ಗಾಂಧಿ ಕೊಲೆಯ ಪುನರ್‌ಸೃಷ್ಟಿ ಯಾಕಾಗಿ?

Update: 2019-02-12 18:31 GMT

ಹಿಂದೂ ಮಹಾಸಭಾದ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಗಾಂಧಿಯ ಪ್ರತಿಕೃತಿಗೆ ಮೂರು ಗುಂಡು ಹಾರಿಸಿದರು. ಪ್ರತಿಕೃತಿಯ ಹಿಂದೆ ಇದ್ದ ಬಲೂನ್‌ನಿಂದ ರಕ್ತ ತೊಟ್ಟಿಕ್ಕಲು ಆರಂಭಿಸಿತು. ಅಲ್ಲಿ ನೆರೆದ ಹಿಂದೂ ಮಹಾಸಭಾದ ಕಾರ್ಯಕರ್ತರು ಗಾಂಧಿಯನ್ನು ಖಂಡಿಸಿ ಹಾಗೂ ಗೋಡ್ಸೆಯನ್ನು ಹೊಗಳಿ ಘೋಷಣೆಗಳನ್ನು ಕೂಗಿದರು. ‘‘ಮಹಾತ್ಮಾ ನಾಥೂರಾಮ್ ಗೋಡ್ಸೆ ಅಮರ್ ರಹೇ’’ ಎಂದು ಅವರು ಜೈಕಾರ ಹಾಕಿದರು. ದಸರಾ ದಿನದಂದು ರಾವಣನ ಪ್ರತಿಕೃತಿಯನ್ನು ಸುಡುವಂತೆ ಇನ್ನು ಮುಂದೆ ಪ್ರತೀ ವರ್ಷ ತಾವು ಗಾಂಧಿಯ ಹತ್ಯೆಯನ್ನು ಪುನರ್ ಸೃಷ್ಟಿಸುವುದಾಗಿ ಅವರು ಘೋಷಿಸಿದರು.

2019ರ ಜನವರಿ 30ರಂದು ಇಡೀ ದೇಶದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯ 71ನೇ ಹುತಾತ್ಮರ ದಿನವನ್ನು ಜ್ಞಾಪಿಸಿಕೊಳ್ಳುತ್ತಾ ಇದ್ದಾಗ ಅಲಿಗಡದಲ್ಲಿ ಹಿಂದೂ ಮಹಾಸಭಾದ ಸದಸ್ಯರು ಗಾಂಧಿಯ ಕೊಲೆಯನ್ನು ಪುನರ್ ಸೃಷ್ಟಿಸಿದರು. ಹಿಂದೂ ಮಹಾಸಭಾದ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಗಾಂಧಿಯ ಪ್ರತಿಕೃತಿಗೆ ಮೂರು ಗುಂಡು ಹಾರಿಸಿದರು. ಪ್ರತಿಕೃತಿಯ ಹಿಂದೆ ಇದ್ದ ಬಲೂನ್‌ನಿಂದ ರಕ್ತ ತೊಟ್ಟಿಕ್ಕಲು ಆರಂಭಿಸಿತು. ಅಲ್ಲಿ ನೆರೆದ ಹಿಂದೂ ಮಹಾಸಭಾದ ಕಾರ್ಯಕರ್ತರು ಗಾಂಧಿಯನ್ನು ಖಂಡಿಸಿ ಹಾಗೂ ಗೋಡ್ಸೆಯನ್ನು ಹೊಗಳಿ ಘೋಷಣೆಗಳನ್ನು ಕೂಗಿದರು. ‘‘ಮಹಾತ್ಮಾ ನಾಥೂರಾಮ್ ಗೋಡ್ಸೆ ಅಮರ್ ರಹೇ’’ ಎಂದು ಅವರು ಜೈಕಾರ ಹಾಕಿದರು. ದಸರಾ ದಿನದಂದು ರಾವಣನ ಪ್ರತಿಕೃತಿಯನ್ನು