ಬೆಳೆ ವಿಮೆ ಎಂಬ ದುರಂತ ನಾಟಕ

Update: 2019-02-08 10:58 GMT

ಭಾಗ- 2

ಇನ್ನು ರಾಜ್ಯದಲ್ಲಿ ರೈತರ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡಬಲ್ಲ ಫಸಲ್ ಬಿಮಾ ಕಥೆ ಏನಾಗಿದೆ? ಅದಕ್ಕೆ 2017ರಲ್ಲಿ ಬಳ್ಳಾರಿಯಲ್ಲಿ ನಡೆದ ದುರಂತ ನಾಟಕವನ್ನು ನೋಡಬೇಕು.

ಬಳ್ಳಾರಿ-ಎಲ್ಲರಿಗೂ ಗೊತ್ತಿರುವಂತೆ ರಾಜ್ಯದಲ್ಲೇ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುವ ಜಿಲ್ಲೆ. ಅದರಲ್ಲೂ ಬಳ್ಳಾರಿ ತಾಲೂಕು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ಅತ್ಯಧಿಕ. ಜಿಲ್ಲೆಯಲ್ಲಿ ಪ್ರತೀ ವರ್ಷ ಸುಮಾರು ಎರಡು ಲಕ್ಷ ಎಕರೆಯಲ್ಲಿ ಗುಂಟೂರು, ಬ್ಯಾಡಗಿ ಎರಡೂ ಬಗೆಯ ಮೆಣಸಿನಕಾಯಿ ಬಿತ್ತುತ್ತಾರೆ. ಒಂದು ಲಕ್ಷ ಎಕರೆಗೆ ತುಂಗಭದ್ರಾ ನೀರು ಬಂದರೆ, ಇನ್ನೊಂದು ಲಕ್ಷ ಎಕರೆ ಮಳೆಯಾಶ್ರಿತ. ಬಳ್ಳಾರಿಯ ತೋಟಗಾರಿಕಾ ಉಪನಿರ್ದೇಶಕ ಚಿದಾನಂದಪ್ಪಅವರು ಹೇಳುವಂತೆ 2017ರಲ್ಲಿ ಮೊದಲ ಬಾರಿ ಮೆಣಸಿನಕಾಯಿ ಬೆಳೆಯನ್ನು ಫಸಲ್ ಬಿಮಾ ಯೋಜನೆಯಡಿ ಅಳವಡಿಸಲಾಯಿತು. ಅದೂ ಯಾವ ರೀತಿ? ‘‘ಬಳ್ಳಾರಿಯ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಜಂಟಿ ನಿರ್ದೇಶಕರುಗಳನ್ನೆಲ್ಲ ಒಟ್ಟು ಮಾಡಿ, ಜಿಲ್ಲಾಧಿಕಾರಿಗಳು ಪ್ರತಿಯೊಬ್ಬ ರೈತರನ್ನೂ ನೋಂದಾವಣೆ ಮಾಡಿಸಿ ಅಂತ ತಾಕೀತು ಮಾಡಿ ಆಂದೋಲನದ ರೀತಿಯಲ್ಲಿ ಮಾಡಿದರು’’ ಎನ್ನುತ್ತಾರೆ ರೈತ ಮುಖಂಡ ಜೆ.ಎಂ. ವೀರಸಂಗಯ್ಯ. ಅಂತೂ ತೋಟಗಾರಿಕೆ ಉಪನಿರ್ದೇಶಕರ ಪ್ರಕಾರ ಒಂದು ಹೆಕ್ಟೇರ್‌ಗೆ 4,800 ರೂಪಾಯಿ ವಿಮಾ ಕಂತು ತೆತ್ತು, ಒಟ್ಟು ಒಂಬತ್ತು ಸಾವಿರ ಮಂದಿ ರೈತರು ಫಸಲ್ ಬಿಮಾ ವ್ಯಾಪ್ತಿಗೆ ಬಂದರು; 43,500 ಎಕರೆ ಯೋಜನೆ ಅಡಿ ಬಂತು.

