ನಿಮ್ಮ ರ‍್ಯಾಲಿಗಿಂತ ಮಕ್ಕಳ ಕಲಿಕೆ ಮುಖ್ಯ ಎಂದ ಸುಪ್ರೀಂಕೋರ್ಟ್: ಬಿಜೆಪಿಗೆ ಮುಖಭಂಗ

Update: 2019-02-11 16:48 GMT

ಹೊಸದಿಲ್ಲಿ, ಫೆ.11: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಆಯೋಜಿಸಿರುವ ಚುನಾವಣಾ ರ್ಯಾಲಿ ಸಂದರ್ಭ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಿರುವ ಮಮತಾ ಬ್ಯಾನರ್ಜಿ ಸರಕಾರದ ಆದೇಶ ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ರ್ಯಾಲಿಗಿಂತ ಮಕ್ಕಳ ಅಧ್ಯಯನ ಪ್ರಮುಖವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಮಕ್ಕಳಿಗೆ ವಾರ್ಷಿಕ ಪರೀಕ್ಷೆಗೆ ಅಧ್ಯಯನ ನಡೆಸಬೇಕಿರುವ ಕಾರಣ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ಬಿಜೆಪಿ ಪ.ಬಂಗಾಳದಲ್ಲಿ ಆಯೋಜಿಸಿರುವ ರ್ಯಾಲಿಯ ಸಂದರ್ಭ ಧ್ವನಿವರ್ಧಕ ಬಳಸಬಾರದೆಂದು ರಾಜ್ಯ ಸರಕಾರ ಆದೇಶಿಸಿತ್ತು. ಇದನ್ನು ಖಂಡಿಸಿರುವ ರಾಜ್ಯ ಬಿಜೆಪಿ ಘಟಕ, ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗೆ ಅಡ್ಡಿ ತರಲು, ಪರಿಸರ ನಿಯಮದ ವ್ಯಾಪ್ತಿಯನ್ನು ಉಲ್ಲಂಘಿಸಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ.

 ಆದರೆ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್, ರ್ಯಾಲಿಗಿಂತ ಮಕ್ಕಳ ಅಧ್ಯಯನ ಮಹತ್ವದ್ದಾಗಿದೆ ಎಂದು ತಿಳಿಸಿದೆ. ಕಳೆದ ತಿಂಗಳು ಪ.ಬಂಗಾಳದಲ್ಲಿ ರಥಯಾತ್ರೆ ನಡೆಸು ಬಿಜೆಪಿ ನಿರ್ಧಾರಕ್ಕೆ ತಡೆಯೊಡ್ಡಿದ್ದ ಮಮತಾ ಬ್ಯಾನರ್ಜಿ , ರಥಯಾತ್ರೆಯಿಂದ ಕೋಮು ಸೌಹಾರ್ದತೆಗೆ ಭಂಗವಾಗಬಹುದು ಎಂಬ ಕಾರಣ ನೀಡಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಮಮತಾ ಆದೇಶ ರದ್ದುಗೊಳಿಸಲು ಸುಪ್ರೀಂ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News