×
Ad

ಸೇಡು ಸಾಧಿಸುತ್ತಿರುವ ಸರಕಾರದಿಂದ ನನ್ನ ವೃದ್ಧ ತಾಯಿಗೆ ಕಿರುಕುಳ: ರಾಬರ್ಟ್ ವಾದ್ರಾ

Update: 2019-02-12 19:49 IST

ಹೊಸದಿಲ್ಲಿ,ಫೆ.12: ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ(ಈ.ಡಿ)ದಿಂದ ತನಿಖೆಗೊಳಗಾಗಿರುವ ರಾಬರ್ಟ್ ವಾದ್ರಾ ಅವರು,ಚುನಾವಣೆಗಳು ಸಮೀಪಿಸುತ್ತಿರುವದರಿಂದ ಮೋದಿ ಸರಕಾರವು ಸೇಡು ಸಾಧಿಸುತ್ತಿದೆ ಮತ್ತು ತನ್ನ 75ರ ಹರೆಯದ ತಾಯಿಗೆ ಕಿರುಕುಳ ನೀಡುತ್ತಿದೆ ಎಂದು ಮಂಗಳವಾರ ಫೇಸ್‌ ಬುಕ್ ಪೋಸ್ಟ್ ‌ನಲ್ಲಿ ಆರೋಪಿಸಿದ್ದಾರೆ.

ತನ್ನನ್ನು ವಿಚಾರಣೆಗಾಗಿ ಕರೆಸಿಕೊಳ್ಳಲು ಸರಕಾರವು ನಾಲ್ಕು ವರ್ಷ ಮತ್ತು ಎಂಟು ತಿಂಗಳು ಕಾದಿದ್ದೇಕೆ? ಚುನಾವಣಾ ಪ್ರಚಾರ ಆರಂಭಗೊಳ್ಳುವ ಒಂದು ತಿಂಗಳು ಮೊದಲು ತನ್ನನ್ನು ವಿಚಾರಣೆಗೆ ಕರೆಸಿರುವುದು ಚುನಾವಣಾ ಗಿಮಿಕ್ ಎಂದು ಭಾರತೀಯರಿಗೆ ಗೊತ್ತಾಗುವುದಿಲ್ಲವೆಂದು ಅದು ಭಾವಿಸಿದೆಯೇ ಎಂದೂ ವಾದ್ರಾ ಪ್ರಶ್ನಿಸಿದ್ದಾರೆ.

ರಾಜಸ್ಥಾನದ ಬಿಕಾನೇರ್‌ನಲ್ಲಿ ಭೂ ಹಗರಣ ಆರೋಪದಲ್ಲಿ ಜೈಪುರದಲ್ಲಿಯ ಈ.ಡಿ.ಕಚೇರಿಯಲ್ಲಿ ವಿಚಾರಣೆಗಾಗಿ ತನ್ನ ತಾಯಿ ಮೌರೀನ್ ಅವರೊಂದಿಗೆ ಹಾಜರಾಗುವ ಕೆಲವೇ ಕ್ಷಣಗಳ ಮೊದಲು ವಾದ್ರಾ ಫೇಸ್‌ ಬುಕ್ ‌ನಲ್ಲಿ ತನ್ನ ಆಕ್ರೋಶವನ್ನು ತೋಡಿಕೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೂ ಪತಿ ಮತ್ತು ಅತ್ತೆಯ ಜೊತೆಯಲ್ಲಿದ್ದರು.

ಕಾರು ಅಪಘಾತದಲ್ಲಿ ತನ್ನ ಮಗಳನ್ನು,ಮಧುಮೇಹದಿಂದಾಗಿ ತನ್ನ ಪುತ್ರ ಮತ್ತು ಪತಿಯನ್ನು ಕಳೆದುಕೊಂಡಿರುವ 75 ವರ್ಷದ ಹಿರಿಯ ಪ್ರಜೆಗೆ ಕಿರುಕುಳ ನೀಡಲು ಸೇಡಿನ ಮನೋಭಾವದ ಈ ಸರಕಾರ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ಹೇಗೆ ಎನ್ನುವುದು ಅರ್ಥವಾಗುತ್ತಿಲ್ಲ. ಮೂರು ಸಾವುಗಳ ಬಳಿಕ ಜರ್ಜರಿತರಾಗಿರುವ ತಾಯಿಯ ಕಾಳಜಿ ವಹಿಸಲೆಂದೇ ಆಕೆ ಸದಾ ತನ್ನ ಜೊತೆಗಿರುವಂತೆ ನೋಡಿಕೊಳ್ಳುತ್ತಿದ್ದೇನೆ ಎಂದೂ ವಾದ್ರಾ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News