ಅಲ್ಲಿಯ ರೈತ ಶರಣಪ್ಪಹೇಳುವ ಪ್ರಕಾರ ಪ್ರೀಮಿಯಂ ಕಟ್ಟಿದ್ದು ಎಕರೆಗೆ ಮೂರು ಸಾವಿರ ರೂಪಾಯಿ. (ಹೆಕ್ಟೇರ್‌ಗೆ 4,800 ರೂ. ಅಲ್ಲ.) ಎಕರೆಗೆ ಮೂರು ಸಾವಿರ ಅಂದರೆ 43,500 ಎಕರೆಗೆ 13 ಕೋಟಿ ರೂಪಾಯಿಗೂ ಹೆಚ್ಚು. ಇಷ್ಟು- ನೇರ ವಿಮಾ ಸಂಸ್ಥೆಯ ಗುಡಾಣ ಸೇರಿದ ಹಣ. (ಬಳ್ಳಾರಿಯಲ್ಲಿ ಫಸಲ್ ಬಿಮಾ ಹೊಣೆ- ಸರಕಾರಿ ಖಾಸಗಿ ಪಾಲುದಾರಿಕೆಯ ಯೂನಿವರ್ಸಲ್ ಸಾಂಪೊ ಜನರಲ್ ಇನ್ಶೂರೆನ್ಸ್ಸ್ ಕಂಪೆನಿಯದ್ದು.) ಈ ಮೊತ್ತದ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಪಾಲೂ ವಿಮಾ ಸಂಸ್ಥೆಗೆ ಸೇರುತ್ತದೆ.

ಇಷ್ಟೆಲ್ಲ ಆಗಿ 2017ರಲ್ಲಿ ಬರ ಬಂತು. ಮಳೆ ಕಮ್ಮಿ ಆಯಿತು. ತುಂಗಭದ್ರಾ ಅಣೆಕಟ್ಟಿನಿಂದ ನೀರು ಬರಲಿಲ್ಲ. ಮಳೆಯಾಶ್ರಿತ ಪ್ರದೇಶಗಳಲ್ಲಿ ಅಂತರ್ಜಲ ಬತ್ತಿ ಬೋರ್‌ವೆಲ್‌ಗಳೂ ಕೈ ಕೊಟ್ಟವು..

ಜೆ.ಎಂ. ವೀರಸಂಗಯ್ಯ, ರೈತ ಮುಖಂಡ: ‘‘ಎಲ್ಲ ಕಡೆ ಬೆಳೆ ಫೇಲ್ ಆಯ್ತು. ಸಿರಗುಪ್ಪ, ಬಳ್ಳಾರಿ ತಾಲೂಕುಗಳಲ್ಲಿ ಒಂದು ಪೈಸೆನೂ ಬರಲಿಲ್ಲ... ಕೇಂದ್ರ ಅಧ್ಯಯನ ತಂಡ ನಮ್ಮ ಭಾಗಕ್ಕೆ ಬಂತು. ಅವರಿಗೆ ಎಲ್ಲ ಮಾಹಿತಿ ಕೊಟ್ಟು ಅವರು ಹಂಡ್ರೆಡ್ ಪರ್ಸೆಂಟ್ ಬೆಳೆ ನಷ್ಟ ಅಂತ ರಿಪೋರ್ಟೂ ಕೊಟ್ಟಾಯ್ತು. ಆನಂತರ ಬೆಳೆ ವಿಮೆ ಕೊಡಬೇಕು, ಅವರವರ ಬ್ಯಾಂಕ್ ಅಕೌಂಟಿಗೆ ಹಾಕಬೇಕು ಅಂತ ನಿಯಮ. ಈಗ ನಾವು ಕೇಳಲಿಕ್ಕೆ ಹೋದ್ರೆ....’’
ಏನಾಯಿತು? ಇವರು ಕೇಳಲಿಕ್ಕೆ ಹೋದಾಗ ಏನಾಯಿತು?

ಬಾಂಬ್ ಬಿತ್ತು! ಬಳ್ಳಾರಿಯಲ್ಲಿ ಫಸಲ್ ಬಿಮಾ ಯೋಜನೆ ಪಟ್ಟಿಯಲ್ಲಿ ಮೆಣಸಿನಕಾಯಿ ಇರಲೇ ಇಲ್ಲವಂತೆ! ಪಟ್ಟಿಯಲ್ಲೇ ಇರದ ಬೆಳೆಗೆ ಇಡೀ ಸರಕಾರಿ ಯಂತ್ರ ಹುರಿಗೊಂಡು ಕೋಟ್ಯಂತರ ರೂಪಾಯಿ ವಿಮಾ ಕಂತು ಕಟ್ಟಿಸಿಕೊಂಡಿತ್ತು! ಸ್ವತಃ ಜಿಲ್ಲಾಧಿಕಾರಿ ಟೊಂಕ ಕಟ್ಟಿ ನಿಂತಿದ್ದರು!... ಆಯಿತು, ಈಗ ಜವಾಬ್ದಾರಿ ಹೊರುವವರು ಯಾರು?

