ಮಹಿಳಾ ಐಎಎಸ್ ಅಧಿಕಾರಿಯನ್ನು ‘ತಲೆ ಇಲ್ಲದವಳು’ ಎಂದ ಶಾಸಕ!

Update: 2019-02-11 06:26 GMT

ತಿರುವನಂತಪುರ, ಫೆ11: ಕೇರಳ ಆಡಳಿತಾರೂಢ ಕೂಟದ ಅಂಗವಾದ ಸಿಪಿಎಂ ಪಕ್ಷದ ಶಾಸಕರೊಬ್ಬರು, ಯುವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ದೇವಿಕುಲಂ ಶಾಸಕ ಎಸ್.ರಾಜೇಂದ್ರನ್ ಸ್ಥಳೀಯ ಉಪವಿಭಾಗಾಧಿಕಾರಿಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಆಕೆಯ ಕಚೇರಿ ಮುಂದೆಯೇ, "ತಲೆ ಇಲ್ಲದವಳು; ಕಾಮನ್‌ಸೆನ್ಸ್ ಇಲ್ಲದವಳು" ಎಂದು ಅವಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪ್ರವಾಸಿ ತಾಣವಾಗಿ ಜನಪ್ರಿಯವಾಗಿರುವ ಹಾಗೂ ಅಕ್ರಮ ನಿರ್ಮಾಣ ಹಾಗೂ ಒತ್ತುವರಿಗೆ ಕುಖ್ಯಾತವಾಗಿರುವ ಇಡುಕ್ಕಿಯ ಭಾಗವಾದ ದೇವಿಕುಲಂನ ಮೊಟ್ಟಮೊದಲ ಮಹಿಳಾ ಉಪವಿಭಾಗಾಧಿಕಾರಿ ಎನಿಸಿದ ರೇಣುರಾಜ್ (30) ಎಂಬ ಮಹಿಳಾ ಅಧಿಕಾರಿ, ಶಾಸಕರಿಂದ ನಿಂದನೆಗೆ ಒಳಗಾದವರು.

ಎಡಪಕ್ಷ ಬೆಂಬಲಿತ ಆಡಳಿತದ ಪಂಚಾಯ್ತಿಯ ಕಟ್ಟಡ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ ಅಧಿಕಾರಿ ವಿರುದ್ಧ ಕೋಪಗೊಂಡ ಶಾಸಕರು, "ಸರ್ಕಾರದ ಕೆಲಸವನ್ನೇ ಸ್ಥಗಿತಗೊಳಿಸುವಂತೆ ಸರ್ಕಾರವೇ ಆದೇಶ ನೀಡಿದ ಮೊದಲ ನಿದರ್ಶನ ಇದು. ಇಂಥ ಓವರ್‌ಸ್ಮಾರ್ಟ್ ಅಧಿಕಾರಿಗಳನ್ನು ನಾನು ಹಿಂದೆಂದೂ ನೋಡಿಲ್ಲ. ನಿರ್ಮಾಣ ನಿಯಮಗಳನ್ನು ಪಂಚಾಯ್ತಿ ನೋಡಬೇಕೇ ವಿನಃ ಈಕೆ ಅಲ್ಲ. ಆಕೆ ಅಧ್ಯಯನ ಮಾಡುವುದು ಹಾಗೂ ಕಲಿಯುವುದು ಇನ್ನೂ ಸಾಕಷ್ಟು ಇದೆ. ಇಂಥ ಸಾಮಾನ್ಯ ಜ್ಞಾನ ಅಥವಾ ತಲೆ ಇಲ್ಲದ ವ್ಯಕ್ತಿಗಳನ್ನು ಇಲ್ಲಿಗೆ ಕಳುಹಿಸಲಾಗುತ್ತಿದೆ" ಎಂದು ಹೇಳಿರುವುದು ಕ್ಯಾಮೆರಾದಲ್ಲಿ ದಾಖಲಾಗಿದೆ.

ಆದರೆ ಈ ಮಹಿಳಾ ಅಧಿಕಾರಿ ಈ ಸಂದರ್ಭದಲ್ಲಿ ಸ್ಥಳದಲ್ಲಿರಲಿಲ್ಲ. ಆದರೆ ಬೇರೆ ಅಧಿಕಾರಿಗಳು ಈ ಘಟನೆಯ ವಿವರಣೆ ನೀಡಿದರು. ಈ ಘಟನೆಯ ವೀಡಿಯೊ ತುಣುಕನ್ನಾಧರಿಸಿ  ಎನ್‌ಡಿಟಿವಿ ವರದಿ ಮಾಡಿದೆ.

ಕೇರಳ ಹೈಕೋರ್ಟ್ 2010ರಲ್ಲಿ ನೀಡಿದ ಆದೇಶದ ಪ್ರಕಾರ, ಮುನ್ನಾರ್ ಪ್ರದೇಶದ ಏಳು ಗ್ರಾಮಗಳಲ್ಲಿ ಯಾವುದೇ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಿದ್ದರೆ, ಕಂದಾಯ ಅಧಿಕಾರಿಗಳಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು. ಇದನ್ನು ಪಡೆಯದೇ ಇದ್ದ ಕಾರಣಕ್ಕೆ ಕಾಮಗಾರಿ ಸ್ಥಗಿತಕ್ಕೆ ಈ ಅಧಿಕಾರಿ ಸೂಚನೆ ನೀಡಿದ್ದರು ಎನ್ನಲಾಗಿದೆ.

"ಶಾಸಕರು ನನ್ನ ಅಧಿಕಾರಿಗಳ ಎದುರಲ್ಲೇ ಈ ರೀತಿ ವರ್ತಿಸಿದರೂ, ಮೇಲಧಿಕಾರಿಗಳು, ರಾಜಕಾರಣಿಗಳು ಹಾಗೂ ಮಾಧ್ಯಮದಿಂದ ನನ್ನ ಕಾನೂನುಬದ್ಧ ಕ್ರಮಕ್ಕೆ ಬೆಂಬಲ ದೊರಕಿದೆ" ಎಂದು ರೇಣುರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News