×
Ad

ಕರ್ನಾಟಕದ ಶಾಸಕರಿಗೆ ಆಮಿಷವೊಡ್ಡುತ್ತಿರುವ ಫಡ್ನವೀಸ್: ಎನ್‌ಸಿಪಿ ಆರೋಪ

Update: 2019-02-08 19:50 IST

ಮುಂಬೈ,ಫೆ.8: ಕರ್ನಾಟಕದಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರವನ್ನುರುಳಿಸುವ ಪ್ರಯತ್ನವಾಗಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ಶಾಸಕರಿಗೆ 50 ಕೋ.ರೂ.ಗಳನ್ನು ನೀಡುವುದಾಗಿ ಓಲೈಸಿದ್ದರೆನ್ನಲಾದ ಆಡಿಯೊ ತುಣುಕಿಗೆ ಸಂಬಂಧಿಸಿದಂತೆ ಎನ್‌ಸಿಪಿಯು ಶುಕ್ರವಾರ ಬಿಜೆಪಿಯ ವಿರುದ್ಧ ತೀವ್ರ ದಾಳಿ ನಡೆಸಿದೆ.

ಯಡಿಯೂರಪ್ಪ ಅವರು ಜೆಡಿಎಸ್ ಶಾಸಕ ನಾಗನಗೌಡ ಅವರಿಗೆ ಆಮಿಷಗಳನ್ನು ಒಡ್ಡಲು ಪ್ರಯತ್ನಿಸಿದ್ದರು ಎನ್ನಲಾದ ಎರಡು ಆಡಿಯೊ ತುಣುಕುಗಳನ್ನು ಶುಕ್ರವಾರ ಬಿಡುಗಡೆಗೊಳಿಸಿದ ಕುಮಾರಸ್ವಾಮಿ,ಬಿಜೆಪಿ ತನ್ನ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ಯಡಿಯೂರಪ್ಪ,ಇವು ನಕಲಿ ಆಡಿಯೊ ತುಣುಕುಗಳು ಎಂದು ಹೇಳಿದ್ದಾರೆ.

ಸರಣಿ ಟ್ವೀಟ್‌ಗಳನ್ನು ಮಾಡಿರುವ ಎನ್‌ ಸಿಪಿ ರಾಷ್ಟ್ರೀಯ ವಕ್ತಾರ ನವಾಬ್ ಮಲಿಕ್ ಅವರು,11 ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಮುಂಬೈನ ಹೋಟೆಲ್‌ವೊಂದರಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ. ಇವರಿಗೆ ನೀಡಲು ಹಣವನ್ನು ಎಲ್ಲಿಂದ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸುವಂತೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರನ್ನು ಆಗ್ರಹಿಸಿದ್ದಾರೆ.

ಮುಂಬೈನಲ್ಲಿ 50 ಕೋ.ರೂ.ಗಳನ್ನು ನೀಡುವುದಾಗಿ ಯಡಿಯೂರಪ್ಪ ಶಾಸಕರಿಗೆ ಭರವಸೆ ನೀಡುತ್ತಿರುವುದನ್ನು ಬಯಲುಗೊಳಿಸಿರುವ ಆಡಿಯೋ ತುಣುಕನ್ನು ಕುಮಾರಸ್ವಾಮಿಯವರು ಬಿಡುಗಡೆಗೊಳಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವಿರುವುದಿಲ್ಲ ಎಂದು ಫಡ್ನವೀಸ್ ಅವರ ಸಂಪುಟ ಸಹೋದ್ಯೋಗಿ ಹೇಳಿದ್ದಾರೆ. ಇದರ ಅರ್ಥ ಫಡ್ನವೀಸ್ ಅವರು ಶಾಸಕರಿಗೆ ಹಣವನ್ನು ಒದಗಿಸಲಿದ್ದಾರೆ ಎಂದಾಗುತ್ತದೆ. ಈ ಹಣವನ್ನು ಎಲ್ಲಿಂದ ತರಲಾಗುತ್ತದೆ ಎನ್ನುವುದನ್ನು ಫಡ್ನವೀಸ್ ಸ್ಪಷ್ಟಪಡಿಸಬೇಕು ಎಂದು ಮಲಿಕ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News