ದುರದೃಷ್ಟವಶಾತ್ ಹೊಣೆ ಹೊರಲು ಯಾರೂ ತಯಾರಿರಲಿಲ್ಲ. ಜಿಲ್ಲಾಧಿಕಾರಿಗಳನ್ನೇ ಹೋಗಿ ಕೇಳಿದಾಗ ಮೇಲಿನಿಂದ ಆದೇಶ ಬಂದಿರುತ್ತೆ, ನಾವು ಕಟ್ಟಿಸಿಕೊಂಡಿರ್ತೀವಿ. ಇನ್ನೇನಿದ್ರೂ ನೀವು ವಿಮಾ ಸಂಸ್ಥೆಯನ್ನೇ ಕೇಳಬೇಕು ಅನ್ನುವ ಉತ್ತರ!! ಅಲ್ಲಿನ ರೈತ ವೀರಣ್ಣ ಗೌಡ ಹೇಳುವಂತೆ, ವಿಮಾ ಕಂತು ಕಟ್ಟಿಸಿಕೊಂಡಿದ್ದಷ್ಟೇ, ಅದಾದ ಮೇಲೆ ವಿಮಾ ಅಧಿಕಾರಿಗಳಾಗಲೀ, ಬ್ಯಾಂಕ್ ಅಧಿಕಾರಿಗಳಾಗಲೀ ಯಾರೂ ಅತ್ತ ತಲೆ ಹಾಕಲಿಲ್ಲ. ನಷ್ಟದ ಅಂದಾಜೂ ಮಾಡಲಿಲ್ಲ. ಸರಿ ರೈತ ಮುಂದಾಳುಗಳು ರೈತರನ್ನು ಒಗ್ಗೂಡಿಸಿಕೊಂಡು ಹೋರಾಟ ಶುರು ಮಾಡಿದರು.

ವೀರಸಂಗಯ್ಯ: ‘‘ನಾವು ಚಳವಳಿ ಪ್ರಾರಂಭ ಮಾಡಿದಾಗ ರೈತಸಂಘದ ಲೀಡರ್‌ಗಳಿಗೆ ವಿಮಾ ಕಂಪೆನಿ ಮ್ಯಾನೇಜರ್ ಫೋನ್ ಮಾಡಿ ರೈತರೇನು ಪ್ರೀಮಿಯಂ ಕಟ್ಟಿದ್ದಾರೆ, ಆ ಅಮೌಂಟ್ ಬ್ಯಾಂಕಿಗೆ ಹಾಕಿಸಿಬಿಡ್ತೀನಿ ಅಂತ... ನಾನಂದೆ- ನಾವೇನೂ ನಿಮಗೆ ಕೈಗಡ ಕೊಟ್ಟಿರೋದಲ್ಲ, ಪಾಲಿಸಿ ಮ್ಯಾಟರ್ ಮೇಲೆ ಬೆಳೆ ನಷ್ಟ ಆದರೆ ಕಟ್ಟಿಕೊಡಬೇಕು ಅಂತ ಇನ್ಶೂರೆನ್ಸ್ಸ್ ಕಟ್ಟಿದೀವಿ....’’

ಈ ಜಗ್ಗಾಟ ಮುಂದುವರಿಯಿತು. ತಿಂಗಳುಗಳ ಹೋರಾಟದ ನಂತರ ವಿಮಾ ಸಂಸ್ಥೆ ಪರಿಹಾರವೇನೋ ಕೊಟ್ಟಿತು. ಆದರೆ ಪರಿಹಾರ ಸಿಕ್ಕಿದ್ದು ನೂರಕ್ಕೆ ಹತ್ತು-ಹದಿನೈದು ರೈತರಿಗೆ ಮಾತ್ರ. ಅದೂ ವೀರಸಂಗಯ್ಯನವರು ಹೇಳುವಂತೆ- ‘‘ಬರಬೇಕಾದ ಹಣದಲ್ಲಿ ಮೂರನೇ ಒಂದು ಭಾಗದಷ್ಟು ಮಾತ್ರ....’’
ಅದಕ್ಕೇ ಮತ್ತೆ, ‘‘ಈ ಫಸಲ್ ಬಿಮಾ ಯೋಜನೆ, ರಫೇಲ್‌ಗಿಂತಲೂ ಮಿಗಿಲಾದ ಕರ್ಮಕಾಂಡ’’ ಎಂದು ಗ್ರಾಮೀಣ ಪತ್ರಿಕೋದ್ಯಮದ ಹರಿಕಾರ, ಪತ್ರಕರ್ತ ಪಿ. ಸಾಯಿನಾಥ್ ಈಚೆಗೆ ಬಣ್ಣಿಸಿದ್ದು.

