ಟಿ-20: ಕೊನೆಯ ಓವರ್‌ನಲ್ಲಿ ಪಾಂಡ್ಯಗೆ ಒಂದು ರನ್ ನಿರಾಕರಿಸಿದ ಕಾರ್ತಿಕ್ ವಿರುದ್ಧ ಆಕ್ರೋಶ

Update: 2019-02-11 05:57 GMT

ಹೊಸದಿಲ್ಲಿ, ಫೆ.11: ನ್ಯೂಝಿಲೆಂಡ್ ವಿರುದ್ಧ 3ನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಕೃನಾಲ್ ಪಾಂಡ್ಯಗೆ ಒಂದು ರನ್ ಗಳಿಸಲು ನಿರಾಕರಿಸಿದ ದಿನೇಶ್ ಕಾರ್ತಿಕ್ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಟ್ರೋಲ್ ಮಾಡಿದ್ದು, ಒಂದು ರನ್ ನಿರಾಕರಿಸಿ ಪಂದ್ಯವನ್ನು ಗೆಲ್ಲಿಸಿಕೊಡಲು ನೀವೇನು ಧೋನಿಯಾ? ಎಂದು ಪ್ರಶ್ನಿಸಿದ್ದಾರೆ.

ನ್ಯೂಝಿಲೆಂಡ್ ವಿರುದ್ಧ 213 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ಕೊನೆಯ ಓವರ್‌ನಲ್ಲಿ ಗೆಲ್ಲಲು 16 ರನ್ ಅಗತ್ಯವಿತ್ತು. ಕಾರ್ತಿಕ್ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು. ಇನ್ನೆರಡು ಎಸೆತಗಳಲ್ಲಿ ರನ್ ಗಳಿಸಲಿಲ್ಲ. ಈ ಮಧ್ಯೆ ಕೃನಾಲ್ ಪಾಂಡ್ಯ ಒಂದು ರನ್ ಗಳಿಸಲು ಒತ್ತಾಯಿಸಿದರೂ ಅದಕ್ಕೆ ಕಾರ್ತಿಕ್ ಸೊಪ್ಪುಹಾಕಿರಲಿಲ್ಲ. 4ನೇ ಎಸೆತದಲ್ಲಿ ಕಾರ್ತಿಕ್ ಒಂದು ರನ್, 5ನೇ ಎಸೆತದಲ್ಲಿ ಪಾಂಡ್ಯ ಒಂದು ರನ್ ಗಳಿಸಿದರು. ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಕಾರ್ತಿಕ್ ಸಿಕ್ಸರ್ ಸಿಡಿಸಿದರಾದರೂ ಭಾರತಕ್ಕೆ ಗೆಲ್ಲಲು 4 ರನ್ ಕೊರತೆ ಎದುರಿಸಿತು. ಈ ಘಟನೆಯು 2012ರಲ್ಲಿ ಕಾಮನ್‌ವೆಲ್ತ್ ಬ್ಯಾಂಕ್ ಸರಣಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಧೋನಿ ಸ್ಪಿನ್ನರ್ ಆರ್.ಅಶ್ವಿನ್‌ಗೆ ಎರಡು ರನ್ ಗಳಿಸಲು ನಿರಾಕರಿಸಿದ್ದನ್ನು ನೆನಪಿಸಿತು.

ಆ ಪಂದ್ಯದಲ್ಲಿ ಧೋನಿ ಭಾರತಕ್ಕೆ ಇನ್ನೂ 2 ಎಸೆತ ಬಾಕಿ ಇರುವಾಗಲೇ ಗೆಲುವು ತಂದಿದ್ದರು.

