3 ತಿಂಗಳು ಕಳೆದರೂ ಬೆಳೆ ಸಮೀಕ್ಷೆ ಮಾಡಿದ ಗ್ರಾಮೀಣ ಯುವಕರ ಕೈಸೇರಿಲ್ಲ ಸಂಭಾವನೆ

Update: 2019-02-06 10:22 GMT

ಫರಂಗಿಪೇಟೆ ಫೆ.5: ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ಹೇಳಿ ಸರಕಾರ ನಿರುದ್ಯೋಗಿ ಯುವಕರಿಂದ ಬೆಳೆ ಸರ್ವೇ ಮಾಡಿಸಿಕೊಂಡಿದೆ. ಆದರೆ ಸಮೀಕ್ಷೆ ಮುಗಿದು ಮೂರು ತಿಂಗಳು ಕಳೆದರೂ ನಮಗೆ ಸಂಭಾವನೆ ಲಭಿಸಿಲ್ಲ ಎಂದು ಸಂತ್ರಸ್ತ ಯುವಕರು ಅಲವತ್ತುಕೊಂಡಿದ್ದಾರೆ.

ರಾಜ್ಯದಲ್ಲಿನ ಕೃಷಿಕರ ಮುಂಗಾರು ಬೆಳೆಯ ಪೂರ್ವ ಸಮೀಕ್ಷೆಯನ್ನು ಸರಕಾರ ನಡೆಸುತ್ತಿದ್ದು, ಇದಕ್ಕಾಗಿ ಕಳೆದ ಬಾರಿ ಗ್ರಾಮ ಲೆಕ್ಕಿಗರನ್ನು ನಿಯೋಜಿಸಲಾಗಿತ್ತು. ಆದರೆ ಗ್ರಾಮ ಲೆಕ್ಕಿಗರಿಗೆ ಅವರ ದಿನನಿತ್ಯದ ಕರ್ತವ್ಯ ನಿರ್ವಹಿಸಲು ತೊಡಕುಂಟಾಗುವ ಕಾರಣ ಪ್ರಸಕ್ತ ಸಾಲಿನಲ್ಲಿ ಆಯಾ ಗ್ರಾಮದ ಯುವಕರನ್ನೇ ಈ ಸಮೀಕ್ಷೆಗೆ ಬಳಸಲಾಗಿ, ಅವರಿಗೆ ತರಬೇತು ನೀಡಲಾಗಿತ್ತು. ದ.ಕ. ಜಿಲ್ಲೆಯ ಒಟ್ಟು 422 ಗ್ರಾಮಗಳಲ್ಲಿ ಸಮೀಕ್ಷೆಗಾಗಿ 1,250 ಮಂದಿಯನ್ನು ನಿಯೋಜಿಸಲಾಗಿತ್ತು. ಪ್ರತೀ ಸರ್ವೆ ನಂಬರಿಗೆ ತಲಾ 10 ರೂ.ನಂತೆ ನಿಗದಿಪಡಿಸಲಾಗಿತ್ತು. ಆಯ್ಕೆಯಾದ ಯುವಕರಿಗೆ ಎರಡು ಬಾರಿ ತರಬೇತಿ ನೀಡಿ, ಅವರು ರೈತರ ಕೃಷಿ ಭೂಮಿಗಳಿಗೆ ತೆರಳಿ ಮೊಬೈಲ್ ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಬೇಕಿತ್ತು. ಬಳಿಕ ಅದನ್ನು ಸರಕಾರಕ್ಕೆ ಕಳುಹಿಸಬೇಕಿತ್ತು. ಈ ಸರ್ವೇಯ ಆಧಾರದಲ್ಲಿ ರೈತರಿಗೆ ಬೆಳೆ ವಿಮಾ ಪರಿಹಾರ ನೀಡಲು ಸರಕಾರಕ್ಕೆ ಸರಳವಾಗುತ್ತದೆ. ಈ ರೀತಿ ಬೆಳೆ ಸರ್ವೇ ನಡೆಸಿದ ಯುವಕರಿಗೆ ‘ನಿಮ್ಮ ಬ್ಯಾಂಕ್ ಖಾತೆಗೆ ಸಂಭಾವನೆ ಜಮೆಯಾಗುತ್ತದೆ’ ಎಂದು ಹೇಳಿ ಅವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕಗಳ ಪ್ರತಿಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದರು.