ಸುಡುವಂತೆ ಇನ್ನು ಮುಂದೆ ಪ್ರತೀ ವರ್ಷ ತಾವು ಗಾಂಧಿಯ ಹತ್ಯೆಯನ್ನು ಪುನರ್ ಸೃಷ್ಟಿಸುವುದಾಗಿ ಅವರು ಘೋಷಿಸಿದರು. ಇದು ಬಿಜೆಪಿ ನಾಯಕರೊಂದಿಗೆ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಕೇಂದ್ರ ಸಚಿವೆ ಉಮಾ ಭಾರತಿ ಅವರ ಜೊತೆ ಪೂಜಾ ಶಕುನ್ ಪಾಂಡೆ ಇರುವ ಪಾಂಡೆಯ ಫೇಸ್‌ಬುಕ್ ಪೋಸ್ಟ್ ನಲ್ಲಿ ಕಾಣಿಸುತ್ತದೆ. ಅಂದಿನ ಘಟನೆಯಲ್ಲಿ ಭಾಗವಹಿಸಿದ ಕೆಲವರ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದ್ದರು. ನಾಥೂರಾಮ್ ಗೋಡ್ಸೆ ವಿನಾಯಕ ದಾಮೋದರ ಸಾವರ್ಕರ್‌ರನ್ನು ಹೊಗಳಿ ಜೈಕಾರ ಹಾಕುವುದು ಮತ್ತು ಗಾಂಧಿಯನ್ನು ಖಂಡಿಸುವುದು ಅವಮಾನಿಸುವುದು ಹಿಂದೂ ರಾಷ್ಟ್ರೀಯ ವಾದಿಗಳ (ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್) ಅಧಿಕೃತ ಗುರಿಯಾಗಿದೆ, ನೀತಿಯಾಗಿದೆ, ಕಾರ್ಯಕ್ರಮವಾಗಿದೆ. ಕೆಲವು ವರ್ಷಗಳ ಹಿಂದೆ ಓರ್ವ ಬಿಜೆಪಿ ನಾಯಕ ಗೋಪಾಲಕೃಷ್ಣನ್, ‘‘ಗೋಡ್ಸೆ ಗಾಂಧಿಯನ್ನು ಕೊಲ್ಲುವ ಬದಲು ನೆಹರೂ ಅವರನ್ನು ಕೊಲ್ಲಬೇಕಾಗಿತ್ತು. ದೇಶದ ವಿಭಜನೆಗೆ ನೆಹರೂ ಜವಾಬ್ದಾರರು’’ ಎಂದು ಹೇಳಿದ್ದರು. ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ‘‘ಗೋಡ್ಸೆ ಓರ್ವ ದೇಶ ಭಕ್ತ’’ ಎಂದಿದ್ದರು.

ಈ ಹಿಂದೂ ರಾಷ್ಟ್ರೀಯವಾದಿಗಳಲ್ಲಿ ಯಾರೊಬ್ಬರೂ ಕೂಡಾ ದೇಶ ವಿಭಜನೆಯಲ್ಲಿ ಪಾತ್ರ ವಹಿಸಿದ್ದ ಮುಸ್ಲಿಂ ಲೀಗ್ ಅಥವಾ ಜಿನ್ನಾರನ್ನು ಎಂದೂ ಖಂಡಿಸಿಲ್ಲ. ಗೋಡ್ಸೆ ಮತ್ತು ಸಾವರ್ಕರ್‌ರನ್ನು ಬೆಂಬಲಿಸುವ ಮಂದಿ ಕಳೆದ ಕೆಲವು ವರ್ಷಗಳಿಂದ ಹೆಚ್ಚು ಹೆಚ್ಚು ಧ್ವನಿ ಏರಿಸಿ ಮಾತಾಡುತ್ತಿದ್ದಾರೆ.

