ಸಂಸತ್ ನಲ್ಲಿ ‘ಆಪರೇಷನ್ ಕಮಲ’ದ ಪ್ರಸ್ತಾವ: ಕಾಂಗ್ರೆಸ್

Update: 2019-02-09 14:20 GMT

ಹೊಸದಿಲ್ಲಿ, ಫೆ.9: ಕರ್ನಾಟಕದಲ್ಲಿ ಮೈತ್ರಿ ಸರಕಾರವನ್ನು ಉರುಳಿಸುವ ಪ್ರಯತ್ನಗಳಿಗೆ ಬಿಜೆಪಿಯ ಉನ್ನತ ನಾಯಕರು ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್, ಮುಂದಿನ ವಾರ ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾವಿಸುವುದಾಗಿ ತಿಳಿಸಿದೆ.

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜೆಡಿಎಸ್ ಶಾಸಕರೊಬ್ಬರಿಗೆ 10 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎನ್ನಲಾಗಿರುವ ಆಡಿಯೊ ಟೇಪ್‌ನಲ್ಲಿ ಅಮಿತ್ ಶಾ ನ್ಯಾಯಾಂಗವನ್ನು ನಿಭಾಯಿಸಲಿದ್ದಾರೆ ಎಂದು ಹೇಳಲಾಗಿದೆ. ಇದನ್ನು ಸಿಜೆಐ ರಂಜನ್ ಗೊಗೊಯ್ ಸ್ವಯಂ ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರವನ್ನು ಕೇಂದ್ರ ಸರಕಾರ ಅಸ್ಥಿರಗೊಳಿಸುತ್ತಿದೆ ಎಂದು ಆರೋಪಿಸಿದ ಸುರ್ಜೆವಾಲಾ, 20 ಶಾಸಕರನ್ನು ಮತ್ತು ಸ್ಪೀಕರ್‌ರನ್ನು ಖರೀದಿಸಲು ಬಿಜೆಪಿ ಆಮಿಷ ಒಡ್ಡಿರುವ 450 ಕೋಟಿ ರೂ. ಎಲ್ಲಿಂದ ಬಂದಿದೆ. ಇದು ಬಿಜೆಪಿಯಿಂದ ಅಥವಾ ಪ್ರಧಾನಿ ಯವರ ಕಚೇರಿಯಿಂದ ಅಥವಾ ಯಾವುದಾದರೂ ಒಪ್ಪಂದದಿಂದ ಬಂದಿದೆಯೇ ಎಂದು ರಫೇಲ್ ಒಪ್ಪಂದ ಹಗರಣವನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಶ್ನಿಸಿದರು.

ಕರ್ನಾಟಕದಲ್ಲಿ ಸರಕಾರ ಉರುಳಿಸಲು ಪ್ರಯತ್ನ ನಡೆಸುತ್ತಿರುವವರ ವಿರುದ್ಧ ಭ್ರಷ್ಟಾಚಾರ ವಿರೋಧಿ ಕಾನೂನು ಬಳಸಲಾಗುತ್ತದೆಯೇ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಯಡಿಯೂರಪ್ಪರ ನಿವಾಸದ ಮೇಲೆ ದಾಳಿ ನಡೆಸುತ್ತದೆಯೇ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಇಲ್ಲ ಎಂಬುದು ಉತ್ತರವಾದರೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸರಕಾರ ಉರುಳಿಸುವ ಪ್ರಯತ್ನದ ಹಿಂದೆ ಇದ್ದಾರೆ ಎಂಬುದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News