ಅನಧಿಕೃತ ಹಣ ಹಿಂದೆಗೆತಗಳ ಹೊಣೆಗಾರಿಕೆಯಿಂದ ಬ್ಯಾಂಕುಗಳು ತಪ್ಪಿಸಿಕೊಳ್ಳುವಂತಿಲ್ಲ: ಕೇರಳ ಹೈಕೋರ್ಟ್

Update: 2019-02-06 14:42 GMT

ಕೊಚ್ಚಿ,ಫೆ.6: ತಮ್ಮ ಗ್ರಾಹಕರ ಖಾತೆಗಳಿಂದ ಅನಧಿಕೃತ ಹಣ ಹಿಂದೆಗೆತಗಳ ಹೊಣೆಗಾರಿಕೆಯಿಂದ ಬ್ಯಾಂಕುಗಳು ನುಣುಚಿಕೊಳ್ಳುವಂತಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯ ಹೇಳಿದೆ.

ಗ್ರಾಹಕರು ಎಸ್‌ಎಂಎಸ್ ಎಚ್ಚರಿಕೆಗಳಿಗೆ ಸ್ಪಂದಿಸದಿದ್ದರೂ ಅನಧಿಕೃತ ಹಣ ಹಿಂದೆಗೆತಗಳಿಗೆ ಬ್ಯಾಂಕುಗಳು ಹೊಣೆಗಾರರಾಗಿರುತ್ತವೆ ಎಂದೂ ನ್ಯಾ.ಪಿ.ಬಿ.ಸುರೇಶ ಕುಮಾರ ಅವರು ಸ್ಪಷ್ಟಪಡಿಸಿದರು.

ಎಸ್‌ಎಂಎಸ್ ಎಚ್ಚರಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುವ ಅಭ್ಯಾಸವನ್ನು ಹೊಂದಿರದ ಬ್ಯಾಂಕ್ ಖಾತೆದಾರರೂ ಇರುತ್ತಾರೆ. ಹೀಗಾಗಿ ಗ್ರಾಹಕರ ಬಾಧ್ಯತೆಗಳನ್ನು ನಿರ್ಧರಿಸಲು ಎಸ್‌ಎಂಎಸ್ ಎಚ್ಚರಿಕೆಗಳು ಆಧಾರವಾಗುವುದಿಲ್ಲ ಎಂದರು.

ತನ್ನ ಬ್ಯಾಂಕ್ ಖಾತೆಯಿಂದ ಅನಧಿಕೃತ ಹಿಂದೆಗೆತಗಳಿಂದಾಗಿ 2.4 ಲ.ರೂ.ಗಳನ್ನು ಕಳೆದುಕೊಂಡಿದ್ದ ಗ್ರಾಹಕನೋರ್ವನಿಗೆ ಪರಿಹಾರವನ್ನು ಒದಗಿಸುವಂತೆ ಸೂಚಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಎಸ್‌ ಬಿಐ ಸಲ್ಲಿಸಿದ್ದ ಮೆಲ್ಮನವಿಯನ್ನು ವಜಾಗೊಳಿಸಿದ ಸಂದರ್ಭ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಬಡ್ಡಿಸಹಿತ ತನ್ನ ಹಣವನ್ನು ಮರಳಿಸುವಂತೆ ಬ್ಯಾಂಕಿಗೆ ನಿರ್ದೇಶ ನೀಡುವಂತೆ ಗ್ರಾಹಕ ನ್ಯಾಯಾಲಯವನ್ನು ಕೋರಿದ್ದ.

ವಿವಾದಿತ ಹಣ ಹಿಂದೆಗೆತಗಳ ಬಗ್ಗೆ ಗ್ರಾಹಕನಿಗೆ ಎಸ್‌ಎಂಎಸ್ ಎಚ್ಚರಿಕೆಗಳನ್ನು ಕಳುಹಿಸಲಾಗಿತ್ತು ಮತ್ತು ತನ್ನ ಖಾತೆಯನ್ನು ತಕ್ಷಣ ತಡೆಹಿಡಿಯುವಂತೆ ಆತ ಕೋರಿಕೊಳ್ಳಬೇಕಿತ್ತು ಎಂದು ತಿಳಿಸಿದ್ದ ಎಸ್‌ಬಿಐ,ಎಸ್‌ಎಂಎಸ್ ಎಚ್ಚ ರಿಕೆಗಳಿಗೆ ಗ್ರಾಹಕ ಸ್ಪಂದಿಸದ್ದರಿಂದ ಆತನಿಗೆ ಸಂಭವಿಸಿರುವ ನಷ್ಟಕ್ಕೆ ತಾನು ಹೊಣೆಯಲ್ಲ ಎಂದು ವಾದಿಸಿತ್ತು.

ಬ್ಯಾಂಕು ತನ್ನ ಗ್ರಾಹಕನಿಗೆ ಸೇವೆಯನ್ನು ನೀಡುವಾಗ ಆತನ ಹಿತಾಸಕ್ತಿಗಳ ರಕ್ಷಣೆಗಾಗಿ ಸಾಕಷ್ಟು ಕಾಳಜಿ ವಹಿಸುವುದು ಮತ್ತು ಆತನ ಖಾತೆಯಿಂದ ಅನಧಿಕೃತ ಹಣ ಹಿಂದೆಗೆತಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಅದರ ಕರ್ತವ್ಯವಾಗಿದೆ ಎನ್ನವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಎಂದ ನ್ಯಾಯಾಲಯವು,ತನ್ನ ಗ್ರಾಹಕರಿಗೆ ನಷ್ಟವನ್ನುಂಟು ಮಾಡುವ ಎಲ್ಲ ರೂಪಗಳ ವಂಚನೆಗಳ ವಿರುದ್ಧ ಸುರಕ್ಷಿತ ವಿದ್ಯುನ್ಮಾನ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸುವುದು ಬ್ಯಾಂಕಿನ ಹೊಣೆಗಾರಿಕೆಯಾಗಿದೆ ಎಂದು ಸ್ಪಷ್ಟಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News