×
Ad

ಕಳ್ಳಭಟ್ಟಿ ದುರಂತ: 38 ಜನರು ಮೃತ್ಯು

Update: 2019-02-08 20:08 IST

ಲಕ್ನೋ, ಜ. 8: ಉತ್ತರಪ್ರದೇಶ ಹಾಗೂ ಉತ್ತರಾಖಂಡದಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳಭಟ್ಟಿ ದುರಂತದಲ್ಲಿ ಕನಿಷ್ಠ 38 ಮಂದಿ ಮೃತಪಟ್ಟಿದ್ದಾರೆ. ಮೊದಲನೆ ದುರಂತ ಸಹರಣ್‌ಪುರದಲ್ಲಿ ಸಂಭವಿಸಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಸಮೀಪದ ಹರಿದ್ವಾರ ಜಿಲ್ಲೆಯಲ್ಲಿ ಇನ್ನೊಂದು ದುರಂತದಲ್ಲಿ ನಡೆದಿದ್ದು, 12 ಜನರು ಸಾವನ್ನಪ್ಪಿದ್ದಾರೆ.

ಒಂದೇ ಮೂಲದಿಂದ ವಿಷಪೂರಿತ ಮದ್ಯ ಪೂರೈಸಲಾಗಿತ್ತು ಎಂದು ರಾಜ್ಯದ ಸಮೀಪದ ಜಿಲ್ಲೆಯ ಸಂತ್ರಸ್ತರು ಹೇಳಿದ್ದಾರೆ. ಸಹರಣ್‌ಪುರದ ಉಮಾಹಿ ಗ್ರಾಮದಲ್ಲಿ ಐವರು ಸಾವನ್ನಪ್ಪಿರುವುದು ಹಾಗೂ ಗಂಭೀರ ಸ್ಥಿತಿಯಲ್ಲಿ 10 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿರುವುದು ವರದಿಯಾದ ಹಿನ್ನೆಲೆಯಲ್ಲಿ ಶುಕ್ರವಾರ ಈ ಘಟನೆ ಬೆಳಕಿಗೆ ಬಂದಿದೆ. ನಾವು ವಿಷ ಮದ್ಯ ಸೇವಿಸಿದ್ದವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಷ ಮದ್ಯ ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾದವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದೇ ರೀತಿ ಶರ್ಬತ್‌ಪುರ ಗ್ರಾಮದಲ್ಲಿ ವಿಷ ಮದ್ಯ ಸೇವಿಸಿ ಮೂವರು ಮೃತಪಟ್ಟಿದ್ದಾರೆ. ಸಮೀಪದ ಪ್ರದೇಶಗಳಲ್ಲಿ ಇನ್ನಷ್ಟು ಸಾವುಗಳು ಸಂಭವಿಸಿರುವುದು ವರದಿಯಾಗಿದೆ. ಇದರೊಂದಿಗೆ ಒಟ್ಟು 16 ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿಷ ಮದ್ಯ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 50 ಸಾವಿರ ರೂ. ಪರಿಹಾರ ಧನ ಘೋಷಿಸಿದ್ದಾರೆ. ಕಳ್ಳ ಭಟ್ಟಿ ದುರಂತ ನಡೆದ ಕುಶಿನಗರ್ ಹಾಗೂ ಸಹರಣ್‌ಪುರದ ಜಿಲ್ಲಾ ಎಕ್ಸೈಸ್ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶಿಸಿದ್ದಾರೆ.

ವಿಷ ಮದ್ಯ ಮಾರಾಟದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು 15 ದಿನಗಳ ಕಾಲ ಜಂಟಿ ಕಾರ್ಯಾಚರಣೆ ನಡೆಸುವಂತೆ ಎಕ್ಸೈಸ್ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಅವರು ಆದೇಶಿಸಿದ್ದಾರೆ. ಉಮಾಹಿ ಗ್ರಾಮದಿಂದ ಮೃತಪಟ್ಟವರನ್ನು ಕನ್ವಾರ್ಪಾಲ್, ಅರವಿಂದ, ಇಮ್ರಾನ್, ಪಿಂಟು ಹಾಗೂ ರಾಜು ಎಂದು ಗುರುತಿಸಲಾಗದೆ. ಮೃತಪಟ್ಟ ಇತರರ ಗುರುತನ್ನು ಪೊಲೀಸರು ಇದುವರೆಗೆ ಪತ್ತೆ ಹಚ್ಚಿಲ್ಲ.

ಮೂರು ದಿನಗಳ ಹಿಂದೆ ಉತ್ತರಪ್ರದೇಶದ ಕುಶಿನಗರ್‌ನಲ್ಲಿ ವಿಷ ಮದ್ಯ ಸೇವಿಸಿ 10 ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಹಾಗೂ ಸ್ಥಳೀಯ ಎಸ್‌ಎಚ್‌ಒ ಸಹಿತ 9 ಮಂದಿ ಅಧಿಕಾರಿಗಳನ್ನು ಜಿಲ್ಲಾಡಳಿತ ಅಮಾನತುಗೊಳಿಸಿದೆ. ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಓರ್ವನನ್ನು ಬಂಧಿಸಲಾಗಿದೆ. ವೌನಿ ಅಮಾವಾಸ್ಯೆ ಮೇಳದ ಸಂದರ್ಭ ಗ್ರಾಮ ನಿವಾಸಿಗಳು ವಿಷ ಮದ್ಯ ಸೇವಿಸಿದ್ದರು. ಈ ನಡುವೆ ಸಮೀಪದ ರಾಜ್ಯವಾದ ಉತ್ತರಾಖಂಡದ ಹರಿದ್ವಾರ್ ಜಿಲ್ಲೆಯಲ್ಲಿ ವಿಷ ಮದ್ಯ ಸೇವಿಸಿ 12 ಮಂದಿ ಮೃತಪಟ್ಟಿದ್ದಾರೆ. ಕನಿಷ್ಠ 8 ಮಂದಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ. ಇಲ್ಲಿಂದ 80 ಕಿ.ಮೀ. ದೂರದಲ್ಲಿರುವ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದ ಅಂತಿಮ ಶವ ಯಾತ್ರೆಯ ಸಂದರ್ಭ ಪಾಲ್ಗೊಂಡವರು ವಿಷ ಮದ್ಯ ಸೇವಿಸಿದ್ದಾರೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅವಳಿ ಗ್ರಾಮಗಳಲ್ಲಿ 12 ಜನರ ಸಾವು ಸಂಭವಿಸಿದ ಬಳಿಕ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಜಾರಿ ತಂಡದ 13 ಉದ್ಯೋಗಿಗಳನ್ನು ನಾವು ಅಮಾನತುಗೊಳಿಸಿದ್ದೇವೆ ಎಂದು ಉಪ ಎಕ್ಸೈಸ್ ಆಯುಕ್ತ (ಉತ್ತರಾಖಂಡ) ಅರ್ಚನಾ ಗಹರ್ವಾರ್ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಕೂಡ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News