5 ದಿನಕ್ಕೆ ಕಾಲಿರಿಸಿದ ಗುಜ್ಜರರ ಚಳವಳಿ: ಸವಾಯಿ ಮಧೋಪುರದಲ್ಲಿ ಇಂಟರ್‌ನೆಟ್ ಸ್ಥಗಿತ
ಸವಾಯಿ ಮಧಪುರ್, ಫೆ. 12: ಮೀಸಲಾತಿಗೆ ಆಗ್ರಹಿಸಿ ಗುಜ್ಜರರು ನಡೆಸುತ್ತಿರುವ ಚಳವಳಿ ಮಂಗಳವಾರ 5ನೇ ದಿನಕ್ಕೆ ಕಾಲಿರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂಟರ್‌ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿದೆ. ಸಂಪೂರ್ಣ ಇಂಟರ್‌ನೆಟ್ ಸ್ಥಗಿತದ ಸಂದರ್ಭ ಎಲ್ಲ ರೀತಿಯ ಡಾಟಾ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕೃತ ಹೇಳಿಕೆ ತಿಳಿಸಿದೆ.
ಕಳೆದ 5 ದಿನಗಳಿಂದ ಗುಜ್ಜರರು ರೈಲು ಹಳಿಗಳ ಮೇಲೆ ಪ್ರತಿಭಟನೆ ನಡೆಸುತ್ತಿರುವುದರಿಂದ ರೈಲು ಸಂಚಾರದ ಮೇಲೆ ದುಷ್ಪರಿಣಾಮ ಉಂಟಾಗಿದೆ. 3 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. 2 ರೈಲುಗಳ ಸಂಚಾರ ಮಾರ್ಗ ಬದಲಿಸಲಾಗಿದೆ ಎಂದು ರೈಲ್ವೆ ಹೇಳಿದೆ. ಕೋಟಾ ವಿಭಾಗದಲ್ಲಿ ಸಂಚರಿಸುವ 12 ರೈಲುಗಳನ್ನು ಫೆಬ್ರವರಿ 12ರಂದು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಘೋಷಿಸಿದೆ. ಪ್ರತಿಭಟನಕಾರರು ಕಾನೂನು ಹಾಗೂ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಿ ಜಿಲ್ಲಾಡಳಿದ ಗುಜ್ಜರರ ನಾಯಕ ಕಿರೋರಿ ಸಿಂಗ್ ಬೈನ್ಸ್‌ಲಾ ಅವರಿಗೆ ನೋಟಿಸು ಜಾರಿ ಮಾಡಿದೆ.