ಇವರು ಗಾಂಧಿ ಕೊಲೆಗೆ ನೀಡುವ ಸಮರ್ಥನೆ ಹೀಗಿದೆ: ‘‘ಗಾಂಧಿ ಯಿಂದಾಗಿಯೇ ಮುಸ್ಲಿಮರು ಹೆಚ್ಚು ಧೈರ್ಯ ವಹಿಸಿ ತಮಗೆ ಪಾಕಿಸ್ತಾನ ಬೇಕೆಂದು ಹಕ್ಕೊತ್ತಾಯ ಸಲ್ಲಿಸಿದ್ದರು ಮತ್ತು ಗಾಂಧಿಯಿಂದಾಗಿಯೇ ಭಾರತ ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡಬೇಕಾಯಿತು.’’ ಆದರೆ ಗಾಂಧಿಯನ್ನು ಕೊಲ್ಲುವ ಪ್ರಯತ್ನಗಳು 1934ರಿಂದಲೇ ನಡೆದಿದ್ದವು. 1948ರ ಜನವರಿ 30ರಂದು ನಡೆದದ್ದು ಅಂತಹ ಆರನೇ ಪ್ರಯತ್ನ. ಈ ಮೊದಲು ನಡೆದ ಎರಡು ಪ್ರಯತ್ನಗಳಲ್ಲಿ ಸ್ವತಃ ಗೋಡ್ಸೆಯೇ ಭಾಗಿಯಾಗಿದ್ದ. ದೇಶದ ವಿಭಜನೆ ಮತ್ತು ಪಾಕಿಸ್ತಾನಕ್ಕೆ 55 ಕೋಟಿ ರೂ. ಎಂಬುದೆಲ್ಲ ಕೇವಲ ನೆಪವಾಗಿತ್ತು. ಯಾಕೆಂದರೆ ಈ ವಿಷಯಗಳು ಮುನ್ನೆಲೆಗೆ ಬರುವ ಬಹಳಷ್ಟು ಹಿಂದೆಯೇ 1934, 1940 ಮತ್ತು 1944ರಲ್ಲಿ ಗಾಂಧಿ ಹತ್ಯೆಗೆ ಪ್ರಯತ್ನಗಳು ನಡೆದಿದ್ದವು. ಗಾಂಧಿ ಓರ್ವ ಶ್ರೇಷ್ಠ ಹಿಂದೂ ಮತ್ತು ಅವರು ಹಿಂದೂ ರಾಷ್ಟ್ರೀಯವಾದದ ಅತ್ಯಂತ ಪ್ರಬಲ ಎದುರಾಳಿ ಎಂಬುದೇ ಅವರ ಮೇಲೆ ನಡೆದ ದಾಳಿಗಳಿಗೆ ನಿಜವಾದ ಕಾರಣ. ತಮ್ಮ ಹಿಂದೂ ರಾಷ್ಟ್ರದ ಕಾರ್ಯಸೂಚಿಗೆ (ಅಜೆಂಡಾ) ಗಾಂಧಿ ಒಂದು ದೊಡ್ಡ ತಡೆ ಎಂದು ರಾಷ್ಟ್ರೀಯವಾದಿಗಳು ತಿಳಿದಿದ್ದರು.

