ಅಮೆರಿಕದ ಷಡ್ಯಂತ್ರಗಳಲ್ಲಿ ನಲುಗುತ್ತಿರುವ ತೈಲ ಸಮೃದ್ಧ ವೆನೆಝುವೆಲ

Update: 2019-02-04 18:45 GMT

ರಾಷ್ಟ್ರದ ಜನತೆ ಅಮೆರಿಕ ಇಂದು ಹತಾಶ ಸ್ಥಿತಿ ತಲುಪಿರುವ ರಾಷ್ಟ್ರ. ಅದು ತನ್ನ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ತಿಣುಕಾಡುತ್ತಿದೆ. ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನಿಸ್ತಾನ, ಇತ್ಯಾದಿ ಯುದ್ಧಗಳಿಂದ ಅದು ಗಳಿಸಿದ್ದಕ್ಕಿಂತಲೂ ಕಳೆದುಕೊಂಡಿದ್ದೇ ಹೆಚ್ಚು. ಅಲ್ಲಿನ ತೈಲ, ಗಣಿ ಇನ್ನಿತರ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಲ್ಲೆಲ್ಲಾ ಇದ್ದ ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳುತ್ತಿದೆ. ಟ್ರಂಪ್ ಅಧಿಕಾರಕ್ಕೆ ಏರಿದ ನಂತರವೂ ಅಮೆರಿಕ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಲಾಗುತ್ತಿಲ್ಲ. ಈಗ ಜಗತ್ತಿನ ಅತೀ ದೊಡ್ಡ ವೆನೆಝುವೆಲದ ತೈಲ ಸಂಪತ್ತಿನ ಮೇಲೆ ಹಿಡಿತ ಹೊಂದಲು ಇನ್ನಿಲ್ಲದ ಶ್ರಮಗಳನ್ನು ಹಾಕುತ್ತಿದೆ. ಆದರೆ ಅದರ ಈ ನಡೆಗಳು ಲ್ಯಾಟಿನ್ ಅಮೆರಿಕ ಸೇರಿದಂತೆ ಜಾಗತಿಕವಾಗಿ ಭಾರೀ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಸ್ವತಃ ಅಮೆರಿಕಕ್ಕೇ ಕೂಡ ಭಾರೀ ಹಾನಿಯಾಗುವ ಸಾಧ್ಯತೆ ಕಾಣುತ್ತಿದೆ.


ಹ್ಯೂಗೋ ಚವೇಝ್ ಅಧ್ಯಕ್ಷರಾದಾಗಿನಿಂದಲೂ ಜಾಗತಿಕವಾಗಿ ವೆನೆಝುವೆಲ ಭಾರಿ ಸುದ್ಧಿಯಲ್ಲಿರುವ ರಾಷ್ಟ್ರ. ಚವೇಝ್‌ರ ಕಾಲದಿಂದ ಬೊಲಿವೆರಿಯನ್ ರಿಪಬ್ಲಿಕ್ ಆಫ್ ವೆನೆಝುವೆಲ ಎಂದು ಘೋಷಿಸಿಕೊಂಡಿರುವ ಈ ರಾಷ್ಟ್ರವನ್ನು ಈಗ ಅಶಾಂತಿಯ ತಾಣವನ್ನಾಗಿ ಬದಲಾಯಿಸಲಾಗಿದೆ. ಲ್ಯಾಟಿನ್ ಅಮೆರಿಕದಲ್ಲಿ ಇರುವ ಈ ರಾಷ್ಟ್ರ ಹಲವು ದ್ವೀಪ ಸಮೂಹಗಳನ್ನು ಹೊಂದಿದೆ. ವಿಸ್ತೀರ್ಣದಲ್ಲಿ ಜಾಗತಿಕವಾಗಿ 32ನೇ ಸ್ಥಾನದಲ್ಲಿರುವ ಇದು ಜನಸಂಖ್ಯೆಯಲ್ಲಿ ಜಾಗತಿಕವಾಗಿ 44ನೇ ಸ್ಥಾನದಲ್ಲಿದೆ. ಸ್ಪಾನಿಷ್ ಸೇರಿದಂತೆ 26 ಭಾಷೆಗಳನ್ನು ಈ ರಾಷ್ಟ್ರ ಹೊಂದಿದ್ದು 1999ರಲ್ಲಿ ಹೊಸ ಸಂವಿಧಾನವನ್ನು ರಚಿಸಿಕೊಂಡಿದೆ. ಮೊದಲು ಸ್ಪೈನ್ ಹಾಗೂ ಕೊಲಂಬಿಯಾಗಳ ವಸಾಹತು ಆಗಿತ್ತು. ಜಾಗತಿಕವಾಗಿ ಅತೀ ದೊಡ್ಡ ನೈಸರ್ಗಿಕ ಅನಿಲ ಮತ್ತು ತೈಲ ನಿಕ್ಷೇಪ ವೆನೆಝುವೆಲದಲ್ಲಿದೆ. ಇಷ್ಟೇ ಅಲ್ಲದೆ ಇದು ಎರಡನೇ ಅತೀ ದೊಡ್ಡ ಚಿನ್ನ ಹಾಗೂ ವಜ್ರದ ನಿಕ್ಷೇಪವಿರುವ ರಾಷ್ಟ್ರವಾಗಿದೆ. ವಿದ್ಯುನ್ಮಾನ ತಯಾರಿಕೆಗಳಿಗೆ ಅಗತ್ಯವಾಗಿರುವ ಕೋಲ್ಟನ್ ಎಂಬ ಲೋಹವು ಕೂಡ ಈ ರಾಷ್ಟ್ರದಲ್ಲಿ ಹೇರಳವಾಗಿದೆ.

 ಹ್ಯೂಗೋ ಚವೇಝ್ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ತೈಲ, ನೈಸರ್ಗಿಕ ಅನಿಲ ಸೇರಿದಂತೆ ಹಲವು ಪ್ರಮುಖ ಕೈಗಾರಿಕೆಗಳನ್ನು ರಾಷ್ಟ್ರೀಕರಿಸಲಾಯಿತು. ಈ ಕ್ರಮ ಅಮೆರಿಕ ಹಾಗೂ ಐರೋಪ್ಯ ಒಕ್ಕೂಟದ ರಾಷ್ಟ್ರಗಳ ಕಂಪೆನಿಗಳು ಹಾಗೂ ಸರಕಾರಗಳನ್ನು ಕೆರಳಿಸಿಬಿಟ್ಟಿತು. ಅಮೆರಿಕದ ಎಕ್ಸಾನ್ ಮೊಬಿಲ್, ಕೋನ್ಕೋ ಫಿಲಿಪ್ಸ್ ಇತ್ಯಾದಿ ಕಂಪೆನಿಗಳ ಹಿಡಿತದಲ್ಲಿದ್ದ ತೈಲ ಕ್ಷೇತ್ರಗಳು ರಾಷ್ಟ್ರೀಕರಣಗೊಂಡವು. ತೈಲದಿಂದ ಉತ್ಪಾದನೆಯಾಗುತ್ತಿದ್ದ ಆದಾಯವನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಲಾಯಿತು. ಮೊದಲು ಅಮೆರಿಕ ಡಾಲರ್‌ಗಳಲ್ಲಿ ಅಂತರ್‌ರಾಷ್ಟ್ರೀಯ ವ್ಯವಹಾರಗಳನ್ನು ನಡೆಸುತ್ತಿದ್ದ ವೆನೆಝುವೆಲ, ಚವೇಝ್ ಕಾಲದಲ್ಲಿ ತನ್ನದೇ ಕರೆನ್ಸಿಯಲ್ಲಿ ಮತ್ತು ಚಿನ್ನದ ಮೂಲಕ ವ್ಯವಹಾರ ಮಾಡಲು ಶುರುಮಾಡಿತು. ಜೊತೆಗೆ ಕ್ರಿಪ್ಟೋ ಕರೆನ್ಸಿಯನ್ನು ಮಾನ್ಯ ಮಾಡಿ ಬಳಸಲಾರಂಭಿಸಿತು. ಈ ಎಲ್ಲಾ ನಡೆಗಳಿಂದಾಗಿ ವೆನೆಝುವೆಲದ ಮೇಲೆ ಅಮೆರಿಕದ ನೇರ ಹಿಡಿತ ಇಲ್ಲದಂತಾಯಿತು. ಇದು ಅಮೆರಿಕದ ಆಳುವ ಶಕ್ತಿಗಳಾದ ಭಾರೀ ಕಾರ್ಪೊರೇಟುಗಳು ಮತ್ತು ಅದರ ಸರಕಾರಗಳಿಗೆ ನುಂಗಲಾಗದ ವಿಚಾರವಾಯಿತು.

ವೆನೆಝುವೆಲದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿತು. ಇದನ್ನು ಐರೋಪ್ಯ ಒಕ್ಕೂಟ ಕೂಡ ಅನುಸರಿಸಿತು. ಅಮೆರಿಕದ ಗೂಡಚಾರ ಮತ್ತು ಅಂತರ್‌ರಾಷ್ಟ್ರೀಯ ವಿಧ್ವಂಸಕ ಸಂಸ್ಥೆ ಸಿಐಎ ವೆನೆಝುವೆಲದಲ್ಲಿ ಸೇನಾ ಬಂಡಾಯ ಸೇರಿದಂತೆ ಹಲವು ರೀತಿಯ ಬುಡಮೇಲು ಕೃತ್ಯಗಳು ನಡೆಸುವ ಪ್ರಯತ್ನಗಳನ್ನು ಶುರುಮಾಡಿತು. ಹ್ಯೂಗೋ ಚವೇಝ್ ರಶ್ಯಾ, ಚೀನ, ಕ್ಯೂಬಾಗಳಂತಹ ರಾಷ್ಟ್ರಗಳ ಬೆಂಬಲ ಗಳಿಸಿ ತೈಲ ರಫ್ತಿನ ಮೂಲಕ ರಾಷ್ಟ್ರದ ಆರ್ಥಿಕತೆಯನ್ನು ಬೆಳವಣಿಗೆಯತ್ತ ಕೊಂಡೊಯ್ದರು. ಅಮೆರಿಕದ ಆರ್ಥಿಕ ಕೂಟಕ್ಕೆ ವಿರುದ್ಧವಾಗಿ ಬೊಲಿವಿಯಾ, ಕ್ಯೂಬಾ, ಈಕ್ವೆಡಾರ್, ಬ್ರೆಝಿಲ್ ಮೊದಲಾದ ಲ್ಯಾಟಿನ್ ಅಮೆರಿಕದ ರಾಷ್ಟ್ರಗಳನ್ನು ಸೇರಿಸಿಕೊಂಡು ಪರ್ಯಾಯ ಆರ್ಥಿಕ ಕೂಟ ಕಟ್ಟುವಲ್ಲಿ ಕ್ರಿಯಾ ಶೀಲ ಪಾತ್ರ ವಹಿಸಿದ್ದರು. ವೆನೆಝುವೆಲದ ಜನರು ಚುನಾವಣೆಯಲ್ಲಿ ಆರಿಸಿ ಕಳಿಸಿದ್ದ ಹ್ಯೂಗೋ ಚವೇಝ್ ಸರಕಾರವನ್ನು ಉರುಳಿಸಿ ತನ್ನ ಕೈಗೊಂಬೆ ಸರಕಾರವನ್ನು ಕುಳ್ಳಿರಿಸಲು ಇನ್ನಿಲ್ಲದ ಎಲ್ಲಾ ಶ್ರಮಗಳನ್ನು ಅಮೆರಿಕ ಹಾಕತೊಡಗಿತು. ಅಲ್ಲಿನ ವಿರೋಧ ಪಕ್ಷಗಳ ದಲ್ಲಾಳಿ ನೇತಾರರನ್ನು ಖರೀದಿಸಿ ರಾಷ್ಟ್ರಾದ್ಯಂತ ಪ್ರಕ್ಷುಬ್ಧ ವಾತಾವರಣಗಳನ್ನು ಸೃಷ್ಟಿಸಲು ತೊಡಗಿತು.

