ಸಶಸ್ತ್ರ ಪಡೆಗಳ 30,000 ಕೋಟಿ ರೂ.ಗಳನ್ನು ಅನಿಲ್ ಅಂಬಾನಿಗೆ ನೀಡಿದ ಮೋದಿ

Update: 2019-02-08 16:00 GMT

ಹೊಸದಿಲ್ಲಿ, ಫೆ.8: ರಫೇಲ್ ಯುದ್ಧವಿಮಾನ ಒಪ್ಪಂದದ ಬಗ್ಗೆ ಫ್ರಾನ್ಸ್‌ನೊಂದಿಗೆ ನಡೆದ ಮಾತುಕತೆಯಲ್ಲಿ ಪ್ರಧಾನಿಯವರ ಕಚೇರಿ(ಪಿಎಂಒ) ನೇರವಾಗಿ ಭಾಗಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿ ಈ ಹಗರಣದಲ್ಲಿ ತಪ್ಪಿತಸ್ತನಾಗಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಇದೊಂದು ಸ್ಪಷ್ಟ ಹಗರಣವಾಗಿದೆ. ಭಾರತ- ಫ್ರಾನ್ಸ್ ಮಧ್ಯೆ 59 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ರಫೇಲ್ ಒಪ್ಪಂದದ ಮಾತುಕತೆ ಸಂದರ್ಭ ಪ್ರಧಾನಿಯವರ ಕಚೇರಿಯಲ್ಲಿ ನಡೆದಿದ್ದ ಸಮಾನಾಂತರ ಮಾತುಕತೆಗೆ ರಕ್ಷಣಾ ಸಚಿವಾಲಯ ತೀವ್ರ ಆಕ್ಷೇಪ ಸೂಚಿಸಿತ್ತು ಎಂದು ಸುದ್ದಿಸಂಸ್ಥೆಯೊಂದರ ವರದಿಯನ್ನು ಉಲ್ಲೇಖಿಸಿ ರಾಹುಲ್ ಹೇಳಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಪ್ಪಂದ ಪ್ರಕ್ರಿಯೆಯ ದಾರಿ ತಪ್ಪಿಸಿರುವ ಪ್ರಧಾನಿ ಮೋದಿ, ನಿಮ್ಮ (ಸಶಸ್ತ್ರ ಪಡೆಗಳ) 30 ಸಾವಿರ ಕೋಟಿ ರೂ.ಯನ್ನು ಕದ್ದು ತನ್ನ ಮಿತ್ರ ಅನಿಲ್ ಅಂಬಾನಿಗೆ ನೀಡಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು. ಪ್ರಧಾನಿ ಸಚಿವಾಲಯದಲ್ಲಿ ನಡೆದ ಸಮಾನಾಂತರ ಮಾತುಕತೆ ಅಧಿಕೃತ ಮಾತುಕತೆಯನ್ನು ದುರ್ಬಲಗೊಳಿಸಿದೆ. ಸಮಾನಾಂತರ ಮಾತುಕತೆ ಪ್ರಕ್ರಿಯೆಯಿಂದ ದೂರ ಇರುವಂತೆ ಪ್ರಧಾನಿಯವರ ಕಚೇರಿಗೆ ಸಲಹೆ ನೀಡುತ್ತೇವೆ ಎಂದ ಅವರು, ರಫೇಲ್ ಒಪ್ಪಂದದ ಹಗರಣದ ಕುರಿತು ಜಂಟಿ ಸಂಸದೀಯ ಸಮಿತಿಯ ತನಿಖೆ ನಡೆಯಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸಿದರು. ರಾಬರ್ಟ್ ವಾದ್ರಾ, ಚಿದಂಬರಂ ಮುಂತಾದವರ ವಿರುದ್ಧ ಯಾವ ತನಿಖೆಯನ್ನು ಬೇಕಾದರೂ ಸರಕಾರ ನಡೆಸಲಿ, ನಮಗೇನೂ ಸಮಸ್ಯೆಯಿಲ್ಲ. ಆದರೆ ರಫೇಲ್ ವಿಷಯದ ಕುರಿತ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎಂದು ರಾಹುಲ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News