ಎನ್‌ಡಿಎ ಸರಕಾರದ ಮಧ್ಯಂತರ ಬಜೆಟ್‌ನ ಅಸಲಿಯತ್ತೇನು?

Update: 2019-02-11 18:39 GMT

ತಮ್ಮ ಆಳ್ವಿಕೆಯ ಅಂತಿಮಾವಧಿಯಲ್ಲಿ ಸರಕಾರಗಳು ಮಂಡಿಸುವ ಮಧ್ಯಂತರ ಬಜೆಟ್‌ಗಳು ಆಳುವ ಪಕ್ಷಗಳಿಗೆ ಪೊಳ್ಳು ಭರವಸೆಗಳನ್ನು ನೀಡಲು ದಕ್ಕುವ ಮುಕ್ತ ವೇದಿಕೆಗಳಾಗಿರುತ್ತವೆ. ಎನ್‌ಡಿಎ ಸರಕಾರದ ಈ ಸಾಲಿನ ಮಧ್ಯಂತರ ಬಜೆಟ್‌ನ ಹೇಳಿಕೆಗಳು ಇದಕ್ಕೆ ಹೊರತೇನಲ್ಲ. ಅತಾರ್ಕಿಕವಾದ ಆದರೆ ಜನಪ್ರಿಯ ಯೋಜನೆಗಳಾದ ಆದಾಯ ಬೆಂಬಲ ಮತ್ತು ತೆರಿಗೆ ವಿನಾಯತಿ ಘೋಷಣೆೆಗಳಿಂದ ತುಂಬಿತುಳುಕುತ್ತಿದ್ದ ಈ ಬಜೆಟನ್ನು ಸರಕಾರವು ಕುಸಿಯುತ್ತಿರುವ ತನ್ನ ರಾಜಕೀಯ ಇಮೇಜನ್ನು ಮರುಪಡೆದುಕೊಳ್ಳಲು ಬಳಸಿಕೊಂಡಿದೆ. ಆದರೆ ಇದರಲ್ಲಿನ ಅಸಾಧಾರಣವಾದ ವಿಷಯವೇನೆಂದರೆ ಮಧ್ಯಂತರ ಬಜೆಟ್‌ನಂಥ ಒಂದು ತಾತ್ಕಾಲಿಕ ಕ್ರಮವನ್ನು ಸಹ ಅದು ತನ್ನ ದೀರ್ಘಕಾಲೀನ ರಾಜಕೀಯ ಲಾಭಗಳಿಗಾಗಿ ಬಳಸಿಕೊಂಡಿರುವುದು. ಈ ಮಧ್ಯಂತರ ಬಜೆಟ್ ಆಳುವ ಪಕ್ಷದ ಚುನಾವಣಾ ಪ್ರಣಾವಳಿಕೆಯಾಗಿರುವಷ್ಟೇ ಜನರ ಆಶೋತ್ತರಗಳ ಮೇಲೆ ಸವಾರಿ ಮಾಡುವ ರಣತಂತ್ರವೂ ಆಗಿದೆ.