ರಫೇಲ್ ಬಗ್ಗೆಯಂತೂ ಈಗ ಎಲ್ಲರಿಗೂ ಗೊತ್ತು. 126 ಯುದ್ಧವಿಮಾನ ಖರೀದಿಸಬೇಕಾದ ಜಾಗದಲ್ಲಿ ಅಷ್ಟೇ ದುಡ್ಡಿಗೆ ಬರೀ 36 ವಿಮಾನಕ್ಕೆ ಬೇಡಿಕೆಯಿರಿಸಿ, ಪಾಲುದಾರನಾಗಿರಬೇಕಿದ್ದ ಸರಕಾರಿ ಸ್ವಾಮ್ಯದ ಎಚ್‌ಎಎಲ್ ಸಂಸ್ಥೆಯನ್ನು ಬದಿಗೊತ್ತಿ, ಆ ಜಾಗದಲ್ಲಿ ವಿಮಾನ ನಿರ್ಮಾಣ ಕ್ಷೇತ್ರದ ಗಂಧ ಗಾಳಿ ತಿಳಿಯದ ಅನಿಲ್ ಅಂಬಾನಿಯವರಿಗೆ ಅವಕಾಶ ಕೊಟ್ಟ ಸುಮಾರು ನಲವತ್ತು ಸಾವಿರ ಕೋಟಿ ರೂಪಾಯಿನ ಹಗರಣವಿದು-ಇದು ಆರೋಪ.

ಫಸಲ್ ಬಿಮಾ ಯೋಜನೆ, ಈ ರಫೇಲ್‌ಗಿಂತಲೂ ಹೇಗೆ ಭಯಾನಕವಾದದ್ದು ಎನ್ನಲು ಸಾಯಿನಾಥ್ ತಮ್ಮದೇ ಸಮಜಾಯಿಷಿ ಕೊಟ್ಟರು. ಅವರು ನೀಡಿದ ಮಹಾರಾಷ್ಟ್ರದ ಉದಾಹರಣೆ ಗಮನಿಸಿ: ಅ ರಾಜ್ಯದಲ್ಲಿ ಒಟ್ಟು 2 ಲಕ್ಷ 80 ಸಾವಿರ ರೈತರು ಸೋಯಾ ಬಿತ್ತನೆ ಮಾಡಿದರು. ಆ ಪೈಕಿ ಒಂದೇ ಒಂದು ಜಿಲ್ಲೆಯಲ್ಲಿ ರೈತರು ಕಟ್ಟಿದ ವಿಮಾ ಪ್ರೀಮಿಯಂ ಮೊತ್ತ 19.2 ಕೋಟಿ ರೂಪಾಯಿ. ಅದರ ಮೇಲೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಲಾ 77 ಕೋಟಿ ರೂಪಾಯಿಗಳನ್ನು ವಿಮಾ ಸಂಸ್ಥೆಗೆ ನೀಡಿದವು. ಅಂದರೆ ಒಟ್ಟು 173 ಕೋಟಿ ವಿಮಾ ಸಂಸ್ಥೆಯ- ಅಂದರೆ ಅಂಬಾನಿಯವರ ರಿಲಯನ್ಸ್ ವಿಮಾ ಸಂಸ್ಥೆಯ ಕೈ ಸೇರಿತು. ರಾಜ್ಯದಲ್ಲಿ ಬೆಳೆದ ಅಷ್ಟೂ ಸೋಯಾ ನಷ್ಟವಾಯಿತು. ರೈತರು ವಿಮಾ ಮೊತ್ತ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರು. ಆಗ ಅದೊಂದು ಜಿಲ್ಲೆಯಲ್ಲಿ ವಿಮಾ ಸಂಸ್ಥೆ ವಿತರಿಸಿದ ಪರಿಹಾರ ಮೊತ್ತ 30 ಕೋಟಿ ರೂ. ಮಾತ್ರ. ಅಂದರೆ ರಿಲಯನ್ಸ್ ಸಂಸ್ಥೆ, ಒಂದೇ ಒಂದು ರೂಪಾಯಿ ಹೂಡದೆ ಅದೊಂದೇ ಜಿಲ್ಲೆಯಲ್ಲಿ ನುಂಗಿಹಾಕಿದ ಲಾಭದ ಮೊತ್ತ- 143 ಕೋಟಿ ರೂಪಾಯಿ!... ಒಂದೇ ಜಿಲ್ಲೆಯಲ್ಲಿ ವಹಿವಾಟು ಇಷ್ಟಾದರೆ, ಒಟ್ಟು ರಾಜ್ಯದಲ್ಲಿ? ಇಡೀ ದೇಶದಲ್ಲಿ?...
ಫಸಲ್ ಬಿಮಾ ಜಾರಿಯಾದ 2016ರ ಜೂನ್‌ನಿಂದ ನವೆಂಬರ್‌ವರೆಗಿನ ಒಂದೇ ಮುಂಗಾರು ಹಂಗಾಮಿನಲ್ಲಿ ವಿಮಾ ಸಂಸ್ಥೆಗಳಿಗೆ ಒಟ್ಟು ಹತ್ತು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಲಾಭವಾಗಿದೆ ಎಂಬ ಸಂಗತಿ ವಿಜ್ಞಾನ ಮತ್ತು ಪರಿಸರ ಕೇಂದ್ರ ಎಂಬ ಸರಕಾರೇತರ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ! ಇತ್ತ ದಿಕ್ಕುಗಾಣದ ರೈತರು ಆತ್ಮಹತ್ಯೆಗೆ ಶರಣಾಗುತ್ತಲೇ ಇದ್ದಾರೆ.

