ನಿಮ್ಮ ಕಂಪ್ಯೂಟರ್ ಒಳಗೆ ನುಸುಳದಂತೆ ಮೋದಿ ಸರಕಾರವನ್ನು ತಡೆಯುತ್ತಿರುವ ಏಕೈಕ ರಾಜಕಾರಣಿ ಈಕೆ !
ಹೊಸದಿಲ್ಲಿ, ಫೆ.7: ಯಾವುದೇ ಕಂಪ್ಯೂಟರ್ ಯಾ ಸಾಮಾಜಿಕ ಜಾಲತಾಣ ಖಾತೆಗಳಲ್ಲಿರುವ ಮಾಹಿತಿಯನ್ನು ಪಡೆಯಲು ಹಾಗೂ ಅವುಗಳ ಮೇಲೆ ನಿಗಾ ಇಡಲು ಕೇಂದ್ರದ ಮೋದಿ ಸರಕಾರ ಹಲವು ಏಜನ್ಸಿಗಳಿಗೆ ಅಧಿಕಾರ ನೀಡಿದ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋದ ಏಕೈಕ ರಾಜಕಾರಣಿ ಪಶ್ಚಿಮ ಬಂಗಾಳದ ಕರೀಂಪುರ್ ಎಂಬ ಸಣ್ಣ ಪಟ್ಟಣದ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕಿ ಮಹುವಾ ಮೊಯಿತ್ರ.
ಮೋದಿ ಸರಕಾರದ ಆದೇಶದ ವಿರುದ್ಧ ಮಹುವಾ ಮೊಯಿತ್ರ ಸಲ್ಲಿಸಿರುವ ಮೂರು ಅಪೀಲುಗಳು ವಿಚಾರಣೆಗೆ ಬಾಕಿಯಿವೆ. ಮೊದಲ ಅಪೀಲಿನಲ್ಲಿ ಅವರು ಜನರ ಸಾಮಾಜಿಕ ಜಾಲತಾಣ ಪೋಸ್ಟುಗಳ ಮೇಲೆ ನಿಗಾ ಇರಿಸಿ ಆಧಾರ್ ಬಗ್ಗೆ ಇರುವ ಅಭಿಪ್ರಾಯ ತಿಳಿಯಲು ಯತ್ನಿಸಿದ ವಿಶಿಷ್ಟ ಗುರುತು ಪ್ರಾಧಿಕಾರದ ವಿರುದ್ಧ ಅಪೀಲು ಸಲ್ಲಿಸಿದ್ದರೆ, ಇನ್ನೊಂದು ಅಪೀಲು ಯಾವುದೇ ಕಂಪ್ಯೂಟರ್ ನಲ್ಲಿನ ಮಾಹಿತಿಗಳನ್ನು ಪಡೆಯಲು ಗೃಹ ಸಚಿವಾಲಯ ಹತ್ತು ಏಜನ್ಸಿಗಳಿಗೆ ನೀಡಿದ ಅಧಿಕಾರದ ವಿರುದ್ಧ ಸಲ್ಲಿಸಲಾಗಿದೆ. ಮೂರನೇ ಅಪೀಲಿನಲ್ಲಿ ಕಂಪ್ಯೂಟರುಗಳ ಮೇಲೆ ನಿಗಾ ಇಡುವ ಕೇಂದ್ರ ಸರಕಾರದ ಆದೇಶಕ್ಕೆ ಪಶ್ಚಿಮ ಬಂಗಾಳದಲ್ಲಿ ಮಧ್ಯಂತರ ತಡೆಯಾಜ್ಞೆ ಕೋರಿದ್ದಾರೆ.
ಸರಕಾರದ ಕ್ರಮಗಳು ಲಕ್ಷಗಟ್ಟಲೆ ಜನರ ಖಾಸಗಿತನವನ್ನು ಉಲ್ಲಂಘಿಸುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ ಎಂದು 42 ವರ್ಷದ ಮೊಯಿತ್ರ ಹೇಳುತ್ತಾರಲ್ಲದೆ, ತಾನು ಈ ಮೂರೂ ಅಪೀಲುಗಳನ್ನು ವೈಯಕ್ತಿಕವಾಗಿ ಸಲ್ಲಿಸಿದ್ದಾಗಿ ಹೇಳುತ್ತಾರೆ.
ತನ್ನ ಬಾಲ್ಯವನ್ನು ಅಸ್ಸಾಂ ಮತ್ತು ಕೊಲ್ಕತ್ತಾದಲ್ಲಿ ಕಳೆದ ಮೊಯಿತ್ರ ನಂತರ ಅಮೆರಿಕಾದ ಮೆಸಾಚುಸೆಟ್ಸ್ ನಲ್ಲಿ ಅರ್ಥಶಾಸ್ತ್ರ ಕಲಿತು ಅಮೆರಿಕಾ ಮತ್ತು ಲಂಡನ್ ನಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಆಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಅವರು ಲಂಡನ್ ನಗರದ ಜೆ ಪಿ ಮೋರ್ಗನ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತದಲ್ಲಿ ರಾಜಕೀಯಕ್ಕೆ ಧುಮಕಲು ನಿರ್ಧರಿಸಿದ್ದರು. 2009ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಅವರು ಪಕ್ಷ ಸಂಘಟನೆಯ ಕೊರತೆಯನ್ನು ಮನಗಂಡು 2010ರಲ್ಲಿ ವಿಮಾನ ಪ್ರಯಾಣದ ವೇಲೆ ಮಮತಾ ಬ್ಯಾನರ್ಜಿಯನ್ನು ಭೇಟಿಯಾದ ನಂತರ ಟಿಎಂಸಿ ಸೇರಿದ್ದರು. 2016ರ ವಿಧಾನಸಭಾ ಚುನಾವಣೆ ಸ್ಪರ್ಧಿಸಿ ಆಕೆ ವಿಜಯಿಯಾಗಿದ್ದರು.
ಕಾಂಗ್ರೆಸ್ ಪಕ್ಷದಿಂದ ದೂರ ಸರಿದು ಬೇರೆ ಪ್ರಬಲ ಪಕ್ಷ ರಚಿಸಿ ಯಶಸ್ವಿಯಾದ ಏಕೈಕ ರಾಜಕಾರಣಿ ಮಮತಾ ಬ್ಯಾನರ್ಜಿ ಎಂದು ಮಹುವಾ ಮೊಯಿತ್ರ ಹೇಳುತ್ತಾರೆ.