ಸಾಮಾನ್ಯ ವರ್ಗದ ಬಡವರಿಗೆ ಶೇ.10 ಮೀಸಲಾತಿಯ ವಿರುದ್ಧ ಹೊಸ ಅರ್ಜಿ: ಕೇಂದ್ರದ ಉತ್ತರ ಕೋರಿದ ಸುಪ್ರೀಂ

Update: 2019-02-08 15:03 GMT

ಹೊಸದಿಲ್ಲಿ,ಫೆ.8: ಸಾಮಾನ್ಯ ವರ್ಗದ ಬಡವರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ.10 ಮೀಸಲಾತಿಯನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಲಾಗಿರುವ ಅರ್ಜಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿದೆ.

ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿಯನ್ನು ಒದಗಿಸುವ ನಿರ್ಧಾರಕ್ಕೆ ತಡೆಯಾಜ್ಞೆಯನ್ನು ನೀಡುವುದಿಲ್ಲ ಎಂದೂ ಮು.ನ್ಯಾ.ರಂಜನ ಗೊಗೊಯಿ ನೇತೃತ್ವದ ಪೀಠವು ಸ್ಪಷ್ಟಪಡಿಸಿತು. ಈ ಮೊದಲು ಇಂತಹುದೇ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ನೋಟಿಸನ್ನು ಜಾರಿಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ಉದ್ಯಮಿ ತೆಹ್ಸೀನ್ ಪೂನಾವಾಲಾ ಸಲ್ಲಿಸಿರುವ ಹೊಸ ಅರ್ಜಿಯನ್ನು ಹಳೆಯ ಅರ್ಜಿಗಳೊಂದಿಗೆ ಸೇರಿಸುವಂತೆ ಶುಕ್ರವಾರ ಆದೇಶಿಸಿತು.

ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ‘ಜನಹಿತ ಅಭಿಯಾನ’ ಮತ್ತು ಎನ್‌ಜಿಒ ‘ಯುಥ್ ಫಾರ ಈಕ್ವಲಿಟಿ’ ಸೇರಿದಂತೆ ಹಲವಾರು ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿವೆ.

ಮೀಸಲಾತಿ ಮಸೂದೆಯನ್ನು ರದ್ದುಗೊಳಿಸುವಂತೆ ಕೋರಿರುವ ಪೂನಾವಾಲಾ,ಆರ್ಥಿಕ ಸ್ಥಿತಿಗತಿಯೊಂದರಿಂದಲೇ ಮೀಸಲಾತಿಯ ಉದ್ದೇಶಕ್ಕಾಗಿ ಹಿಂದುಳಿದಿರುವಿಕೆಯನ್ನು ವ್ಯಾಖ್ಯಾನಿಸುವಂತಿಲ್ಲ ಎಂದು ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.

ಮೀಸಲಾತಿಯನ್ನು ಒದಗಿಸುವ ಮೋದಿ ಸರಕಾರದ ನಿರ್ಧಾರಕ್ಕೆ ತಡೆಯಾಜ್ಞೆಯನ್ನು ನೀಡಲು ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ನಿರಾಕರಿಸಿತ್ತಾದರೂ ಈ ಮೀಸಲಾತಿಗೆ ಮಾರ್ಗವನ್ನು ಕಲ್ಪಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಲು ಒಪ್ಪಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News