ರಾಷ್ಟ್ರದ ಹಲವು ಕಡೆಗಳಲ್ಲಿ ಗಲಾಟೆ, ದೊಂಬಿ, ಲೂಟಿ, ಕೊಲೆಗಳನ್ನು ಸಂಘಟಿಸಲಾಯಿತು. ತನ್ನ ಅಂತರ್‌ರಾಷ್ಟ್ರೀಯ ಪ್ರಚಾರ ಸಾಧನಗಳಿಂದ ಚವೇಝ್ ಮತ್ತವರ ಸರಕಾರದ ಮೇಲೆ ಇನ್ನಿಲ್ಲದ ಸುಳ್ಳುಗಳನ್ನು ಹರಡತೊಡಗಿತು. ಚವೇಝ್‌ರನ್ನು ಶಾರೀರಿಕವಾಗಿ ಮುಗಿಸುವ ಪ್ರಯತ್ನಗಳೂ ನಡೆದವೆಂದು ವರದಿಗಳು ಬಂದವು. ಸ್ವತಃ ಚವೇಝ್ ಕೂಡ ಇದನ್ನು ಹೇಳಿದ್ದರು. ಆದರೆ ವೆನೆಝುವೆಲದ ಜನರ ಸದೃಢ ಬೆಂಬಲ ಚವೇಝ್‌ರಿಗೆ ಇದ್ದಿದ್ದರಿಂದ ಅಮೆರಿಕ ಮತ್ತಿತರ ದೇಶಗಳ ಈ ಎಲ್ಲಾ ಬುಡಮೇಲು ಪ್ರಯತ್ನಗಳು ಫಲ ನೀಡಿರಲಿಲ್ಲ. ವೆನೆಝುವೆಲದ ಜನ ದೃಢವಾಗಿ ನಿಂತು ಹೋರಾಡುತ್ತಾ ಈ ಎಲ್ಲ ಷಡ್ಯಂತ್ರಗಳನ್ನು ಸೋಲಿಸಿದ್ದರು. ಚವೇಝ್‌ರ ಕಾಲದಲ್ಲಿ ಸಾಮ್ರಾಜ್ಯಶಾಹಿ ಬಹುರಾಷ್ಟ್ರೀಯ ಕಂಪೆನಿಗಳ ಬದಲಿಗೆ ವೆನೆಝುವೆಲದ ಸಣ್ಣ ಮಧ್ಯಮ ಬಂಡವಾಳಿಗರಿಗೆ ಮತ್ತು ಕಾರ್ಮಿಕರಿಗೆ ಪ್ರೋತ್ಸಾಹ ನೀಡಿ ರಾಷ್ಟ್ರೀಯ ಉತ್ಪನ್ನವನ್ನು ಹೆಚ್ಚಿಸಿದ್ದರು. ಬಡತನದ ಮಟ್ಟವನ್ನು ಗಣನೀಯವಾಗಿ ಕಡಿಮೆಯಾಗುವಂತೆ ಮಾಡಿದ್ದರು. 2004ರಲ್ಲಿ ಶೇ. 48.6ರಷ್ಟಿದ್ದ ಅಲ್ಲಿನ ಬಡತನದ ಮಟ್ಟ 2011ರಲ್ಲಿ ಶೇ. 29.5ಕ್ಕೆ ಇಳಿದಿತ್ತು. ಲ್ಯಾಟಿನ್ ಅಮೆರಿಕ ರಾಷ್ಟ್ರಗಳಲ್ಲೇ ವೆನೆಝುವೆಲ ಅತ್ಯಂತ ಕಡಿಮೆ ಆರ್ಥಿಕ ಅಸಮಾನತೆಯಿರುವ ರಾಷ್ಟ್ರವಾಗಿ ಬಹಳ ಕಾಲ ಮುಂದುವರಿದಿತ್ತು. ಹ್ಯೂಗೋ ಚವೇಝ್ ಬೊಲಿವಿಯಾ ಮಾದರಿ ಕ್ರಾಂತಿಯ ಮೂಲಕ ಸಮಾಜವಾದವನ್ನು ಸ್ಥಾಪಿಸಬಹುದೆಂಬ ಸಿದ್ಧಾಂತವನ್ನು ಒಪ್ಪಿಕೊಂಡಿದ್ದವರಾಗಿದ್ದರು.

