ಭದ್ರತೆ ಕೋರಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ್ದ ಅಪೀಲು ತಿರಸ್ಕರಿಸಿದ ಸುಪ್ರೀಂ ಕೋರ್ಟ್

Update: 2019-02-08 10:01 GMT

ಹೊಸದಿಲ್ಲಿ, ಫೆ.8: ತನ್ನ ಕುಟುಂಬಕ್ಕೆ ಭದ್ರತೆ ಕೋರಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು ಮಾಡಿರುವ ಅಪೀಲನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಈ ಅಪೀಲಿನೊಂದಿಗೆ ಗುಜರಾತ್ ಹೈಕೋರ್ಟ್‍ ಗೆ ಮನವಿ ಸಲ್ಲಿಸುವಂತೆ ಜಸ್ಟಿಸ್ ಎ ಕೆ ಸಿಕ್ರಿ ಹಾಗೂ ಜಸ್ಟಿಸ್ ಎಸ್ ಅಬ್ದುಲ್ ನಝೀರ್ ಅವರ ಪೀಠ ಭಟ್ ಅವರಿಗೆ ಸೂಚಿಸಿದೆ.

ವಕೀಲರೊಬ್ಬರನ್ನು ಬಂಧಿಸುವ ಸಲುವಾಗಿ ಅವರ ಕೊಠಡಿಯಲ್ಲಿ ಉದ್ದೇಶಪೂರ್ವಕವಾಗಿ ಡ್ರಗ್ಸ್ ಇರಿಸಲಾಗಿತ್ತೆಂಬ ಇಪ್ಪತ್ತೆರಡು ವರ್ಷ ಹಳೆಯದಾದ ಪ್ರಕರಣದ ಪೊಲೀಸ್ ತನಿಖೆ ಹಾಗೂ ಸಂಜೀವ್ ಭಟ್ ಅವರ ಪೊಲೀಸ್ ಕಸ್ಟಡಿಯನ್ನು ಪ್ರಶ್ನಿಸಿ ಅವರ ಪತ್ನಿ ಶ್ವೇತಾ ಭಟ್ ಸಲ್ಲಿಸಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷದ ಅಕ್ಟೋಬರ್ 4ರಂದು ತಿರಸ್ಕರಿಸಿ ಈ ನಿಟ್ಟಿನಲ್ಲಿ ಸೂಕ್ತ ವೇದಿಕೆಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಗತಿಯಲ್ಲಿರುವ ತನಿಖೆಯಲ್ಲಿ ಹಸ್ತಕ್ಷೇಪ ನಡೆಸುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಕೋರ್ಟ್ ಹೊಂದಿತ್ತು.

ಅನುಮತಿಯಿಲ್ಲದೆ ಕರ್ತವ್ಯದಿಂದ ಗೈರಾದುದಕ್ಕೆ ಹಾಗೂ ಅಧಿಕೃತ ವಾಹನಗಳನ್ನು ದುರಪಯೋಗ ಪಡಿಸಿದ ಆರೋಪದ ಮೇಲೆ ಭಟ್ ಅವರನ್ನು 2011ರಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿದ್ದರೆ, ನಂತರ ಆಗಸ್ಟ್ 2015ರಲ್ಲಿ ಅವರನ್ನು ಉಚ್ಛಾಟಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News