ಜಗನ್ನಾಥ ದೇಗುಲ ಪ್ರಕರಣ: ಸಮಸ್ಯೆಗಳನ್ನು ತಿಳಿಯಲು ವಕೀಲರಿಗೆ ನ್ಯಾಯಾಲಯ ಸೂಚನೆ

Update: 2019-02-05 15:29 GMT

ಹೊಸದಿಲ್ಲಿ,ಫೆ.5: ಪುರಿಯ ಜಗನ್ನಾಥ ದೇಗುಲದ ಸಮಸ್ಯೆಯ ಆಳವನ್ನು ತಿಳಿಯಲು ದೇಗುಲಕ್ಕೆ ಭೇಟಿ ನೀಡುವಂತೆ ಈ ಪ್ರಕರಣದಲ್ಲಿ ನ್ಯಾಯಾಲಯದ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ನ್ಯಾಯವಾದಿ ರಂಜಿತ್ ಕುಮಾರ್‌ಗೆ ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ನ್ಯಾಯಾಲಯದ ಸಲಹೆಗಾರರು ದೇಗುಲಕ್ಕೆ ತೆರಳಿ ಅಲ್ಲಿನ ಪರಿಸ್ಥಿತಿಯನ್ನು ಕಣ್ಣಾರೆ ನೋಡಬೇಕು ಎಂದು ಒಡಿಶಾ ಪರ ವಕೀಲರು ವಾದಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಎ.ಕೆ ಸಿಕ್ರಿ ನೇತೃತ್ವದ ಪೀಠ ಈ ಸೂಚನೆಯನ್ನು ನೀಡಿದೆ. ಈ ಕುರಿತು ತನ್ನ ಅಭಿಪ್ರಾಯ ತಿಳಿಸಿದ ರಂಜಿತ್ ಕುಮಾರ್, ಫೆಬ್ರವರಿ 22 ಮತ್ತು 23ರಂದು ಜಗನ್ನಾಥ ದೇಗುಲಕ್ಕೆ ಭೇಟಿ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪುರಿ ಜಗನ್ನಾಥ ದೇವಾಲಯದಲ್ಲಿ ಭಕ್ತರು ಎದುರಿಸುವ ಸಮಸ್ಯೆಗಳು ಮತ್ತು ಅಲ್ಲಿನ ಸೇವಕರ ದೌರ್ಜನ್ಯ ಮತ್ತು ಶೋಷಣೆಯ ಬಗ್ಗೆ ವಿವರಿಸಿರುವ ಮನವಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ನಡೆಸುತ್ತಿದೆ. ಜಗನ್ನಾಥ ದೇಗುಲದ ಬಹುದೊಡ್ಡ ಸಮಸ್ಯೆಯೆಂದರೆ ಗುಂಪನ್ನು ಸರಿಯಾಗಿ ನಿಬಾಯಿಸುವಲ್ಲಿನ ಕೊರತೆ ಮತ್ತು ಭಕ್ತರಿಗೆ ಸರದಿ ವ್ಯವಸ್ಥೆಯಿಲ್ಲದಿರುವುದು ಎಂದು ಕುಮಾರ್ ತಿಳಿಸಿದ್ದಾರೆ.

ಇದಕ್ಕುತ್ತರಿಸಿದ ರಾಜ್ಯ ಪರ ವಕೀಲರು, ಈ ದೇಗುಲದ ರಚನೆಯು ವಿಭಿನ್ನವಾಗಿದ್ದು ನಿರ್ದಿಷ್ಟ ಸರದಿ ವ್ಯವಸ್ಥೆಯನ್ನು ಮಾಡುವುದು ಸುಲಭದ ಕೆಲಸವಲ್ಲ. ನ್ಯಾಯಾಲಯದ ಸಲಹೆಗಾರರು ಈ ದೇಗುಲಕ್ಕೆ ತೆರಳಿ ವೀಕ್ಷಿಸಿದರೆ ಮಾತ್ರ ಪರಿಸ್ಥಿತಿಯ ಅರ್ಥವಾಗುತ್ತದೆ. ನಾವು ಸರದಿ ವ್ಯವಸ್ಥೆಯನ್ನು ವಿರೋಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News