ಭಾರಿ ಜನಬೆಂಬಲ ಗಳಿಸಿದ್ದ ಹ್ಯೂಗೋ ಚವೇಝ್ 2013ರಲ್ಲಿ ನಿಧನರಾದ ಬಳಿಕ ವೆನೆಝುವೆಲದ ಅಧ್ಯಕ್ಷರಾಗಿ ಬಂದವರು ಮಾಜಿ ಚಾಲಕರಾಗಿದ್ದ ನಿಕೊಲಸ್ ಮಡುರೊ. ಹ್ಯೋಗೋ ಚವೇಝ್ ಮಡುರೊರನ್ನು ತನ್ನ ನಂತರದ ಅಧ್ಯಕ್ಷೀಯ ಅಭ್ಯರ್ಥಿಯನ್ನಾಗಿ ಜನರ ಮುಂದೆ ನಿಲ್ಲಿಸಿದ್ದರು. ಸಹಜವಾಗಿ ಮಡುರೊ ಜನರಿಂದ ಆರಿಸಿಬಂದು ಅಧ್ಯಕ್ಷರಾದರು. ಈ ಸಮಯಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆ ಕಂಡಿತು. ಈ ಇಳಿಕೆಗೆ ಕಾರಣ ಕೂಡ ಅಮೆರಿಕ ಮತ್ತದರ ಕೂಟಗಳೇ ಆಗಿದ್ದವು. ತನ್ನ ಕೈಗೊಂಬೆಗಳಾದ ಯುಎಇ ಸೇರಿದಂತೆ ತೈಲೋತ್ಪಾದಕ ಕೊಲ್ಲಿ ರಾಷ್ಟ್ರಗಳ ಸುಲ್ತಾನರು ಮತ್ತು ಸರಕಾರಗಳ ಮೂಲಕ ತೈಲ ಉತ್ಪಾದನೆಯನ್ನು ಏರಿಕೆ ಮಾಡಿ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿಯುವಂತೆ ಮಾಡಿತು. ಆ ಮೂಲಕ ವೆನೆಝುವೆಲ ಸೇರಿದಂತೆ ಇರಾನ್, ರಶ್ಯಾ ಮೊದಲಾದ ರಾಷ್ಟ್ರಗಳ ಆದಾಯವನ್ನು ಕಡಿತಗೊಳಿಸಿ ಹಿಡಿತ ಸಾಧಿಸಬೇಕೆಂದು ಅಮೆರಿಕ ಬಯಸಿತ್ತು. ಇದರ ಜೊತೆಗೆ ಆರ್ಥಿಕ ನಿರ್ಭಂಧಗಳನ್ನೂ ಮುಂದುವರಿಸಿತು. ಇದರಿಂದ ಪ್ರಧಾನವಾಗಿ ತೈಲ ರಫ್ತಿನ ಮೇಲೆ ಅವಲಂಬಿತವಾಗಿದ್ದ ರಾಷ್ಟ್ರಗಳು ಅದರಲ್ಲೂ ಮುಖ್ಯವಾಗಿ ವೆನೆಝುವೆಲ ಭಾರೀ ಆದಾಯ ಕೊರತೆಗೆ ಈಡಾಯಿತು. ಅಮೆರಿಕ ಮತ್ತದರ ಕೂಟ ನಡೆಸುವ ಬುಡಮೇಲು ಕೃತ್ಯಗಳಲ್ಲಿ ಈ ರೀತಿಯ ಆರ್ಥಿಕ ಯುದ್ಧ ಕೂಡ ಸೇರಿದೆ. ಇದರ ಅಡ್ಡ ಪರಿಣಾಮ ಕೊಲ್ಲಿ ರಾಷ್ಟ್ರಗಳ ಮೇಲೂ ಆಗಿದೆ.

ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರಿಗೆ ಉದ್ಯೋಗವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದಕ್ಕೂ ಇದೇ ಪ್ರಮುಖ ಕಾರಣವಾಗಿದೆ. ವೆನೆಝುವೆಲದ ಜನರ ಬದುಕಿನ ಮೇಲೆ ಇದರ ಪ್ರಭಾವ ಗಂಭೀರವಾಯಿತು. ಈ ಸಂದರ್ಭವನ್ನು ಬಳಸಿ ವಿರೋಧ ಪಕ್ಷಗಳ ನಾಯಕರ ಮೂಲಕ ಮಡುರೊರನ್ನು ಪದಚ್ಯುತಗೊಳಿಸಲು ಅಭಿಯಾನವನ್ನು ಮೊದಲಿಟ್ಟರು. ಈ ಎಲ್ಲಾ ಅಂತರ್‌ರಾಷ್ಟ್ರೀಯ ಷಡ್ಯಂತ್ರಗಳ ಮಧ್ಯೆ ಕೂಡ ಮಡುರೋ ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದುಬಂದು ಅಧಿಕಾರ ಮುಂದುವರಿಸಿದ್ದಾರೆ. ಅಮೆರಿಕ ಕೆಲವು ವಿರೋಧ ಪಕ್ಷಗಳನ್ನು ಚುನಾವಣೆಯನ್ನು ಬಹಿಷ್ಕರಿಸುವಂತೆ ಮಾಡಿತ್ತು. ಮಡುರೊ ಗೆಲುವು ಸಾಧಿಸಿದ್ದನ್ನು ಅರಗಿಸಿಕೊಳ್ಳಲಾಗದೇ ಈ ಶಕ್ತಿಗಳು ‘‘ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಭಾಗವಹಿಸದೆ ಬಹಿಷ್ಕರಿಸಿರುವಾಗ ಚುನಾವಣೆಯೇ ಅಕ್ರಮವಾಗುತ್ತದೆ. ಮಡುರೊ ಪದವಿಯಿಂದ ಇಳಿಯಬೇಕು’’ ಎಂದು ಕೂಗಾಟ ಆರಂಭಿಸಿ ಗಲಭೆಗಳನ್ನು ಸೃಷ್ಟಿಸುತ್ತಿವೆ.

