20 ಸಾವಿರ ಕೋಟಿ ರೂ. ವ್ಯವಹಾರದ ಹವಾಲಾ ಜಾಲ ಪತ್ತೆ

Update: 2019-02-11 16:09 GMT

 ಹೊಸದಿಲ್ಲಿ, ಫೆ.11: ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಅಕ್ರಮ ಹಣ ವರ್ಗಾವಣೆ ವ್ಯವಹಾರ ನಡೆಸುತ್ತಿದ್ದ ಹವಾಲಾ ಜಾಲವನ್ನು ಭೇದಿಸಿರುವುದಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯ ದಿಲ್ಲಿ ತನಿಖಾ ತಂಡ ಹಳೆ ದಿಲ್ಲಿಯ ಹಲವು ವ್ಯಾಪಾರ ಪ್ರದೇಶದಲ್ಲಿ ಕಳೆದ ಕೆಲ ವಾರಗಳಿಂದ ನಡೆಸಿದ ಸರಣಿ ದಾಳಿ ಮತ್ತು ಶೋಧನೆಯ ಬಳಿಕ ಈ ಬೃಹತ್ ಜಾಲವನ್ನು ಪತ್ತೆಹಚ್ಚಲಾಗಿದೆ. ಮೂರು ತಂಡಗಳಲ್ಲಿ ಹವಾಲಾ ವ್ಯವಹಾರ ನಡೆಸಲಾಗುತ್ತಿತ್ತು. ನಯಾ ಬಜಾರ್ ಪ್ರದೇಶದಲ್ಲಿ ನಡೆಸಿದ ದಾಳಿಯ ವೇಳೆ ಸುಮಾರು 18 ಸಾವಿರ ರೂ. ಮೊತ್ತದ ನಕಲಿ ಬಿಲ್‌ಗಳು ಪತ್ತೆಯಾಗಿವೆ. ಈ ಬಿಲ್‌ಗಳನ್ನು 12ಕ್ಕೂ ಹೆಚ್ಚು ನಕಲಿ ಸಂಸ್ಥೆಗಳ ಹೆಸರಲ್ಲಿ ಪಾವತಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಸುವ್ಯವಸ್ಥಿತ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಹಣ ಅಕ್ರಮ ಸಾಗಣೆ ಪ್ರಕರಣವನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣದಲ್ಲಿ ಪ್ರಸಿದ್ಧ ಸಂಸ್ಥೆಗಳ ಶೇರುಗಳು ಎಂದು ನಂಬಿಸಿ ಶೇರ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ವ್ಯವಹಾರದಲ್ಲಿ ಸುಮಾರು 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅಕ್ರಮ ಹಣ ಸಂಪಾದಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ವಿದೇಶಿ ಬ್ಯಾಂಕ್‌ನ ಖಾತೆಗಳು ಹಾಗೂ ರಫ್ತು ಮಾಡಿದ ಸರಕುಪಟ್ಟಿ ತೋರಿಸಿ ತೆರಿಗೆ , ಜಿಎಸ್‌ಟಿ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಹಿ ಹಾಕಿರುವ, ಹಾಕದ ಕಾಗದ ಪತ್ರಗಳು, ತಿಳುವಳಿಕಾ ಪತ್ರಗಳು, ವ್ಯವಹಾರ ಒಪ್ಪಂದಗಳು, ನಗದು ಸಾಲ, ಆರ್ಥಿಕ ತಗಾದೆಗಳನ್ನು ಹಣ ಪಾವತಿ ಮೂಲಕ ಇತ್ಯರ್ಥಪಡಿಸಿರುವ ಬಗ್ಗೆ ದಾಖಲೆ ಮುಂತಾದವುಗಳನ್ನು (ಸುಮಾರು 100 ಕೋಟಿ ಮೌಲ್ಯ) ವಶಕ್ಕೆ ಪಡೆಯಲಾಗಿದೆ. ಅಲ್ಲದೆ ವಿದೇಶ ಪ್ರವಾಸಕ್ಕೆ ವ್ಯವಸ್ಥೆ, ಪ್ರವಾಸಕ್ಕೆ ವ್ಯವಸ್ಥೆ ಮಾಡಲು ವಿದೇಶದ ಕರೆನ್ಸಿ ಪೂರೈಕೆ ಮುಂತಾದ ವ್ಯವಹಾರದಲ್ಲಿ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ತೆರಿಗೆ ತಪ್ಪಿಸಿರುವುದಾಗಿ ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News