ಗಾಂಧಿಯನ್ನು ಕೊಲ್ಲುವುದರಲ್ಲಿ ಯಶಸ್ವಿಯಾದ ಗೋಡ್ಸೆ ಆರೆಸ್ಸೆಸ್‌ನ ತರಬೇತಿ ಪಡೆದ ಪೂರ್ವ ಪ್ರಚಾರಕನಾಗಿದ್ದ. ಆತ 1938ರಲ್ಲಿ ಹಿಂದೂ ಮಹಾಸಭಾದ ಪೂನಾ ಶಾಖೆಯನ್ನು ಸೇರಿಕೊಂಡಿದ್ದ ಮತ್ತು ‘ಹಿಂದೂ ರಾಷ್ಟ್ರ’ವೆಂಬ ಉಪಶೀರ್ಷಿಕೆ ಹೊಂದಿದ್ದ ‘ಅಗ್ರಣಿ’ ಎಂಬ ಒಂದು ವರ್ತಮಾನ ಪತ್ರಿಕೆಯನ್ನು ಸಂಪಾದಿಸುತ್ತಿದ್ದ. ಅವನ ಪತ್ರಿಕೆಯಲ್ಲಿ ಹತ್ತು ತಲೆಗಳುಳ್ಳ ರಾವಣನಾಗಿ ಗಾಂಧಿಯನ್ನು ಚಿತ್ರಿಸಿದ ಒಂದು ವ್ಯಂಗ್ಯಚಿತ್ರ ಪ್ರಕಟವಾಗಿತ್ತು. (ಅದರಲ್ಲಿ ಎರಡು ತಲೆಗಳು ಸರ್ದಾರ್ ಪಟೇಲ್ ಮತ್ತು ನೇತಾಜಿ ಬೋಸ್‌ರದ್ದು) ಆ ತಲೆಗಳನ್ನು ಕಡಿಯುವವನಾಗಿ ಸಾವರ್ಕರ್‌ರ ಚಿತ್ರವಿತ್ತು. ಗಾಂಧಿಯ ಕೊಲೆಯ ಬಳಿಕ ಅಂದಿನ ಗೃಹ ಸಚಿವ ಸರ್ದಾರ್ ಪಟೇಲ್ ಆರೆಸ್ಸೆಸ್‌ನ್ನು ನಿಷೇಧಿಸಿದ್ದರು. ಪಟೇಲರು ಹಿಂದೂ ಮಹಾಸಭಾದ ಶ್ಯಾಮ ಪ್ರಸಾದ್ ಮುಖರ್ಜಿಯವರಿಗೆ ಬರೆದ ಪತ್ರದಲ್ಲಿ, ‘‘ಹಿಂದೂ ಮಹಾಸಭಾ ಮತ್ತು ಆರೆಸ್ಸೆಸ್ ಹರಡಿದ ದ್ವೇಷದಿಂದಾಗಿಯೇ ದೇಶವು ರಾಷ್ಟ್ರಪಿತ ಗಾಂಧಿಯನ್ನು ಕಳೆದುಕೊಳ್ಳಬೇಕಾಯಿತು’’ ಎಂದು ಬರೆದಿದ್ದರು. ಗಾಂಧಿ ಕೊಲೆಯ ಮುಖ್ಯ ಆಪಾದಿತ ಗೋಡ್ಸೆಗೆ ಸಹಕರಿಸಿದ ಹಲವು ಸಹ ಅಪರಾಧಿಗಳಿದ್ದರು. ಅವರಲ್ಲೊಬ್ಬರು ಸಾವರ್ಕರ್. ಅವರ ಅಪರಾಧವನ್ನು ಸಾಬೀತು ಪಡಿಸುವ ಪುರಾವೆಯ ಕೊರತೆಯಿಂದಾಗಿ ಅವರನ್ನು ಬಿಡುಗಡೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಜೀವನಲಾಲ್ ಕಪೂರ್ ಆಯೋಗವು ‘‘ಎಲ್ಲ ವಿಷಯಗಳನ್ನು ಗಮನಿಸುವಾಗ ಇದು ಸಾವರ್ಕರ್ ಮತ್ತು ಅವರ ತಂಡ ಕೊಲೆ ಮಾಡಲು ನಡೆಸಿರುವ ಸಂಚು ಎಂಬುದು ಸ್ಪಷ್ಟವಾಗುತ್ತದೆ’’ ಎಂದಿತ್ತು.