ಆದರೆ ಚುನಾವಣೆ ನ್ಯಾಯಸಮ್ಮತವಾಗಿ ನಡೆಯುವುದನ್ನು ಖಾತ್ರಿಗೊಳಿಸಲು ಅಂತರ್‌ರಾಷ್ಟ್ರೀಯ ವೀಕ್ಷಕರ ತಂಡಗಳನ್ನು ವೆನೆಝುವೆಲ ಕರೆಸಿಕೊಂಡಿತ್ತು. ಅವರು ಚುನಾವಣೆ ನ್ಯಾಯ ಸಮ್ಮತವಾಗಿ ನಡೆದಿದೆ ಎಂದೂ ಒಪ್ಪಿಕೊಂಡಿದ್ದಾರೆ. ಅಮೆರಿಕ ಸೇರಿದಂತೆ ಯೂರೋಪಿನ ಹಲವು ರಾಷ್ಟ್ರಗಳು ಮಡುರೊ ಆಯ್ಕೆಯನ್ನು ಒಪ್ಪಿಕೊಳ್ಳದೆ ‘‘ವೆನೆಝುವೆಲದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗಾಗಿ ತಾವು ಪ್ರಯತ್ನಿಸುತ್ತಿರುವುದು’’ ಎಂದು ಬೊಗಳೆ ಬಿಡತೊಡಗಿವೆ. ಆದರೆ ರಶ್ಯಾ, ಚೀನಾ, ಕ್ಯೂಬಾ, ಇರಾನ್, ಬೊಲಿವಿಯಾ, ಮೆಕ್ಸಿಕೋ ಮೊದಲಾದ ರಾಷ್ಟ್ರಗಳು ಮಡುರೊ ಆಯ್ಕೆಯನ್ನು ಒಪ್ಪಿಕೊಂಡಿವೆ. ಆದರೆ ಭಾರತ ತನ್ನ ನಿಲುವನ್ನು ಇನ್ನೂ ಹೇಳಿಲ್ಲ. ಅಮೆರಿಕ ವೆನೆಝುವೆಲದ ಕೆಲವು ವಿರೋಧ ಪಕ್ಷಗಳನ್ನು ಖರೀದಿಸಿ ಕೂಟ ರಚಿಸಿ ಪರ್ಯಾಯವೆಂದು ಅಕ್ರಮವಾಗಿ ಮಧ್ಯಂತರ ಅಧ್ಯಕ್ಷರನ್ನಾಗಿ ತನ್ನ ಕೈಗೊಂಬೆ ಜುವಾನ್ ಗ್ವಾಯಿಡುರನ್ನು ಘೋಷಿಸಿದೆ. ಈ ಗ್ವಾಯಿಡು ಯಾವುದೇ ಚುನಾವಣೆ ಎದುರಿಸದೆ ತನ್ನನ್ನೇ ತಾನು ದೇಶದ ಅಧ್ಯಕ್ಷನೆಂದು ಘೋಷಿಸಿಕೊಂಡಿರುವ ಹುಂಬ ಕ್ರಮಗಳನ್ನು ಅಮೆರಿಕ ಮಾಡಿಸಿದೆ.

