ಪ್ರಧಾನಿ ಅರುಣಾಚಲ ಭೇಟಿ ವಿರೋಧಿಸಿದ ಚೀನಾ

Update: 2019-02-09 14:27 GMT

ಬೀಜಿಂಗ್, ಫೆ. 9: ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಬಗ್ಗೆ ಶನಿವಾರ ತೀವ್ರ ವಿರೋಧ ವ್ಯಕ್ತಪಡಿಸಿರುವ ಚೀನಾ, ಇಂತಹ ಕ್ರಮಗಳು ಗಡಿ ವಿವಾದವನ್ನು ಉಲ್ಬಣ ಹಾಗೂ ಸಂಕೀರ್ಣಗೊಳಿಸಬಹುದು ಎಂದಿದೆ. ಒಂದು ದಿನದ ಭೇಟಿ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶಕ್ಕೆ ಆಗಮಿಸಿದ ಸಂದರ್ಭ ಮೋದಿ ಅವರು ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾ, ಇದು ತನ್ನ ಸ್ವಂತ ಭೂಮಿ ಹಾಗೂ ಇದನ್ನು ದಕ್ಷಿಣ ಟಿಬೇಟ್ ಎಂದು ಪ್ರತಿಪಾದಿಸಿದೆ.

‘‘ಚೀನಾ-ಭಾರತ ಗಡಿ ವಿಷಯಕ್ಕೆ ಸಂಬಂಧಿಸಿ ಚೀನಾದ ನಿಲುವು ಸ್ಥಿರ ಹಾಗೂ ಸ್ಪಷ್ಟ. ಚೀನಾ ಸರಕಾರ ಈ ಪ್ರದೇಶವನ್ನು ಅರಣಾಚಲ ಪ್ರದೇಶವೆಂದು ಎಂದೂ ಗುರುತಿಸಿಲ್ಲ. ಚೀನಾ-ಭಾರತ ಗಡಿಯ ಪೂರ್ವ ಭಾಗಕ್ಕೆ ಭಾರತದ ಪ್ರಧಾನಿ ಭೇಟಿ ನೀಡಿರುವುದನ್ನು ತೀವ್ರವಾಗಿ ವಿರೋಧಿಸುತ್ತದೆ’’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ಹೇಳಿದ್ದಾರೆ. ಇಂತಹ ಕ್ರಮಗಳು ಉಭಯ ರಾಷ್ಟ್ರಗಳ ನಡುವಿನ ಮಾತುಕತೆಯ ಪ್ರಗತಿಗೆ ಅಡ್ಡಿಯಾಗಬಹುದು. ಮುಖ್ಯವಾಗಿ ಕಳೆದ ವರ್ಷ ವುಹಾನ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ನಡೆದ ಚಾರಿತ್ರಿಕ ಮಾತುಕತೆಗೆ ತೊಂದರೆ ಉಂಟಾಗಬಹುದು ಎಂದು ಅವರು ಹೇಳಿದ್ದಾರೆ.

ಉಭಯ ದೇಶಗಳ ಹಿತಾಸಕ್ತಿ, ಚೀನಾದ ಹಿತಾಸಕ್ತಿ ಹಾಗೂ ಕಾಳಜಿಗೆ ಗೌರವ, ದ್ವಿಪಕ್ಷೀಯ ಸಂಬಂಧ ಸುಧಾರಣೆಯನ್ನು ಕಾಪಾಡಲು ಹಾಗೂ ಗಡಿ ವಿಷಯದಲ್ಲಿ ವಿವಾದ ಅಥವಾ ಸಂಕೀರ್ಣತೆ ಹೆಚ್ಚಿಸಲು ಕಾರಣವಾಗುವ ಯಾವುದೇ ಕ್ರಮದ ಬಗ್ಗೆ ಗಮನದಲ್ಲಿ ಇರಿಸಿಕೊಳ್ಳುವಂತೆ ಚೀನಾ ಭಾರತವನ್ನು ಆಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಿರುವುದನ್ನು ಚೀನಾ ತೀವ್ರವಾಗಿ ವಿರೋಧಿಸಿರುವ ಹಿನ್ನೆಲೆಯಲ್ಲಿ ಅರುಣಾಚಲಪ್ರದೇಶ ದೇಶದ ‘ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗ’ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಚೀನಾ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಅರುಣಾಚಲ ಪ್ರದೇಶ ಭಾರತದ ‘ಅವಿಭಾಜ್ಯ ಹಾಗೂ ಪ್ರತ್ಯೇಕಿಸಲಾಗದ ಭಾಗ’. ಈ ನಿಲುವನ್ನು ಚೀನಾಕ್ಕೆ ಹಲವು ಬಾರಿ ಮನವರಿಕೆ ಮಾಡಿ ಕೊಡಲಾಗಿದೆ ಎಂದಿದೆ. ‘‘ಭಾರತದ ನಾಯಕರು ದೇಶದ ಇತರ ಭಾಗಗಳಿಗೆ ಭೇಟಿ ನೀಡುವಂತೆ ಅರುಣಾಚಲಪ್ರದೇಶಕ್ಕೆ ಕೂಡ ಭೇಟಿ ನೀಡುತ್ತಾರೆ. ಈ ದೃಢ ನಿಲುವನ್ನು ಚೀನಾಕ್ಕೆ ಹಲವು ಬಾರಿ ತಿಳಿಸಲಾಗಿದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News