ಉತ್ತಮ ಕೆಲಸ ನಿರ್ವಹಿಸುವ ಅರ್ಹ ಯುವಕರಿಗೆ ಸರಕಾರದ ಖಾಲಿ ಇರುವ ವಿವಿಧ ಇಲಾಖೆಯಲ್ಲಿ ತಾತ್ಕಾಲಿಕ ಉದ್ಯೋಗದ ಭರವಸೆ ಕೂಡಾ ನೀಡಲಾಗಿತ್ತು ಎಂದೂ ಹೇಳಲಾಗುತ್ತಿದೆ. ಆದರೆ ಸರ್ವೇ ನಡೆಸಿ ಮೂರು ತಿಂಗಳು ಕಳೆದಿದ್ದರೂ, ಉದ್ಯೋಗ ಬಿಡಿ ಸಂಭಾವನೆ ಕೂಡಾ ದೊರೆತಿಲ್ಲ ಎಂದು ಯುವಕರು ಅಳಲು ತೋಡಿಕೊಂಡಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಇನ್ನೊಂದು ವಾರದಲ್ಲಿ ಮುಂಗಾರು ಬೆಳೆ ಸಮೀಕ್ಷೆ ಮಾಡಿದ ಯುವಕರಿಗೆ ಸಂಭಾವನೆ ದೊರೆಯುವ ಸಾಧ್ಯತೆ ಇದೆ. ಈ ಸಂಬಂಧ ಎಲ್ಲಾ ದಾಖಲೆಗಳನ್ನು ಸರಕಾರಕ್ಕೆ ಕಳುಹಿಸಲಾಗಿದೆ.

-ರಶ್ಮಿ ಕಿಶೋರ್, ಬಂಟ್ವಾಳ ತಾಲೂಕು ತಹಶೀಲ್ದಾರ್

ಮುಂಗಾರು ಬೆಳೆ ಸಮೀಕ್ಷೆ ನಡೆಸಿದರೆ ಪ್ರತೀ ಸರ್ವೇ ನಂಬರಿಗೆ ತಲಾ 10 ರೂ. ನೀಡಲಾಗುತ್ತದೆ. ಮಾತ್ರವಲ್ಲ, ಉತ್ತಮ ನಿರ್ವಹಣೆ ನೀಡುವ ಅರ್ಹ ಯುವಕರಿಗೆ ಸರಕಾರಿ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಈಗ ಉದ್ಯೋಗ ವೂ ಇಲ್ಲ, ಸಂಭಾವನೆಯೂ ನೀಡದೆ ಅನ್ಯಾಯ ಎಸಗಲಾಗಿದೆ.

-ನಬೀಲ್ ಅಮೆಮಾರ್, ಸಮೀಕ್ಷೆ ನಡೆಸಿದ ಯುವಕ

ಮುಂಗಾರು ಬೆಳೆ ಸಮೀಕ್ಷೆ ನಡೆಸಿದವರಿಗೆ ಸಂಭಾವನೆ ಬಿಡುಗಡೆ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ಈ ಸಮಸ್ಯೆ ಬಗ್ಗೆ ಕಂದಾಯ ಸಚಿವರಲ್ಲಿ ಮಾತನಾಡುತ್ತೇನೆ. ಆದಷ್ಟು ಬೇಗ ಯುವಕರಿಗೆ ಸಂಭಾವನೆ ದೊರಕಿಸಿ ಕೊಡಲು ಯತ್ನಿಸುತ್ತೇನೆ.

-ಯು.ಟಿ.ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

Writer - -ಖಾದರ್ ಫರಂಗಿಪೇಟೆ

contributor

Editor - -ಖಾದರ್ ಫರಂಗಿಪೇಟೆ

contributor

Similar News