ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ರಕ್ಷಿಸಿದ ಸೈನಿಕರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

Update: 2019-02-11 10:22 GMT

ಬಂಡೀಪೊರ್, ಫೆ.11: ಉತ್ತರ ಕಾಶ್ಮೀರದ ಬಂಡಿಪೋರ್ ಜಿಲ್ಲೆಯಲ್ಲಿ ಉಂಟಾದ ಭಾರೀ ಹಿಮಪಾತದಿಂದಾಗಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಮನೆಯಲ್ಲಿಯೇ  ಸಿಲುಕಿದ್ದ ಗರ್ಭಿಣಿಯೊಬ್ಬರನ್ನು ಸೈನಿಕರು  ಸಕಾಲದಲ್ಲಿ ರಕ್ಷಿಸಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಪರಿಣಾಮ ಆಕೆ ಅಲ್ಲಿ ಸುರಕ್ಷಿತವಾಗಿ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದಾಳೆ.

ಫೆಬ್ರವರಿ 8ರಂದು ಬಂಡೀಪೊರ್ ನ ಪನಾರ್ ಸೇನಾ ಶಿಬಿರದ ಕಂಪೆನಿ ಕಮಾಂಡರ್ ಅವರಿಗೆ  ಗ್ರಾಮಸ್ಥರೊಬ್ಬರು ಕರೆ ಮಾಡಿ ತಮ್ಮ ಗರ್ಭಿಣಿ ಪತ್ನಿ ಗುಲ್ಶಾನ ಬೇಗಂ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಹಾಯ ಮಾಡುವಂತೆ ಮನವಿ ಮಾಡಿದ್ದರು.

ರಸ್ತೆಗಳ ತುಂಬ ಹಿಮ ಹರಡಿದ್ದರಿಂದ ವಾಹನ ಸಾಗಾಟ ಕಷ್ಟಕರವಾಗಿದೆ ಎಂದೂ ಅವರು ಹೇಳಿಕೊಂಡಿದ್ದರು. ತಡ ಮಾಡದೆ ಬಂಡೀಪೊರ್ ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ  ಅಲ್ಲಿಗೆ ತಲುಪಿ ಎರಡೂವರೆ ಕಿ.ಮೀ. ದೂರದವರೆಗೆ ಸೊಂಟದ ತನಕ ಹಿಮವಿದ್ದ ರಸ್ತೆಯಲ್ಲಿಯೇ ಆಕೆಯನ್ನು ಸ್ಟ್ರೆಚರಿನಲ್ಲಿ ಹೊತ್ತುಕೊಂಡು ಹೋಗಿ ನಂತರ ಸೇನೆಯ ಆ್ಯಂಬುಲೆನ್ಸ್ ನಲ್ಲಿ ಬಂಡೀಪೊರ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿನ ವೈದ್ಯರು ಪರೀಕ್ಷಿಸಿ ಆಕೆಯ ಗರ್ಭದಲ್ಲಿ ಅವಳಿ ಶಿಶುಗಳಿವೆ ಎಂದು ಹೇಳಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಬೇಕಾಗಿರುವುದರಿಂದ ಶ್ರೀನಗರ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದರು.

ಅಂತೆಯೇ ಆಕೆಯನ್ನು ಶ್ರೀನಗರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಆಕೆ ಅದೇ ರಾತ್ರಿ ಸುರಕ್ಷಿತವಾಗಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News