×
Ad

ಆಲಿಘರ್ ಮುಸ್ಲಿಂ ವಿವಿ ಕ್ಯಾಂಪಸ್ ನಲ್ಲಿ ಹಿಂದೂ ದೇವಳ ನಿರ್ಮಿಸಿ: ಉಪಕುಲಪತಿಗೆ ಬಿಜೆಪಿ ನಾಯಕನ ಪತ್ರ

Update: 2019-02-08 14:47 IST

ಆಲಿಘರ್, ಫೆ. 8: ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಮುಕೇಶ್ ಸಿಂಗ್ ಲೋಧಿ ಅವರು ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ತಾರಿಖ್ ಮನ್ಸೂರ್ ಅವರಿಗೆ ಪತ್ರ ಬರೆದು ವಿವಿ ಆವರಣದಲ್ಲಿ ಅಲ್ಲಿನ ಹಿಂದೂ ವಿದ್ಯಾರ್ಥಿಗಳಿಗಾಗಿ ದೇವಸ್ಥಾನ ನಿರ್ಮಿಸಬೇಕೆಂದು ಆಗ್ರಹಿಸಿದ್ದಾರೆ. 

ಉಪಕುಲಪತಿಗಳಿಗೆ ಉತ್ತರ ನೀಡಲು 15 ದಿನ ಕಾಲಾವಕಾಶ ನೀಡಿರುವ  ಸಿಂಗ್,  ಇಲ್ಲದೇ ಹೋದಲ್ಲಿ ಸಾವಿರಾರು ಯುವ ಮೋರ್ಚಾ ಕಾರ್ಯಕರ್ತರು  ಕ್ಯಾಂಪಸ್ ಪ್ರವೇಶಿಸಿ ಮೂರ್ತಿ ಸ್ಥಾಪನೆ ನಡೆಸುತ್ತಾರೆ ಎಂದು ಎಚ್ಚರಿಸಿದ್ದಾರೆ.

''ಹಿಂದೂಗಳು ಮತ್ತು ಮುಸ್ಲಿಮರು ವಿವಿಯ ಎರಡು ಕಣ್ಣುಗಳಿದ್ದಂತೆ ಎಂದು ವಿವಿ ಸ್ಥಾಪಕರಾದ ಸರ್ ಸಯ್ಯದ್ ಅಹ್ಮದ್ ಖಾನ್ ಹೇಳಿದ್ದರು. ಇದರಿಂದ  ಸ್ಫೂರ್ತಿ ಪಡೆದು ವಿವಿ ಕ್ಯಾಂಪಸ್ ನಲ್ಲಿ ಹಿಂದೂ ದೇವಸ್ಥಾನಕ್ಕೆ ನೀವು ಅನುಮತಿಸಬೇಕು'' ಎಂದು ಪತ್ರದಲ್ಲಿ ಅವರು ವಿವರಿಸಿದ್ದಾರೆ.

ವಿವಿ ಆವರಣದಲ್ಲಿ ದೇವಳವಿಲ್ಲದೇ ಇರುವುದರಿಂದ ಅಲ್ಲಿನ ಸಾವಿರಾರು ಹಿಂದೂ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಸಲ್ಲಿಸಲು ಕಷ್ಟವಾಗುತ್ತಿದೆ ಎಂಬ ಕಾರಣವನ್ನೂ ನೀಡಿರುವ ಅವರು ಹಿಂದೂ ದೇವಳ ನಿರ್ಮಿಸಲು ಅನುಮತಿಸಿದ್ದೇ ಆದಲ್ಲಿ  ಅದು ದೇಶದಲ್ಲಿ ಹಿಂದೂ-ಮುಸ್ಲಿಂ ಏಕತೆಗೆ ಸಹಕರಿಸಿ ಉತ್ತಮ ಸಂದೇಶ ನೀಡುವುದು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ತತ್ವವನ್ನು ಉಪಕುಲಪತಿಗಳು ಪಾಲಿಸಬೇಕು'' ಎಂದು ಲೋಧಿ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಲೋಧಿಯ ಪತ್ರ ಇನ್ನೂ ತಲುಪಿಲ್ಲ, ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ವಿವಿ ವಕ್ತಾರ ಶಫಿ ಕಿದ್ವಾಯಿ ಹೇಳಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಪ್ರಚಾರಕ್ಕಾಗಿ ಇಂತಹ ಬೇಡಿಕೆಯಿಡಲಾಗುತ್ತಿದೆ ಎಂದು ಎಎಂಯು ವಿದ್ಯಾರ್ಥಿ ಯೂನಿಯನ್ ಉಪಾಧ್ಯಕ್ಷ ಹಂಝ ಸುಫಿಯಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News