ಉದಾಹರಣೆಗೆ ಸರಕಾರವು ಹೊಸದಾಗಿ ಖರ್ಚು ಮಾಡುವ ಬಾಬತ್ತಿನಲ್ಲಿ ಸೇರಿಸಿರುವ ಸಣ್ಣ ರೈತರಿಗೆ ವಾರ್ಷಿಕ 6,000ರೂ. ಆದಾಯ ಬೆಂಬಲ ನೀಡುವ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ (ಪಿಎಂ-ಕೆಐಎಸ್‌ಎಎನ್) ಯೋಜನೆಯನ್ನೇ ತೆಗೆದುಕೊಳ್ಳಿ. ಈ ಹಣದ ಪ್ರಮಾಣ ಎಷ್ಟು ಕ್ಷುಲ್ಲಕವಾದುದೆಂಬ ಚರ್ಚೆಯಾಚೆಗೆ ಈ ಯೋಜನೆಯ ರಾಜಕೀಯ ಪರಿಣಾಮಗಳು ಅಡಗಿವೆ. ಚುನಾವಣೆಗೆ ಮುಂಚೆಯೇ ಈ 6,000 ರೂ. ಯೋಜನೆಯ ಮೊದಲ 2,000 ರೂ.ದ ಕಂತನ್ನು ಬಿಡುಗಡೆ ಮಾಡಿದರೆ ಜನರಿಂದ ಓಟುಗಳನ್ನು ಖರೀದಿ ಮಾಡಿದ ಆರೋಪಕ್ಕೆ ಆಳುವ ಸರಕಾರದ ಪಕ್ಷ ಗುರಿಯಾಗಬೇಕಾಗುತ್ತದೆ. ಮತ್ತೊಂದು ಕಡೆ ಈ ಯೋಜನೆಯನ್ನು ಚುನಾವಣೆ ಆಗುವವರೆಗೆ ಮುಂದೂಡಿ ನಂತರ ಬಿಜೆಪಿ ನೇತೃತ್ವದ ಪಕ್ಷವೇ ಆಧಿಕಾರಕ್ಕೆ ಬಂದರೆ ಜನರ ಚುನಾವಣಾ ಆಯ್ಕೆಗಳನ್ನು ಈ ಯೋಜನೆಯ ಮೂಲಕ ವಿಕೃತಗೊಳಿಸಿದ ಆರೋಪವನ್ನು ವಿರೋಧ ಪಕ್ಷಗಳಿಂದ ಎದುರಿಸಬೇಕಾಗುತ್ತದೆ. ಮತ್ತು ಚುನಾವಣೆಯ ನಂತರ ಬರುವ ಹೊಸ ಸರಕಾರ ಈ ಯೋಜನೆಯನ್ನು ಜಾರಿ ಮಾಡದಿದ್ದರೆ ಮತ್ತಷ್ಟು ಆರೋಪಗಳಿಗೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ಬಿಜೆಪಿಯೇತರ ಸರಕಾರವು ಅಧಿಕಾರಕ್ಕೆ ಬಂದರೂ ಈ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಪ್ರಮಾಣದ ವಿತರಣೆಯನ್ನು ಮಾಡಬೇಕೆಂಬ ಒತ್ತಡ ಅದರ ಮೇಲೆ ಹೆಚ್ಚಿರುತ್ತದೆ.

ಇಂತಹ ಯೋಜನೆಗಳು ಪಡೆದುಕೊಳ್ಳುವ ಜನಪ್ರಿಯತೆಯನ್ನು ನೋಡಿದರೆ ಸರಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾದರೂ ಸರಿ ಯಾವ ಸರಕಾರಗಳು ಈ ಭರವಸೆಗಳಿಂದ ಹಿಂದೆ ಸರಿಯುವುದಿಲ್ಲ. ಆದರೆ ಈ ಮೊತ್ತದ ಪ್ರಮಾಣ ಎಷ್ಟು ಚಿಕ್ಕದೆಂಬ ವಿಮರ್ಶೆಯಲ್ಲಿ ತೊಡಗಿಕೊಳ್ಳುವ ಮೂಲಕ ವಿರೋಧ ಪಕ್ಷವು ತನ್ನ ಮಾತನ್ನು ತಾನೇ ನುಂಗಲಾಗದ ಸ್ಥಿತಿಯನ್ನು ತಂದುಕೊಳ್ಳಬಹುದು. ಅಷ್ಟು ಮಾತ್ರವಲ್ಲದೆ, ತಾವು ಅಧಿಕಾರಕ್ಕೆ ಬಂದರೆ ಇದಕ್ಕಿಂತ ಇನ್ನೂ ಹೆಚ್ಚು ಪ್ರಮಾಣದ ಮತ್ತು ಸಂಖ್ಯೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂಬ ಭರವಸೆಗಳನ್ನು ನೀಡುತ್ತಾ ಮತದಾರರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟಿಸಿರುವ ವಿರೋಧಪಕ್ಷಗಳು ಒಂದೊಮ್ಮೆ ಈ ಭರವಸೆಗಳಿಂದ ಒಂದಷ್ಟು ಹಿಂದೆ ಸರಿದರೂ ಆಡಳಿತವಿರೋಧಿ ಆಕ್ರೋಶಕ್ಕೆ ತುತ್ತಾಗುತ್ತಾರೆ. ಇದೇ ಅಪಾಯವು ಅಸಂಘಟಿತ ಕಾರ್ಮಿಕರ ಪಿಂಚಣಿ ಯೋಜನೆಯಾದ ಪ್ರಧಾನ ಮಂತ್ರಿ ‘ಶ್ರಮ ಯೋಗಿ ಮಂಥನ್’ನಂಥ ಯೋಜನೆಗಳಲ್ಲೂ ಇವೆ. ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ನಿರುದ್ಯೋಗವು ಚುನಾವಣಾ ಪ್ರಚಾರ ಸಾಧನದ ನೆಲೆಯಾಗಿರುವಂತೆ ಕಂಡುಬರುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಹಲವಾರು ರ್ಯಾಲಿಗಳಲ್ಲಿ ಏರುತ್ತಿರುವ ನಿರುದ್ಯೋಗದ ದರದ ಬಗ್ಗೆ ಆಡಳಿತರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರಲ್ಲದೆ ತಾವು ಅಧಿಕಾರಕ್ಕೆ ಬಂದರೆ ನಿರುದ್ಯೋಗ ನಿವಾರಣೆ ಮಾಡುವ ಭರವಸೆಯನ್ನು ನೀಡಿದ್ದಾರೆ.

