ಲಡಾಖ್ ಈಗ ಪ್ರತ್ಯೇಕ ವಿಭಾಗ

Update: 2019-02-08 14:15 GMT

ಜಮ್ಮು,ಫೆ.8: ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿರುವ ಜಮ್ಮು-ಕಾಶ್ಮೀರ ಆಡಳಿತವು ಲಡಾಖ್‌ಗಾಗಿ ಪ್ರತ್ಯೇಕ ವಿಭಾಗವನ್ನು ಸೃಷ್ಟಿಸಿರುವುದಾಗಿ ಶುಕ್ರವಾರ ಪ್ರಕಟಿಸಿದೆ. ಲಡಾಖ್ ಈವರೆಗೆ ಕಾಶ್ಮೀರ ವಿಭಾಗದ ಅಂಗವಾಗಿತ್ತು.

ಕಾಶ್ಮೀರ ಮತ್ತು ಜಮ್ಮು ವಿಭಾಗಗಳಂತೆ ಲಡಾಖ್ ಇನ್ನು ಸಂಪೂರ್ಣ ಆಡಳಿತಾತ್ಮಕ ಮತ್ತು ಕಂದಾಯ ವಿಭಾಗವಾಗಿರುತ್ತದೆ ಮತ್ತು ಪ್ರತ್ಯೇಕ ವಿಭಾಗಾಧಿಕಾರಿಗಳು ಹಾಗೂ ಐಜಿಪಿಯನ್ನು ಹೊಂದಿರುತ್ತದೆ ಎಂದು ಆಡಳಿತವು ಆದೇಶದಲ್ಲಿ ತಿಳಿಸಿದೆ.

ಈ ನಿರ್ಧಾರವು ಲಡಾಖ್ ಪ್ರದೇಶದ ಜನತೆಯ ಆಡಳಿತ ಮತ್ತು ಅಭಿವೃದ್ಧಿ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ನೆರವಾಗಲಿದೆ ಎಂದು ಅದು ಹೇಳಿದೆ.

ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳನ್ನೊಳಗೊಂಡಿರುವ ಲಡಾಖ್ ಜಮ್ಮು-ಕಾಶ್ಮೀರದಲ್ಲಿ ವಿರಳ ಜನಸಂಖ್ಯೆಯ ಪ್ರದೇಶಗಳಲ್ಲೊಂದಾಗಿದ್ದು,ರಾಜ್ಯದಲ್ಲಿಯ ಅತ್ಯಂತ ಎತ್ತರದ ಪ್ರಸ್ತಭೂಮಿಯಾಗಿದೆ. ಅದರ ಹೆಚ್ಚಿನ ಭಾಗಗಳು ಸಮುದ್ರ ಮಟ್ಟಕ್ಕಿಂತ 9,800 ಅಡಿಗೂ ಹೆಚ್ಚಿನ ಎತ್ತರದಲ್ಲಿವೆ.

ಭೌಗೋಳಿಕವಾಗಿ ಪ್ರತ್ಯೇಕವಾಗಿರುವ ಈ ಪ್ರದೇಶವು ದುರ್ಗಮವಾಗಿದ್ದು,ವರ್ಷದಲ್ಲಿ ಸುಮಾರು ಆರು ತಿಂಗಳುಗಳ ಕಾಲ ಇತರ ಭೂಪ್ರದೇಶಗಳೊಂದಿಗೆ ಸಂಪರ್ಕವನ್ನು ಕಡಿದುಕೊಂಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News