ಬೆಲೆಗಳ ಉಲ್ಲೇಖವಿಲ್ಲದ,ರಫೇಲ್ ಕುರಿತ ಸಿಎಜಿ ವರದಿ ನಾಳೆ ಸಂಸತ್ತಿನಲ್ಲಿ ಮಂಡನೆ

Update: 2019-02-11 17:07 GMT

ಹೊಸದಿಲ್ಲಿ,ಫೆ.11: ಫ್ರಾನ್ಸ್‌ ನಿಂದ 36 ರಫೇಲ್ ವಿಮಾನಗಳ ಖರೀದಿ ಒಪ್ಪಂದ ಕುರಿತು ಮಹಾ ಲೇಖಪಾಲ (ಸಿಎಜಿ)ರ ವರದಿಯು ಮಂಗಳವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಆದರೆ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಮೂಲವಾಗಿರುವ ಯುದ್ಧವಿಮಾನಗಳ ಬೆಲೆಗಳು ಈ ವರದಿಯಲ್ಲಿ ಉಲ್ಲೇಖಿಸಲ್ಪಟ್ಟಿಲ್ಲ ಎಂದು ಮೂಲಗಳು ತಿಳಿಸಿವೆ.

ಹಾಲಿ ಪ್ರಗತಿಯಲ್ಲಿರುವ ಸಂಸತ್ ಅಧಿವೇಶನವು ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಕೊನೆಯ ಅಧಿವೇಶನವಾಗಿದ್ದು,ಬುಧವಾರ ಅಂತ್ಯಗೊಳ್ಳಲಿದೆ.

ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಬೆಲೆ ವಿವರಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂದು ರಕ್ಷಣಾ ಸಚಿವಾಲಯವು ಸಿಎಜಿಗೆ ಸ್ಪಷ್ಟವಾಗಿ ತಿಳಿಸಿತ್ತು ಎಂದು ತಿಳಿಸಿದ ಮೂಲಗಳು,ಸರಕಾರದಿಂದ ತುಂಬ ಒತ್ತಡವಿತ್ತು ಮತ್ತು ತನ್ನ ವರದಿಯಿಂದ ಬೆಲೆಗಳನ್ನು ಹೊರಗಿಡಲು ಮತ್ತು ಶೇಕಡಾವಾರು ಆಧಾರದಲ್ಲಿ ಪರಿಶೋಧನೆಯನ್ನು ನಡೆಸಲು ಸಿಎಜಿ ಒಪ್ಪಿಕೊಂಡಿದ್ದರು ಎಂದು ಹೇಳಿದವು.

ವರದಿಯು ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ 2007 ಮತ್ತು 2015ರ ಬಿಡ್‌ಗಳ ಪ್ರಕ್ರಿಯೆಗಳನ್ನು ಹೋಲಿಸಲಿದೆ. ಆಫ್‌ಸೆಟ್ ಕರಾರುಗಳ ಕುರಿತು ಪರಿಶೋಧನೆ ಇನ್ನೂ ನಡೆಯುತ್ತಿದ್ದು,,ಅದರ ವರದಿಯನ್ನು ನೂತನ ಸರಕಾರ ರಚನೆಯಾದ ಬಳಿಕ ಸಲ್ಲಿಸಲಾಗುವುದು.

ಸಿಎಜಿ ರಾಜೀವ ಮಹರ್ಷಿ ಅವರು ರಫೇಲ್ ಒಪ್ಪಂದಕ್ಕೆ ಅಂಕಿತ ಬಿದ್ದ ಸಂದರ್ಭ ವಿತ್ತ ಕಾರ್ಯದರ್ಶಿಯಾಗಿದ್ದರು. ಇದು ಕಾಂಗ್ರೆಸ್ ಪಕ್ಷವು ಹಿತಾಸಕ್ತಿಗಳ ಸಂಘರ್ಷವನ್ನು ಆರೋಪಿಸಲು ಕಾರಣವಾಗಿದೆ. ತನ್ನನ್ನು ರಕ್ಷಿಕೊಳ್ಳಲು ಮಹರ್ಷಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ರಕ್ಷಿಸಲು ಪ್ರಯತ್ನಿಸಲಿದ್ದಾರೆ ಎಂದು ರವಿವಾರ ಆರೋಪಿಸಿದ್ದ ಹಿರಿಯ ಕಾಂಗ್ರೆಸ್ ನಾಯಕ ಕಪಿಲ ಸಿಬಲ್ ಅವರು,ಸಿಎಜಿ ತನ್ನ ವಿರುದ್ಧವೇ ತನಿಖೆ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News