ಅಮೆರಿಕದಲ್ಲಿರುವ ವೆನೆಝುವೆಲದ ಕೆಲವು ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಹೊಣೆಯನ್ನು ಅಮೆರಿಕ ಏಕ ಪಕ್ಷೀಯವಾಗಿ ಆತನಿಗೆ ಒಪ್ಪಿಸಿದೆ. ಜೊತೆಗೆ ಬ್ಯಾಂಕ್ ಆಫ್ ಇಂಗ್ಲೆಂಡಿನಲ್ಲಿರುವ ವೆನೆಝುವೆಲದ ಚಿನ್ನವನ್ನು ಮರಳಿಸದೆ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಇವೆಲ್ಲವನ್ನೂ ಪ್ರಜಾಪ್ರಭುತ್ವ ಸ್ಥಾಪಿಸುವ ಹೆಸರಿನಲ್ಲಿ ಅಮೆರಿಕ ಮಾಡುತ್ತಿದೆ. ಅಮೆರಿಕ ಪ್ರಾಯೋಜಿತ ಈ ಎಲ್ಲಾ ಕಾರ್ಯಗಳನ್ನು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಮುಖ್ಯವಾಹಿನಿಯೆಂದು ಹೇಳಿಕೊಳ್ಳುವ ಮಾಧ್ಯಮಗಳು ಬೆಂಬಲಿಸುತ್ತಿವೆ. ಈಗ ಅಲ್ಲಿ ಅಂತರ್ಯುದ್ಧದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲಾ ಅಧ್ಯಕ್ಷ ಮಡುರೊ ಕಾರಣವೆಂದು ಪ್ರಚಾರ ನೀಡಲಾಗುತ್ತಿದೆ. ಜೊತೆಗೆ ಅಮೆರಿಕ ತನ್ನ ಸೇನೆಯನ್ನು ವೆನೆಝುವೆಲದ ಸುತ್ತಲೂ ಅಣಿನೆರಸತೊಡಗಿದೆ. ಇದೇ ವೇಳೆಯಲ್ಲಿ ರಶ್ಯಾ, ಚೀನ, ಇರಾನ್‌ಗಳಂತಹ ದೇಶಗಳು ವೆನೆಝುವೆಲದ ಬೆಂಬಲಕ್ಕೆ ನಿಂತಿವೆ. ಅಮೆರಿಕ ಏನಾದರೂ ದುಸ್ಸಾಹಸಕ್ಕೆ ಕೈ ಹಾಕಿದರೆ ಅದರ ಲಾಭ ಪಡೆಯಬಹುದೆಂಬ ಲೆಕ್ಕಾಚಾರ ಕೂಡ ಈ ದೇಶಗಳದ್ದಾಗಿದೆ. ಅಮೆರಿಕವಿಂದು ಹತಾಶ ಸ್ಥಿತಿ ತಲುಪಿರುವ ರಾಷ್ಟ್ರ. ಅದು ತನ್ನ ಕುಸಿದಿರುವ ಆರ್ಥಿಕತೆಯನ್ನು ಮೇಲೆತ್ತಲು ತಿಣುಕಾಡುತ್ತಿದೆ.

ಇರಾಕ್, ಲಿಬಿಯಾ, ಸಿರಿಯಾ, ಅಫ್ಘಾನಿಸ್ತಾನ, ಇತ್ಯಾದಿ ಯುದ್ಧಗಳಿಂದ ಅದು ಗಳಿಸಿದ್ದಕ್ಕಿಂತಲೂ ಕಳೆದುಕೊಂಡಿದ್ದೇ ಹೆಚ್ಚು. ಅಲ್ಲಿನ ತೈಲ, ಗಣಿ ಇನ್ನಿತರ ಸಂಪತ್ತಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಅಲ್ಲೆಲ್ಲಾ ಇದ್ದ ತನ್ನ ಸೇನೆಯನ್ನು ವಾಪಸು ಕರೆಸಿಕೊಳ್ಳುತ್ತಿದೆ. ಟ್ರಂಪ್ ಅಧಿಕಾರಕ್ಕೆ ಏರಿದ ನಂತರವೂ ಅಮೆರಿಕ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಲಾಗುತ್ತಿಲ್ಲ. ಈಗ ಜಗತ್ತಿನ ಅತೀ ದೊಡ್ಡ ವೆನೆಝುವೆಲದ ತೈಲ ಸಂಪತ್ತಿನ ಮೇಲೆ ಹಿಡಿತ ಹೊಂದಲು ಇನ್ನಿಲ್ಲದ ಶ್ರಮಗಳನ್ನು ಹಾಕುತ್ತಿದೆ. ಆದರೆ ಅದರ ಈ ನಡೆಗಳು ಲ್ಯಾಟಿನ್ ಅಮೆರಿಕ ಸೇರಿದಂತೆ ಜಾಗತಿಕವಾಗಿ ಭಾರೀ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಸ್ವತಃ ಅಮೆರಿಕಕ್ಕೇ ಕೂಡ ಭಾರೀ ಹಾನಿಯಾಗುವ ಸಾಧ್ಯತೆ ಕಾಣುತ್ತಿದೆ. ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಹಿಡಿತ ಕೈತಪ್ಪಿಹೋಗುತ್ತಿರುವ ಕಾರಣಕ್ಕೆ ಜಗತ್ತನ್ನು ಮತ್ತಷ್ಟು ಬಿಕ್ಕಟ್ಟುಗಳಿಗೆ ದೂಡುತ್ತಿದೆ. ಅಮೆರಿಕ ಮತ್ತದರ ಕೂಟದ ದುಸ್ಸಾಹಸಗಳನ್ನು ಕೊಂಡಾಡುವ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಮಾಧ್ಯಮಗಳ ನಡೆಗಳನ್ನು ಜನಸಾಮಾನ್ಯರು ಎಚ್ಚರಿಕೆಯಿಂದ ಗಮನಿಸದೇ ಹೋದರೆ ಅವರ ಬಲೆಯಲ್ಲಿ ಸಿಲುಕಬೇಕಾಗುತ್ತದೆ. ಅಮೆರಿಕ ಮತ್ತದರ ಕೂಟಗಳು ಇದೇ ಮಾದರಿಗಳ ಮೂಲಕವೇ ಸುಳ್ಳು ಕಾರಣಗಳನ್ನೊಡ್ಡಿ ಜಾಗತಿಕವಾಗಿ ಹಲವಾರು ರಾಷ್ಟ್ರಗಳಲ್ಲಿ ಯುದ್ಧಗಳನ್ನು ನಡೆಸುತ್ತಾ ಬಂದಿರುವುದನ್ನು ಇಲ್ಲಿ ಗಮನಿಸಬೇಕಾಗಿದೆ. ಅದಕ್ಕೆ ಅದು ನಡೆಸಿದ ಇರಾಕ್, ಲಿಬಿಯಾ ಯುದ್ಧಗಳು, ಸ್ಥಾಪಿಸಿದ ತಮ್ಮ ಕೈಗೊಂಬೆ ಸರಕಾರಗಳು ಉತ್ತಮ ಉದಾಹರಣೆಗಳಾಗಿವೆ

ವೆನೆಝುವೆಲದ ಜನಸಾಮಾನ್ಯರು ಅಮೆರಿಕ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಂ, ಸೌದಿ ಅರೇಬಿಯಾ, ಯುಎಇ, ಖತರ್, ಐರೋಪ್ಯ ಒಕ್ಕೂಟದ ಇತರ ರಾಷ್ಟ್ರಗಳ ಸರಕಾರಗಳ ಇಂತಹ ಷಡ್ಯಂತ್ರಗಳನ್ನು ಸೋಲಿಸಬೇಕಿದೆ. ಜೊತೆಗೆ ಜಾಗತಿಕ ಜನಸಮುದಾಯ ಕೂಡ ಈ ಶಕ್ತಿಗಳ ಇಂತಹ ಬುಡಮೇಲು ಕೃತ್ಯಗಳನ್ನು ವಿರೋಧಿಸಬೇಕಾದುದು ಜಾಗತಿಕ ಶಾಂತಿಗೆ ಅಗತ್ಯ. ವೆನೆಝುವೆಲದ ಜನರಿಗೆ ಮಾತ್ರ ಅಲ್ಲಿನ ರಾಜಕೀಯಗಳನ್ನು ತೀರ್ಮಾನಿಸಲು ಇರುವ ಪ್ರಜಾತಾಂತ್ರಿಕ ಹಕ್ಕನ್ನು ಎತ್ತಿಹಿಡಿದು ಸಮರ್ಥಿಸಬೇಕಾದುದು ಸರಿಯಾದ ಪ್ರಜಾತಾಂತ್ರಿಕ ನಡೆಯಾಗುತ್ತದೆ. ಆರ್ಥಿಕ ಯುದ್ಧ ಸೇರಿದಂತೆ ಎಲ್ಲಾ ರೀತಿಯ ವಿನಾಶಕಾರಿ ಯುದ್ಧಗಳ ಬಗ್ಗೆ ಜಾಗರೂಕರಾಗಬೇಕಾದ ಅಗತ್ಯ ಬಹಳವಿದೆ.


ಮಿಂಚಂಚೆ: nandakumarnandana67gmail.com

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News