ಪಿಎಂಎಲ್‌ಎ ಪ್ರಕರಣ: ಇಡಿ ಮುಂದೆ ಹಾಜರಾದ ವಾದ್ರಾ
ಹೊಸದಿಲ್ಲಿ,ಫೆ.6: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರು ಬುಧವಾರ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿ ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ ಹಾಜರಾದರು. ಅಕ್ರಮ ವಿದೇಶಿ ಆಸ್ತಿಗಳನ್ನು ಹೊಂದಿರುವ ಆರೋಪಕ್ಕೆ ಈ ಪ್ರಕರಣ ಸಂಬಂಧಿಸಿದೆ.
ಇದು ಅಕ್ರಮ ಹಣಕಾಸು ವ್ಯವಹಾರಗಳ ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ತನಿಖಾ ಸಂಸ್ಥೆಯ ಎದುರು ವಾದ್ರಾರ ಮೊದಲ ಹಾಜರಾತಿಯಾಗಿದೆ.
ಈ ಹಿಂದೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ವಾದ್ರಾ,ಇದು ತನ್ನ ವಿರುದ್ಧ ರಾಜಕೀಯ ಪ್ರತೀಕಾರವಾಗಿದೆ ಎಂದು ಬಣ್ಣಿಸಿದ್ದರು.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ವಾದ್ರಾ ದಿಲ್ಲಿಯ ನ್ಯಾಯಾಲಯವೊಂದರ ಮೆಟ್ಟಿಲನ್ನೇರಿದ್ದು,ಇಡಿ ತನಿಖೆಗೆ ಸಹಕರಿಸುವಂತೆ ಅವರಿಗೆ ನಿರ್ದೇಶ ನೀಡಿದ್ದ ನ್ಯಾಯಾಲಯವು,ಲಂಡನ್‌ನಿಂದ ಮರಳಿದ ಬಳಿಕ ಫೆ.6ರಂದು ಇಡಿ ಮುಂದೆ ಹಾಜರಾಗುವಂತೆ ಸೂಚಿಸಿತ್ತು.
ಲಂಡನ್‌ನಲ್ಲಿ ಹೊಂದಿರುವ ಕೆಲವು ಆಸ್ತಿಗಳ ಖರೀದಿ ಮತ್ತು ವಹಿವಾಟುಗಳ ಬಗ್ಗೆ ವಾದ್ರಾರನ್ನು ಪ್ರಶ್ನಿಸಲಾಗುವುದು ಮತ್ತು ಅವರ ಹೇಳಿಕೆಯನ್ನು ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವಾದ್ರಾ ಅವರು ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿಯ ಖರೀದಿ ವೇಳೆ ಅಕ್ರಮ ಹಣ ವಹಿವಾಟು ನಡೆಸಿದ್ದರು ಎಂಬ ಆರೋಪಗಳಿಗೆ ಈ ಪ್ರಕರಣವು ಸಂಬಂಧಿಸಿದೆ.
ಪ್ರತ್ಯೇಕ ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.12ರಂದು ಇಡಿ ಎದುರು ಹಾಜರಾಗುವಂತೆ ರಾಜಸ್ಥಾನ ಉಚ್ಛ ನ್ಯಾಯಾಲಯವೂ ವಾದ್ರಾಗೆ ನಿರ್ದೇಶ ನೀಡಿದೆ.