ಮುಝಫ್ಪರ್‌ನಗರ ದಂಗೆ: ಏಳು ಮಂದಿಗೆ ಜೀವಾವಧಿ

Update: 2019-02-08 15:27 GMT

ಹೊಸದಿಲ್ಲಿ,ಫೆ.8: 2013ರ ಮುಝಫ್ಫರ್ ನಗರ ದಂಗೆಯ ಏಳು ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಈ ಏಳು ಮಂದಿ 2013ರಲ್ಲಿ ಉತ್ತರ ಪ್ರದೇಶದ ಕವಲ್ ಗ್ರಾಮದಲ್ಲಿ ಇಬ್ಬರು ಯುವಕರನ್ನು ಹತ್ಯೆ ಮಾಡಿದ್ದರು. ಈ ಘಟನೆ ಕೋಮು ದಂಗೆಗೆ ಕಾರಣವಾಗಿತ್ತು. ಆಗಸ್ಟ್ 27, 2013ರಲ್ಲಿ ಗೌರವ್ ಮತ್ತು ಸಚಿನ್ ಎಂಬ ಯುವಕರನ್ನು ಹತ್ಯೆ ಮಾಡಿದ ಆರೋಪದಲ್ಲಿ ಮುಝಮ್ಮಿಲ್, ಮುಜಸ್ಸಿಮ್, ಫುರ್ಖಾನ್, ನದೀಮ್, ಜನಂಗೀರ್, ಅಫ್ಝಲ್ ಮತ್ತು ಇಕ್ಬಾಲ್ ತಪ್ಪಿತಸ್ಥರು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಿಮಾಂಶು ಭಟ್ನಗರ್ ಬುಧವಾರ ತೀರ್ಪು ನೀಡಿದ್ದರು.

ಈ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಇಬ್ಬರು ಆರೋಪಿಗಳ ತಂದೆ ನಸೀಮ್ ಅಹಮದ್ ತಿಳಿಸಿದ್ದಾರೆ. ನಮಗೆ ನ್ಯಾಯಾಲಯದ ಮೇಲೆ ಸಂಪೂರ್ಣ ನಂಬಿಕೆಯಿದೆ. ಜಿಲ್ಲಾಡಳಿತ ಮತ್ತು ಪೊಲೀಸರು ತನ್ನ ಮಕ್ಕಳನ್ನು ನಕಲಿ ಆರೋಪದಲ್ಲಿ ಸಿಲುಕಿಸಿದ್ದಾರೆ. ಇದರ ವಿರುದ್ಧ ನಾವು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಮುಝಫ್ಫರ್‌ನನಗರ ಮತ್ತು ಶಾಮ್ಲಿ ಜಿಲ್ಲೆಗಳಲ್ಲಿ ನಡೆದ ದಂಗೆಗಳಲ್ಲಿ 62 ಮಂದಿ ಪ್ರಾಣ ಕಳೆದುಕೊಂಡಿದ್ದರೆ 93 ಮಂದಿ ಗಾಯಗೊಂಡಿದ್ದರು. 50,000 ಮಂದಿ ನಿರಾಶ್ರಿತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News