ಶಬರಿಮಲೆ ತೀರ್ಪಿನ ಪುನರ್‌ ಪರಿಶೀಲನೆ ಅರ್ಜಿಗಳಿಗೆ ಕೇರಳ ಸರಕಾರದ ವಿರೋಧ

Update: 2019-02-06 14:31 GMT

ಹೊಸದಿಲ್ಲಿ,ಫೆ.6: ಶಬರಿಮಲೆ ದೇವಸ್ಥಾನದಲ್ಲಿ ಎಲ್ಲ ವಯೋಮಾನಗಳ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ತೀರ್ಪಿನ ಪುನರ್‌ ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಕೇರಳ ಸರಕಾರವು ಬುಧವಾರ

ಸರ್ವೋಚ್ಚ ನ್ಯಾಯಾಲಯದಲ್ಲಿ ಬಲವಾಗಿ ವಿರೋಧಿಸಿದರೆ,ನಾಯರ್ ಸರ್ವಿಸ್ ಸೊಸೈಟಿ(ಎನ್‌ಎಸ್‌ಎಸ್) ಮತ್ತು ದೇವಳದ ತಂತ್ರಿಗಳು ಸೇರಿದಂತೆ ಹಲವಾರು ಸಂಸ್ಥೆಗಳು ತೀರ್ಪನ್ನು ಪುನರ್ ಪರಿಶೀಲಿಸುವಂತೆ ವಾದಿಸಿದವು.

ಸರ್ವೋಚ್ಚ ನ್ಯಾಯಾಲಯದ 2018,ಸೆ.18ರ ತೀರ್ಪಿನ ಪುನರ್‌ಪರಿಶೀಲನೆಯನ್ನು ಅಗತ್ಯವಾಗಿಸುವ ಕಾರಣವನ್ನು ಯಾವುದೇ ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ ಎಂದು ಕೇರಳ ಸರಕಾರದ ಪರ ವಕೀಲ ಜೈದೀಪ ಗುಪ್ತಾ ಅವರು ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು.

ಸೆ.18ರ ಬಹುಮತದ ತೀರ್ಪನ್ನು ವಿರೋಧಿಸಿದ ಎನ್‌ಎಸ್‌ಎಸ್ ಪರ ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್ ಕೆ.ಪರಾಶರನ್ ಅವರು,ಸಂವಿಧಾನದ 15ನೇ ವಿಧಿಯು ದೇಶದಲ್ಲಿಯ ಎಲ್ಲ ಜಾತ್ಯತೀತ ಸಂಸ್ಥೆಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿಸಿದೆ,ಆದರೆ ಅದು ಧಾರ್ಮಿಕ ಸಂಸ್ಥೆಗಳನ್ನು ಉಲ್ಲೇಖಿಸಿಲ್ಲ ಎಂದು ಹೇಳಿದರು.

ತೀರ್ಪನ್ನು ಪುನರ್‌ಪರಿಶೀಲಿಸುವಂತೆ ಕೋರಿದ ಅವರು,ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧವು ಜಾತಿಯನ್ನು ಆಧರಿಸಿರಲಿಲ್ಲ,ಹೀಗಾಗಿ ಸಮಾಜದಲ್ಲಿಯ ಅಸ್ಪೃಶೃತೆ ನಿವಾರಣೆಯ ಕುರಿತು ವ್ಯವಹರಿಸುವ ಸಂವಿಧಾನದ ವಿಧಿಯನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ತಪ್ಪಾಗಿ ಬಳಸಿಕೊಂಡಿದೆ ಎಂದು ವಾದಿಸಿದರು. ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ ಎಂಬ ಅಂಶವನ್ನು ನ್ಯಾಯಾಲಯವು ಪರಿಗಣಿಸಬೇಕಾಗಿತ್ತು ಎಂದರು.

ಬಹುಮತದ ತೀರ್ಪನ್ನು ನೀಡಿದ್ದ ನಾಲ್ವರು ನ್ಯಾಯಾಧೀಶರಲ್ಲಿ ಸಂವಿಧಾನದ 26 ಮತ್ತು 25(2) ವಿಧಿಗಳು ಹಾಗೂ ಕೇರಳ ಕಾಯ್ದೆಯ ನಿಯಮ 3(ಬಿ) ಕುರಿತು ಒಮ್ಮತವಿತ್ತು ಎಂದು ಹೇಳಿದ ಗುಪ್ತಾ, ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಲಾಗಿರುವ ಯಾವುದೇ ಅರ್ಜಿಯಲ್ಲಿ ಈ ಮೂರು ಅಂಶಗಳನ್ನು ಪ್ರಶ್ನಿಸಲಾಗಿಲ್ಲ,ಹೀಗಾಗಿ ಎತ್ತಲಾಗಿರುವ ಇತರ ಅಂಶಗಳು ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News