ಅಂದರೇನು? ಬೆಳೆ ವಿಮೆ ಬಾಬ್ತಿನ ಮೇಲೆ ಸರಕಾರದ ನಿಯಂತ್ರಣ ತಪ್ಪಿಸಿ ಖಾಸಗಿ ಕೈಗಳಿಗೆ ವಹಿಸಿದ ಉದ್ದೇಶ ಒಂದೇ: ಕೇವಲ ಕಾರ್ಪೊರೇಟ್ ಉದ್ಯಮಿಗಳ ಹೊಟ್ಟೆಯನ್ನು ತುಂಬಿಸುವುದು. ಸಾವಿನ ಅಂಚಿನಲ್ಲಿ ನಿಂತಿರುವ ರೈತನ ತಲೆ ಒಡೆದು ಲಕ್ಪತಿಗಳ ಗುಡಾಣ ತುಂಬುವ ಬ್ರಹ್ಮಾಂಡ ದ್ರೋಹವಿದು.

ಹಾಗಾದರೆ ಬೆಳೆ ವಿಮೆ ಯೋಜನೆಯೇ ಬೇಡವೇ? ಹಾಗೆ ಹೇಳಲಾಗದು. ವಿಮಾ ಯೋಜನೆಯಿಂದ ರೈತರಿಗೆ ನಿಜಕ್ಕೂ ಉಪಯೋಗವಾಗಬೇಕಿದ್ದರೆ, ಏನೇನು ಮಾಡಬೇಕೆಂದು ಸೂಚಿಸಬಲ್ಲ ಹಲವು ಕೃಷಿ ತಜ್ಞರು ನಮ್ಮಲ್ಲಿದ್ದಾರೆ. ಸರಕಾರ ಹಾಗಾದರೂ ಮಾಡಲಿ. ಇಲ್ಲವಾದರೆ ಸದ್ಯಕ್ಕೆ ಈ ಹಗಲು ದರೋಡೆಯನ್ನು ನಿಲ್ಲಿಸುವುದೇ ರೈತರಿಗೆ ಮಾಡಬಹುದಾದ ದೊಡ್ಡ ಉಪಕಾರ.

Writer - ಎನ್.ಎಸ್. ಶಂಕರ್

contributor

Editor - ಎನ್.ಎಸ್. ಶಂಕರ್

contributor

Similar News