ಶಬರಿಮಲೆ ಪ್ರಕರಣದ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯವಿಲ್ಲ: ಟಿಡಿಬಿ ಅಧ್ಯಕ್ಷರ ಹೇಳಿಕೆ

Update: 2019-02-09 13:38 GMT

ತಿರುವನಂತಪುರಂ, ಫೆ.9: ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡುವ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ತಳೆದಿರುವ ನಿಲುವಿನ ಕುರಿತು ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಟ್ರಾವಂಕೋರ್ ದೇವಸ್ವಂ ಬೋರ್ಡ್(ಟಿಡಿಬಿ) ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.

10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸುವ ಕುರಿತ ನಿಲುವಿನಲ್ಲಿ ಟಿಡಿಬಿಯಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ನಮ್ಮಲ್ಲಿ ವಿಭಿನ್ನ ವೈಯಕ್ತಿಕ ಅಭಿಪ್ರಾಯಗಳಿರಬಹುದು. ಆದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸ ಇರಿಸಿದ್ದೇವೆ. ಕೆಲವರು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಿ ಟಿಡಿಬಿಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಲ್ಲಿ ಅವರು ವಿಫಲರಾಗುತ್ತಾರೆ ಎಂದು ಪದ್ಮಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಂಡಳಿಯ ಸದಸ್ಯರು ಚರ್ಚಿಸಿ ನಿರ್ಧಾರಕ್ಕೆ ಬರುತ್ತಾರೆ ಮತ್ತು ಒಮ್ಮೆ ನಿರ್ಧಾರಕ್ಕೆ ಬಂದ ಮೇಲೆ ಏನೇ ಆದರೂ ಅದು ಬದಲಾಗದು ಎಂದವರು ಹೇಳಿದ್ದಾರೆ.

 ಕೆಲವು ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿವೆ. ದೇವಸ್ವಂ ಆಯುಕ್ತರು ದೇವಸ್ಥಾನಕ್ಕೆ ಬಂದಾಗ ತಾನು ವರದಿಯೊಂದನ್ನು ಸಲ್ಲಿಸಲಿದ್ದು ಅದರ ಆಧಾರದಲ್ಲಿ ಮಾತುಕತೆ ನಡೆಯಲಿದೆ ಎಂದು ತಾನು ಹೇಳಿಕೆ ನೀಡಿದ್ದೆ. ಆದರೆ ತಾನು ಆಯುಕ್ತರಿಂದ ವಿವರಣೆ ಕೇಳಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ವರದಿ ಸಲ್ಲಿಸುವುದು ಮತ್ತು ವಿವರಣೆ ಕೇಳುವುದರ ಮಧ್ಯೆ ವ್ಯತ್ಯಾಸವಿದೆ. ಅಲ್ಲದೆ ತಾನು ರಾಜೀನಾಮೆ ನೀಡುವುದಾಗಿಯೂ ವರದಿಯಾಗಿದೆ. ಸೇವಾವಧಿ ಅಂತ್ಯಗೊಳ್ಳುವವರೆಗೂ ತಾನು ಹುದ್ದೆಯಲ್ಲಿ ಮುಂದವರಿಯುವುದಾಗಿ ಪದ್ಮಕುಮಾರ್ ತಿಳಿಸಿದ್ದಾರೆ. ದೇವಸ್ವಂ ಮಂಡಳಿ ಸುಪ್ರೀಂಕೋರ್ಟ್‌ನಲ್ಲಿ ತನ್ನ ನಿಲುವು ಬದಲಾಯಿಸಿದೆ ಎಂಬ ಆಧಾರರಹಿತ ಆರೋಪಗಳನ್ನು ಮಾಡಬಾರದು. ಟಿಡಿಬಿ ತನ್ನ ನಿಲುವು ಬದಲಿಸಿಲ್ಲ. ಸುಪ್ರೀಂಕೋರ್ಟ್ ಆದೇಶದ ಬಳಿಕ ಟಿಡಿಬಿ ತಳೆದಿರುವ ನಿಲುವನ್ನೇ ಸುಪ್ರೀಂಕೋರ್ಟ್‌ಗೆ ತಿಳಿಸಲಾಗಿದೆ ಎಂದು ದೇವಸ್ವಂ ಆಯುಕ್ತ ಎನ್.ವಾಸು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News