ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವೆ: ವಿಜಯ್ ಮಲ್ಯ

Update: 2019-02-05 14:35 GMT

ಹೊಸದಿಲ್ಲಿ,ಫೆ.5: ತನ್ನನ್ನು ಭಾರತಕ್ಕೆ ಗಡಿಪಾರು ಮಾಡುವ ಬ್ರಿಟನ್ ಸರಕಾರದ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಸೋಮವಾರ ತಿಳಿಸಿದ್ದಾರೆ.

ಮಲ್ಯರ ಗಡಿಪಾರು ಮನವಿಯ ವಿಚಾರಣೆ ನಡೆಸಿದ್ದ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗಡಿಪಾರು ಒಪ್ಪಂದ ಪ್ರಕ್ರಿಯೆಯ ಪ್ರಕಾರ ತನ್ನ ತೀರ್ಪನ್ನು ಬ್ರಿಟನ್ ಗೃಹ ಕಾರ್ಯದರ್ಶಿ ಸಾಜಿದ್ ಜಾವಿದ್‌ಗೆ ಕಳುಹಿಸಿತ್ತು. ಈ ಒಪ್ಪಂದದ ಪ್ರಕಾರ ಬ್ರಿಟನ್‌ನ ಗೃಹ ಕಾರ್ಯದರ್ಶಿ ಮಾತ್ರ ಮಲ್ಯರ ಗಡಿಪಾರು ಆದೇಶಕ್ಕೆ ಸಹಿ ಹಾಕುವ ಅಧಿಕಾರ ಹೊಂದಿದ್ದಾರೆ. ಬ್ರಿಟನ್‌ನ ಅತ್ಯಂತ ಹಿರಿಯ ಪಾಕಿಸ್ತಾನಿ ಮೂಲದ ಸಚಿವರಾಗಿರುವ ಜಾವಿದ್ ಬಳಿ ಈ ಆದೇಶಕ್ಕೆ ಸಹಿ ಹಾಕಲು ಎರಡು ತಿಂಗಳ ಸಮಯಾವಕಾಶವಿತ್ತು. ಹಾಗಾಗಿ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ನಡೆಸಲಾಗಿದೆ ಎಂಬುದನ್ನು ದೃಢಪಡಿಸಿದ ನಂತರ ಜಾವಿದ್ ಈ ಆದೇಶಕ್ಕೆ ರವಿವಾರ ಸಹಿ ಹಾಕಿದ್ದು ಸೋಮವಾರ ಅದನ್ನು ಬಹಿರಂಗಪಡಿಸಿದ್ದರು. ಸದ್ಯ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಮಲ್ಯಗೆ ಹದಿನಾಲ್ಕು ದಿನಗಳ ಕಾಲಾವಕಾಶ ನೀಡಲಾಗಿದೆ.

ಗಡಿಪಾರು ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ. ಡಿಸೆಂಬರ್ 10, 2018ರಲ್ಲಿ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನನ್ನನ್ನು ಗಡಿಪಾರು ಮಾಡಲು ನಿರ್ಧರಿಸಿದಾಗಲೇ ನಾನು ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದೆ. ಆದರೆ ಈ ಆದೇಶವು ಗೃಹ ಕಾರ್ಯದರ್ಶಿ ಅವರ ಮುಂದಿದ್ದ ಕಾರಣ ಹಾಗೆ ಮಾಡಲು ಸಾಧ್ಯವಿರಲಿಲ್ಲ. ಇದೀಗ ನಾನು ಮೇಲ್ಮನವಿ ಸಲ್ಲಿಸಲು ಸಾಧ್ಯ ಎಂದು ಮಲ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News