ಆದರೆ ನಿರುದ್ಯೋಗವೆಂಬುದು ಮೂಲಭೂತವಾಗಿ ಕಾರ್ಮಿಕ ಮಾರುಕಟ್ಟೆ ವ್ಯವಸ್ಥೆಯ ರಾಚನಿಕ ಸಂಗತಿಯಾಗಿದ್ದು ಅದನ್ನು ಹೋಗಲಾಡಿಸಬೇಕೆಂದರೆ ಪ್ರಜ್ಞಾಪೂರ್ವಕವಾದ ನೀತಿ-ತತ್ವ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಆದರೆ ಚುನಾವಣೆಗಳಲ್ಲಿ ನೀತಿಗಳನ್ನು ಒಳಗೊಂಡ ಯಾವ ವಿಷಯವಾದರೂ ಚರ್ಚೆಗೆ ಬಂದಿವೆಯೇ? ವಿಪರ್ಯಾಸವೆಂದರೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತಾವು ಬಿಜೆಪಿಯನ್ನು ಯಾವ ಒಣ ಭರವಸೆಗಳ (ಜುಮ್ಲಾಬಾಜಿ) ಕಾರಣಕ್ಕಾಗಿ ಆಕ್ಷೇಪಿಸುತ್ತಿದ್ದವೋ ಅದೇ ಜುಮ್ಲಾಬಾಜಿಯಲ್ಲಿ ತಾವೂ ಸಹ ತೊಡಗಿಕೊಂಡಿವೆ. ಹೀಗೆ ಬರೀಮಾತುಗಳ ಒಣಸಮರದಲ್ಲಿ ಯಾವುದೇ ನೀತಿ ಹಾಗೂ ತತ್ವಗಳ ಚರ್ಚೆಯೇ ಬದಿಗೆ ಸರಿಯುತ್ತವೆ ಮತ್ತು ಚುನಾವಣಾ ಆಯ್ಕೆಗಳು ನೀತಿ-ತತ್ವಗಳ ಮೇಲೆ ಆಧಾರಿತವಾಗದೆ ಕೇವಲ ವ್ಯಕ್ತಿಗಳನ್ನು ಆಧರಿಸುವಂತಾಗುತ್ತದೆ. ಮತದಾರರು ತಮ್ಮ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಮತ್ತು ಕಾಳಜಿಗಳನ್ನು ಯಾರು ಪ್ರತಿನಿಧಿಸುತ್ತಾರೆಂದು ಭಾವಿಸುತ್ತಾರೋ ಅಂಥವರನ್ನು ತಮ್ಮ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.

