ಗೋವಿನ ಹಾಲಿನ ಋಣ ತೀರಿಸಲು ನಮಗೆ ಸಾಧ್ಯವಿಲ್ಲ: ಪ್ರಧಾನಿ ಮೋದಿ

Update: 2019-02-11 10:27 GMT

ವೃಂದಾವನ, ಫೆ.11: ಗೋವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಗೋವಿನ ಹಾಲಿನ ಋಣವನ್ನು ನಾವು ತೀರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಕ್ಷಯ ಪಾತ್ರ ಫೌಂಡೇಶನ್ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ವಯ ಇಲ್ಲಿಯ ತನಕ 300 ಕೋಟಿ ಊಟಗಳನ್ನು ವಿತರಿಸಿರುವ ಪ್ರಯುಕ್ತ ಆಯೋಜಿಸಲಾದ ಸಮಾರಂಭದ ಅಂಗವಾಗಿ ದುರ್ಬಲ ವರ್ಗಗಳ ಮಕ್ಕಳಿಗೆ ಆಹಾರ  ಬಡಿಸಲೆಂದು  ಉತ್ತರ ಪ್ರದೇಶದ ಬೃಂದಾವನಕ್ಕೆ ಆಗಮಿಸಿದ ಸಂದರ್ಭ ಪ್ರಧಾನಿ ಮಾತನಾಡುತ್ತಿದ್ದರು.

ಗೋವುಗಳ ಆರೋಗ್ಯ ಸುಧಾರಣೆಗೆ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಅವರು ಈ ಸಂದರ್ಭ ಮಾತನಾಡಿದರು. ಗೋವುಗಳ ಹಿತಾಸಕ್ತಿ ರಕ್ಷಣೆಗೆ ಬಿಜೆಪಿ ಸರಕಾರ ರಾಷ್ಟ್ರೀಯ ಗೋಕುಲ್ ಮಿಷನ್ ಹಾಗೂ  ರಾಷ್ಟ್ರೀಯ ಕಾಮಧೇನು ಆಯೋಗ ರಚಿಸಿದೆ. ಗೋವನ್ನು ಸಾಕುವವರಿಗೆ ಬ್ಯಾಂಕುಗಳಿಂದ ರೂ 3 ಲಕ್ಷ ತನಕದ ಸಾಲ ಕೂಡ ಲಭ್ಯವಿದೆ. ರಾಷ್ಟ್ರೀಯ ಕಾಮಧೇನು ಆಯೋಗಕ್ಕೆ ರೂ 300 ಕೋಟಿ  ಮೀಸಲಿರಿಸಲಾಗಿದೆ ಎಂದೂ ಅವರು ತಿಳಿಸಿದರು.

ಮಕ್ಕಳ ಆರೋಗ್ಯ ರಕ್ಷಣೆ ಹಾಗೂ ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮಹತ್ವವನ್ನೂ ಪ್ರಧಾನಿ ವಿವರಿಸಿದರು. ತಮ್ಮ ಸರಕಾರದ ಮಿಷನ್ ಇಂದ್ರ ಧನುಷ್ ಬಗ್ಗೆಯೂ ಮಾತನಾಡಿದ ಮೋದಿ ಈ ಯೋಜನೆಯನ್ವಯ 3.4 ಕೋಟಿ ಮಕ್ಕಳು ಹಾಗೂ 90 ಲಕ್ಷ ಗರ್ಭಿಣಿಯರು ಪ್ರಯೋಜನ ಪಡೆದಿದ್ದಾರೆಂದರು.

ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ರಾಜ್ಯಪಾಲ ರಾಮ್ ನಾಯಕ್ ಹಾಗೂ ಬಿಜೆಪಿಯ ಮಥುರಾ ಸಂಸದೆ ಹೇಮಾ ಮಾಲಿನಿ ಕೂಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News