ಆನ್‌ಲೈನ್ ವ್ಯವಸ್ಥೆಯಿಂದಾಗಿ ಹಜ್ ಯಾತ್ರೆ ಅಗ್ಗವಾಗಿದೆ: ಕೇಂದ್ರ ಸಚಿವ ನಕ್ವಿ

Update: 2019-02-09 14:38 GMT

ಮುಂಬೈ,ಫೆ.9: ಹಜ್ ಸಂಬಂಧಿ ಪ್ರಕ್ರಿಯೆಗಳನ್ನು ಡಿಜಿಟಲೀಕರಿಸಿರುವದರಿಂದ ಸಬ್ಸಿಡಿ ಇಲ್ಲದಿದ್ದರೂ ಈ ವಾರ್ಷಿಕ ಯಾತ್ರೆ ದುಬಾರಿಯಾಗಿ ಪರಿಣಮಿಸಿಲ್ಲ ಮತ್ತು ಈ ವ್ಯವಸ್ಥೆಯು ಯಾತ್ರಿಕ ಸ್ನೇಹಿಯಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಶನಿವಾರ ಇಲ್ಲಿ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯದ 2012ರ ಆದೇಶಕ್ಕನುಗುಣವಾಗಿ ಸರಕಾರವು ಕಳೆದ ವರ್ಷದಿಂದ ಹಜ್ ಯಾತ್ರಿಗಳಿಗೆ ಒದಗಿಸಲಾಗುತ್ತಿದ್ದ ಸಹಾಯಧನವನ್ನು ರದ್ದುಗೊಳಿಸಿದೆ.

 ಇಲ್ಲಿ ‘ಖಾದಿಮುಲ್ ಹಜ್ಜಾಜ್(ಹಜ್ ಯಾತ್ರಿಕರಿಗೆ ನೆರವಾಗುವವರು)’ಗಳಿಗೆ ಎರಡು ದಿನಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಹಾಯಧನವನ್ನು ರದ್ದುಗೊಳಿಸಲಾಗಿದ್ದರೂ 2018ರಲ್ಲಿ ಯಾತ್ರಿಕರು ವಿಮಾನ ಪ್ರಯಾಣ ದರಗಳಲ್ಲಿ ಸುಮಾರು 57 ಕೋ.ರೂ.ಗಳಷ್ಟು ಮೊತ್ತವನ್ನು ಉಳಿಸಿದ್ದಾರೆ. ಈ ವರ್ಷ ಹಜ್ ಯಾತ್ರೆಯ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸಲಾಗಿದೆ. ಇದರಿಂದ 2019ನೇ ಸಾಲಿನ್ ಹಜ್ ಸಂದರ್ಭದಲ್ಲಿ ಯಾತ್ರಿಕರು ಸುಮಾರು 113 ಕೋ.ರೂ.ಗಳನ್ನು ಉಳಿಸಲಿದ್ದಾರೆ ಎಂದರು.

ಜಿಎಸ್‌ಟಿ ಕಡಿತದಿಂದಾಗಿ ವಿವಿಧ ಯಾತ್ರೆ ಪ್ರಾರಂಭಿಕ ಸ್ಥಳಗಳಿಂದ ವಿಮಾನಯಾನ ದರಗಳು ಗಣನೀಯವಾಗಿ ಕಡಿಮೆಯಾಗಲಿವೆ. ಉದಾಹರಣೆಗೆ ಶ್ರೀನಗರದಿಂದ ಯಾನ ದರವು 11,377ರೂ.ಗಳಷ್ಟು ಮತ್ತು ಅಹ್ಮದಾಬಾದ್‌ನಿಂದ 7,305 ರೂ.ಗಳಷ್ಟು ಕಡಿಮೆಯಾಗಲಿದೆ ಎಂದು ಸಚಿವರು ತಿಳಿಸಿದರು.

ದೇಶಕ್ಕೆ ಸ್ವಾತಂತ್ರ ದೊರೆತ ಬಳಿಕ ಮೊದಲ ಬಾರಿಗೆ ಕಳೆದ ವರ್ಷ 1,75,025 ದಾಖಲೆ ಸಂಖ್ಯೆಯ ಭಾರತೀಯ ಮುಸ್ಲಿಮರು ಹಜ್ ಯಾತ್ರೆಯನ್ನು ಕೈಗೊಂಡಿದ್ದರು,ಅದೂ ಯಾವುದೇ ಸಹಾಯಧನವಿಲ್ಲದೆ. ಈ ಪೈಕಿ ಶೇ.48ರಷ್ಟು ಮಹಿಳೆಯರಾಗಿದ್ದರು ಎಂದ ಅವರು,ಈ ವರ್ಷವೂ ಇಷ್ಟೇ ಸಂಖ್ಯೆಯಲ್ಲಿ ಮುಸ್ಲಿಮರು ಹಜ್ ಯಾತ್ರೆಯನ್ನು ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News