 ಕಾರ್ತಿಕ್ ನಿರ್ಧಾರವನ್ನು ಟೀಕಿಸಿದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, "ಮೈದಾನಕ್ಕೆ ಅಂಟಿಕೊಂಡು, ಕೃನಾಲ್‌ಗೆ ಸಿಂಗಲ್ಸ್ ರನ್ ನಿರಾಕರಿಸಿದ್ದು ತಪ್ಪು. ಸ್ಟ್ರೈಕ್‌ಎಂಡ್‌ನಲ್ಲಿದ್ದು ಬ್ಯಾಟ್ಸ್‌ಮನ್. ಬಾಲಂಗೋಚಿಯಲ್ಲ ಎಂಬ ಅಂಶವನ್ನು ಅವರು ಅರಿತುಕೊಳ್ಳಬೇಕಾಗಿತ್ತು'' ಎಂದಿದ್ದಾರೆ.

ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಕೂಡ ಇಂತಹದ್ದೇ ಅಭಿಪ್ರಾಯಪಟ್ಟಿದ್ದಾರೆ.

"ಕಾರ್ತಿಕ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಟಿ-20ಯಲ್ಲಿ ಕೆಲವು ಸಣ್ಣ ತಪ್ಪು ಕೂಡ ಫಲಿತಾಂಶದ ಮೇಲೆ ಪರಿಣಾಮಬೀರುತ್ತದೆ'' ಎಂದು ಮಾಂಜ್ರೇಕರ್ ಹೇಳಿದ್ದಾರೆ.

 ಕ್ರಿಕೆಟ್ ಅಭಿಮಾನಿಗಳು ಕಾರ್ತಿಕ್ ನಿರ್ಧಾರವನ್ನು ಟೀಕಿಸಿದ್ದಾರೆ.

 ‘‘ದಿನೇಶ್ ಕಾರ್ತಿಕ್ ತಾನೊಬ್ಬ ಧೋನಿ ಎಂದು ಭಾವಿಸಿರಬಹುದು. ಹಾಗೆ ಯೋಚಿಸಿದ್ದು ಖಂಡಿತವಾಗಿಯೂ ಸರಿ. ಆದರೆ, ಮತ್ತೊಂದು ತುದಿಯಲ್ಲಿರುವುದು ಅಶ್ವಿನ್ ಅಲ್ಲ ಕೃನಾಲ್ ಪಾಂಡ್ಯ ಎಂದು ತಿಳಿದಿರಬೇಕಾಗಿತ್ತು'' ಎಂದು ಸಮೀರ್ ಎಂಬಾತ ಟ್ವೀಟ್ ಮಾಡಿದ್ದಾನೆ.

ಅವರು ಆ ಸಿಂಗಲ್ ರನ್ ಗಳಿಸಲು ಮುಂದಾಗಿಲ್ಲವೇಕೆ? ಅವರು ತಾನು ಧೋನಿ ಎಂದು ತಿಳಿದುಕೊಂಡಿದ್ದಾರಾ? ಎಂದು ಆಶೀಶ್ ಎಂಬಾತ ಪ್ರಶ್ನಿಸಿದ್ದಾನೆ.

ಸಿಂಗಲ್ ರನ್ ನಿರಾಕರಿಸಿ ಸಿಕ್ಸರ್ ಸಿಡಿಸಿ ಪಂದ್ಯ ಗೆಲ್ಲಿಸಿಕೊಡಲು ನೀವೇನು ಧೋನಿನಾ? ನೀವು ಒಮ್ಮೆ ಹೀಗೆ ಮಾಡಿರಬಹುದು. ಆದರೆ ಧೋನಿ ರೀತಿ ಎಲ್ಲ ಸಮಯದಲ್ಲೂ ಹೀಗೆ ಮಾಡಲು ಸಾಧ್ಯವಿಲ್ಲ ಎಂದು ಇನ್ನೊಬ್ಬ ಅಭಿಮಾನಿ ಹೇಳಿದ್ದಾನೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಿದಾಹಸ್ ಟ್ರೋಫಿ ಫೈನಲ್‌ನಲ್ಲಿ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿದ್ದ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾಕ್ಕೆ ಗೆಲುವು ತಂದಿದ್ದರು. ರವಿವಾರ ಇತಿಹಾಸ ಪುನರಾವರ್ತನೆಯಾಗಿತ್ತು. ಆದರೆ, ಈ ಬಾರಿ ಭಾರತ ಸೋಲುಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News