ಈ ಕಾರಣಕ್ಕಾಗಿಯೇ ಅಸಂಘಟಿತ ಕಾರ್ಮಿಕರಿಗೆ ಘೋಷಿಸಲಾಗಿರುವ ಪಿಂಚಣಿ ಯೋಜನೆಯು ಹಲವಾರು ಕಾರಣಗಳಿಂದಾಗಿ ಎದುರಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವಲ್ಲಿ ಆಳುವ ಸರಕಾರದ ಬಲವಾದ ಕಾರ್ಯತಂತ್ರವಾಗಿ ಪರಿಣಮಿಸುವ ಸಾಧ್ಯತೆಯಿದೆ. ಮೊದಲನೆಯದಾಗಿ ಉದ್ಯೋಗದ ಅಂಕಿಅಂಶಗಳ ಬಗ್ಗೆ ನಡೆಯುತ್ತಿರುವ ವಾದ ವಿವಾದಗಳ ಹಿನ್ನೆಲೆಯಲ್ಲಿ ಈ ಯೋಜನೆಯು ವಾಸ್ತವದಲ್ಲಿ ಭಾರತದ ಉದ್ಯೋಗ ಮಾರುಕಟ್ಟೆಯ ಬಲಹೀನತೆಯನ್ನಷ್ಟೇ ಎತ್ತಿತೋರಿಸುತ್ತದೆ. ಎರಡನೆಯದಾಗಿ ಸಮಸ್ಯೆಯನ್ನು ಅಂಗೀಕರಿಸಿದ ನಂತರದಲ್ಲಿ, ಐತಿಹಾಸಿಕವಾಗಿ ಅತಿಹೆಚ್ಚು ಉದ್ಯೋಗಗಳನ್ನು ನೀಡುತ್ತಾ ಬಂದಿರುವ ಅಸಂಘಟಿತ ಕ್ಷೇತ್ರದಲ್ಲಾದರೂ ಕನಿಷ್ಠ ಪಕ್ಷ ಪರಿಹಾರ ಒದಗಿಸುವ ಭರವಸೆಗಳನ್ನು ನೀಡಲಾಗಿದೆ. ಮೂರನೆಯದಾಗಿ, ಹಾಗೆ ಮಾಡುವ ಮೂಲಕ ಮುಂದೆ ಅಧಿಕಾಕ್ಕೆ ಬರಲಿರುವ ಸರಕಾರವು ತಾನು ಉಳಿಯಬೇಕೆಂದರೂ ಅನುಸರಿಸಲೇ ಬೇಕಾದ ಒಂದು ಉನ್ನತವಾದ ಆದರೆ ತಳಗಟ್ಟಿಯಿಲ್ಲದ ಉದಾಹರಣೆಯೊಂದನ್ನು ಈ ಹೊರಹೋಗುತ್ತಿರುವ ಸರಕಾರವು ನಿರ್ಮಿಸಿ ನಿರ್ಗಮಿಸುತ್ತಿದೆ.

ಜನರ ಆಶೋತ್ತರಗಳನ್ನು ದುರ್ಬಳಕೆ ಮಾಡಿಕೊಳ್ಳುವ ರಾಜಕೀಯದ ಅತಂತ್ರತೆಯು ಜಾರಿಗೆ ತರಲಾಗದ ಒಣಭರವಸೆಗಳ ಮೇಲಾಟಗಳಲ್ಲಿ ವ್ಯಕ್ತವಾಗುತ್ತದೆ. ಪಿಎಂ-ಕಿಸಾನ್ ಯೋಜನೆ, ಪಿಎಮ್‌ವೈಎಸ್ಸೆಮ್ ಯೋಜನೆ ಅಥವಾ ವಾರ್ಷಿಕ ಐದು ಲಕ್ಷಕ್ಕಿಂತ ಕಡಿಮೆ ಆದಾಯವಂತರ ಮೇಲೆ ಆದಾಯ ತೆರಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯೋಜನೆಗಳ ಆಧಾರದ ಮೇಲೆ ವಿರೋಧಪಕ್ಷಗಳು