಹಗರಣದ ಸಾಕ್ಷಾಧಾರಗಳನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News