ರಾಜ್ಯಪಾಲರ ಭಾಷಣದ ವೇಳೆ ಪ್ರತಿಪಕ್ಷ ಸದಸ್ಯರಿಂದ ‘ಪೇಪರ್ ಬಾಲ್’ ತೂರಾಟ
Update: 2019-02-05 20:50 IST
ಲಕ್ನೋ,ಫೆ.5: ಉತ್ತರ ಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನದ ಮೊದಲ ದಿನವಾದ ಮಂಗಳವಾರ ರಾಜ್ಯಪಾಲ ರಾಮ ನಾಯ್ಕೋ ಅವರು ಜಂಟಿ ಸದನವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಪ್ರತಿಪಕ್ಷ ಸದಸ್ಯರು ವೇದಿಕೆಯತ್ತ ಕಾಗದದ ಚೆಂಡುಗಳನ್ನೆಸೆದು ಗದ್ದಲವೆಬ್ಬಿಸಿದರು.
ರಾಜ್ಯಪಾಲರು ತನ್ನ ಭಾಷಣವನ್ನಾರಂಭಿಸಿದ ಬೆನ್ನಿಗೇ ಸರಕಾರ ವಿರೋಧಿ ಘೋಷಣೆಗಳನ್ನು ಮೊಳಗಿಸಿದ ಪ್ರತಿಪಕ್ಷ ಸದಸ್ಯರು ‘ರಾಜ್ಯಪಾಲರೇ ವಾಪಸ್ ಹೋಗಿ’ ಎಂದು ಕೂಗತೊಡಗಿದರು.
ಈ ವೇಳೆ ಪ್ರತಿಪಕ್ಷ ಸದಸ್ಯರು ವೇದಿಕೆಯತ್ತ ಎಸೆದ ಕಾಗದದ ಚೆಂಡುಗಳನ್ನು ಸಿಬ್ಬಂದಿಗಳು ಕಾರ್ಡ್‌ಬೋರ್ಡ್ ಕಡತಗಳನ್ನು ಬಳಸಿ ತಡೆದರು. ಕೋಲಾಹಲದ ನಡುವೆಯೇ ರಾಜ್ಯಪಾಲರು ಭಾಷಣವನ್ನು ಓದಿ ಮುಗಿಸಿದರು.
ಹಣಕಾಸು ಸಚಿವ ರಾಜೇಶ ಅಗರವಾಲ್ ಅವರು ಫೆ.7ರಂದು ಮುಂಗಡಪತ್ರ ಮಂಡಿಸಲಿದ್ದು,ಫೆ.22ರಂದು ಅಧಿವೇಶನ ಅಂತ್ಯಗೊಳ್ಳುವ ನಿರೀಕ್ಷೆಯಿದೆ.