ಸಹ ಅಧಿಕಾರಕ್ಕೆ ಬರುವ ತಂತ್ರವು ಎರಡಲಗಿನ ಕತ್ತಿಗಳಾಗಿ ವರ್ತಿಸಲಿವೆ. ಮೊದಲನೆಯದಾಗಿ ಈ ಯೋಜನೆಗಳಲ್ಲಿ ಅಡಕವಾಗಿರುವ ಜನಕಲ್ಯಾಣ ಆಶಯಗಳಿಂದಾಗಿ ಯಾವುದೇ ಸರಕಾರ ಈ ಭರವಸೆಗಳಿಂದ ಹಿಂದೆ ಸರಿಸಲಾಗುವುದಿಲ್ಲ. ಆದರೆ ಇವುಗಳನ್ನು ಜಾರಿಗೆ ತರುವುದು ಇನ್ನೂ ಹೆಚ್ಚು ದುಸ್ತರವಾಗಲಿದೆ. ಉದಾಹರಣೆಗೆ ಆದಾಯ ತೆರಿಗೆ ವಿನಾಯತಿ ಬಗ್ಗೆ ಕೊಡಲಾಗಿರುವ ಭರವಸೆಗಳನ್ನು ಜಾರಿಗೆ ತರಬೇಕೆಂದರೆ ಹಣಕಾಸು ಮಸೂದೆಗೆ ತಿದ್ದುಪಡಿಗಳನ್ನು ತರಬೇಕಾಗುತ್ತದೆ ಮತ್ತು ಅದಕ್ಕೆ ಸಾಕಷ್ಟು ಕಾಲಾವಧಿ ಬೇಕಾಗುತ್ತದೆ. ಮತದಾರರು ಅಷ್ಟು ವಿಳಂಬವನ್ನು ಸಹಿಸಿಕೊಂಡು ಇರುತ್ತಾರೆಯೇ ಎಂಬುದು ಇತರ ಕಲ್ಯಾಣ ಕಾರ್ಯಕ್ರಮಗಳನ್ನು ಅಧಿಕಾರರೂಢ ಸರಕಾರವು ಎಷ್ಟು ಪರಿಣಾಮಕಾರಿ ರೀತಿಯಲ್ಲಿ ಜಾರಿ ಮಾಡುತ್ತದೆ ಎಂಬುದನ್ನು ಆಧರಿಸಿರುತ್ತದೆ. ಮತ್ತೊಂದು ಕಡೆ ಅಧಿಕಾರರೂಢ ಸರಕಾರವು ಒಂದು ವೇಳೆ ಇದರಲ್ಲಿನ ಯಾವುದೇ ಭರವಸೆಯನ್ನು ಪೂರೈಸಲು ಸಫಲವಾದರೂ ಅದು ಸಮಾಜದ ಇತರ ವರ್ಗಗಳು ಸಹ ಅದೇ ರೀತಿಯ ಬೇಡಿಕೆಯನ್ನು ಮುಂದಿಡಲು ಪ್ರಚೋದಿಸುತ್ತದೆ. ಅದರಲ್ಲೂ ಬಿಜೆಪಿಯ ಶೇ.10 ರ ಮೀಸಲಾತಿ ರಾಜಕಾರಣವು ಇಂಥಾ ಗುಂಪುವಾರು ಆಗ್ರಹಗಳಿಗೆ ಬೇಕಿರುವ ಭೂಮಿಕೆಯನ್ನು ಒದಗಿಸಿಕೊಟ್ಟಿದೆ ಮತ್ತು ಹಣಕಾಸು ಮಂತ್ರಿ ಪೀಯೂಷ್ ಗೋಯಲ್ ಅವರು ತಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅಧಿಕ ಆದಾಯ ಹೊಂದಿರುವ ವರ್ಗಗಳಿಗೂ ತೆರಿಗೆ ಸಡಿಲಿಸುವುದಾಗಿ ನೀಡಿರುವ ಭರವಸೆಯು ಈ ಉನ್ಮಾದಕ್ಕೆ ಇನ್ನಷ್ಟು ಉರುವಲನ್ನು ಸರಬರಾಜು ಮಾಡಿದೆ.

ಹೀಗಿರುವಾಗ ಈ ರಾಜಕೀಯ ಆಶೋತ್ತರಗಳ ಆರ್ಥಿಕ ಕಾರ್ಯಸಾಧ್ಯತೆಗಳ ಪ್ರಶ್ನೆ ಗಂಭೀರವಾಗಿ ಎದುರಾಗುತ್ತದೆ. ಸರಕಾರದ ಅಂದಾಜುಗಳೇ ಹೇಳುವಂತೆ ವಿತ್ತೀಯ ಕೊರತೆಯ ಮಟ್ಟವನ್ನು ಈಗಿರುವ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ ಶೇ.3.3ರಿಂದ ಕೇವಲ ಶೇ.0.1ರಷ್ಟು ಏರಿಸಿ 3.4ರಷ್ಟಕ್ಕೆ ನಿಗದಿಗೊಳಿಸಿಕೊಂಡರೆ ಸಾಕು ಈ ಎಲ್ಲಾ ಭರವಸೆಗಳನ್ನು ಈಡೇರಿಸಬಹುದು. ಆದರೆ ಇದು ನಂಬಲರ್ಹವೇ ಎಂಬ ಪ್ರಶ್ನೆ ಇದೆ. ಏಕೆಂದರೆ ವಿತ್ತೀಯ ಕೊರತೆಯ ಲೆಕ್ಕಾಚಾರ ಮಾಡುವಾಗ ಹಾಲೀ ಸರಕಾರವು ಸಾಮಾನ್ಯ ಒಟ್ಟಾರೆ ಆಂತರಿಕ ಉತ್ಪನ್ನ (ನಾಮಿನಲ್ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಅನ್ನು ಶೇ. 11.5ರಷ್ಟಿರುತ್ತದೆ ಎಂದೂ ಹಾಗೂ ರಿಸರ್ವ್ ಬ್ಯಾಂಕ್ ಮತ್ತು ಇತರ ಸಾರ್ವಜನಿಕ ಬ್ಯಾಂಕುಗಳಿಂದ ಸರಕಾರಕ್ಕೆ ಇನ್ನೂ ಹೆಚ್ಚು ಲಾಭದ ಪಾಲು ದೊರೆಯುತ್ತದೆ ಎಂದೂ ಉತ್ಪ್ರೇಕ್ಷಿತ ಹಾಗೂ ತಪ್ಪು ಅಂದಾಜುಗಳನ್ನಿಟ್ಟುಕೊಂಡಿದೆ. ಹೀಗಾಗಿ ಸರಕಾರದ ಲೆಕ್ಕಾಚಾರ ನಂಬಲನರ್ಹ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ವ್ಯಾಪಕವಾಗಿದೆ. ಸರಕಾರವು ಬದಲಾದಂತೆ ಬ್ಯಾಂಕುಗಳೊಡನೆ ಇರುವ ಸಾಂಸ್ಥಿಕ ಹೊಂದಾಣಿಕೆಗಳೂ ಬದಲಾಗುತ್ತವೆ. ಆರ್ಥಿಕ ಅಭಿವೃದ್ಧಿಯನ್ನು ಪುನಶ್ಚೇತನಗೊಳಿಸಬೇಕೆಂದರೆ ಸರಕಾರಗಳು ಮೂಲಭೂತ ಬದಲಾವಣೆಗಳನ್ನು ಸಾಧಿಸಲು ಪ್ರಾಮಾಣಿಕ ನೀತಿಗಳನ್ನು ಅನುಷ್ಠಾನಕ್ಕೆ ತರಬೇಕಾಗುತ್ತದೆ. ವಿತ್ತೀಯ ಅಸಮತೋಲನದ ಅಪಾಯವು ನೆತ್ತಿಯ ಮೇಲೆ ತೂಗುತ್ತಿರುವಾಗ ಮತ್ತು ತತ್‌ಕ್ಷಣದ ಲಾಭವನ್ನು ಪಡೆಯುವ ಸಲುವಾಗಿ ಸುವ್ಯವಸ್ಥಿತ ರಾಜಕೀಯ ಒತ್ತಡಗಳು ಏರುತ್ತಿರುವಾಗ ಹೊಸದಾಗಿ ಅಧಿಕಾರಕ್ಕೆ ಬರುವ ಯಾವುದೇ ಸರಕಾರವು ಅಂಥ ದೀರ್ಘ ಕಾಲೀನ ಕ್ರಮಗಳ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಲು ಸಾಧ್ಯವೇ? ಇಂಥಾ ಸನ್ನಿವೇಶದಲ್ಲಿ ಬಿಜೆಪಿ ಸರಕಾರವು ಮಂಡಿಸಿರುವ ಮಧ್ಯಂತರ ಬಜೆಟ್ ವೋಟುಬ್ಯಾಂಕಿಗೆ ನೀಡಿರುವ ಆಮಿಷ ಮಾತ್ರವಲ್ಲದೆ ಭಿನ್ನಾವದ ರಾಜಕೀಯ ಅಜೆಂಡಾ ಮತ್ತು ಇಚ್ಚಾಶಕ್ತಿಯನ್ನು ಹೊಂದಿರುವ ಸರಕಾರವೊಂದು ಕಾರ್ಯನಿರ್ವಹಿಸದಂತೆ ಮಾಡುವ ನೇಣುಹಗ್ಗವೂ ಆಗಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News