ಇನ್ನು ಗೋಡ್ಸೆಯ ಆರೆಸ್ಸೆಸ್‌ನ ಸದಸ್ಯತ್ವದ ಬಗ್ಗೆ ಹೇಳುವುದಾದರೆ, ಆಗ ಆರೆಸ್ಸೆಸ್‌ಗೆ ಒಂದು ಲಿಖಿತ ಸಂವಿಧಾನ ಮತ್ತು ಸದಸ್ಯತ್ವದ ದಾಖಲೆ (ರಿಜಿಸ್ಟರ್) ಇರಲಿಲ್ಲ. ಆರೆಸ್ಸೆಸ್ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸುವಾಗ, ಅದು ಇನ್ನು ಮುಂದೆ ಲಿಖಿತ ಸಂವಿಧಾನ ಹೊಂದಿರಬೇಕು ಎಂಬುದು ಇತರ ಷರತ್ತುಗಳಲ್ಲಿ ಒಂದು ಷರತ್ತು ಆಗಿತ್ತು. ನ್ಯಾಯಾಲಯದಲ್ಲಿ ಗೋಡ್ಸೆ ತಾನು ಆರೆಸ್ಸೆಸ್ ಸದಸ್ಯನೆಂಬುದು ಅಲ್ಲಗಳೆದ. ಇದಕ್ಕೆ ವಿರುದ್ಧವಾಗಿ ಗೋಡ್ಸೆ ಸಹೋದರ ಮತ್ತು ಸಹ ಅಪರಾಧಿ ಗೋಪಾಲ್ ಹೀಗೆ ಬರೆದಿದ್ದಾನೆ: ‘‘ತಾಂತ್ರಿಕವಾಗಿ ಮತ್ತು ಸೈದ್ಧಾಂತಿಕವಾಗಿ ಆತ (ನಾಥುರಾಮ್) (ಆರೆಸ್ಸೆಸ್‌ನ) ಓರ್ವ ಸದಸ್ಯನಾಗಿದ್ದ. ಆದರೆ ತರುವಾಯ ಅದಕ್ಕಾಗಿ ಕೆಲಸ ಮಾಡುವುದನ್ನು ಆತ ನಿಲ್ಲಿಸಿದ್ದ. ಆರೆಸ್ಸೆಸ್ ಕಾರ್ಯಕರ್ತರನ್ನು ರಕ್ಷಿಸುವುದಕ್ಕಾಗಿ ಆತ ನ್ಯಾಯಾಲಯದಲ್ಲಿ ತಾನು ಆರೆಸ್ಸೆಸ್ ತ್ಯಜಿಸಿದ್ದೆ ಎಂದು ಹೇಳಿಕೆ ನೀಡಿದ. ಆರೆಸ್ಸೆಸ್‌ಗೂ ತನಗೂ ಸಂಬಂಧವಿಲ್ಲವೆಂದು ಹೇಳುವುದರಿಂದ ಅವರಿಗೆ (ಆರೆಸ್ಸೆಸ್) ಲಾಭವಾಗುವುದರಿಂದ ಆತ ಸಂತೋಷದಿಂದ ಹಾಗೆ ಆರೆಸ್ಸೆಸ್‌ನಿಂದ ದೂರ ಉಳಿದ’’

ಆರೆಸ್ಸೆಸ್‌ನಲ್ಲಿ ಸಾವರ್ಕರ್‌ಗೆ ರಾಷ್ಟ್ರೀಯತೆಗಾಗಿ ಉನ್ನತ ಸ್ಥಾನ ನೀಡಲಾಗಿದೆ. ಆದರೆ ಅಂಡಮಾನ್ ಜೈಲಿನಿಂದ ಬಿಡುಗಡೆ ಹೊಂದಲು ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಯಾಚನೆ ಪತ್ರ ಬರೆದುಕೊಟ್ಟಿದ್ದರು. ಬಳಿಕ ಅವರು ಎರಡು ರಾಷ್ಟ್ರ (ಹಿಂದೂ ಮತ್ತು ಮುಸ್ಲಿಂ) ಸಿದ್ಧಾಂತವನ್ನು ಪ್ರತಿಪಾದಿಸಿದರು. ಈಗ ಗಾಂಧಿ ಕೊಲೆಯ ಮರುಸೃಷ್ಟಿ ಕಳೆದ ಕೆಲವು ವರ್ಷಗಳಲ್ಲಿ ಆರೆಸ್ಸೆಸ್-ಬಿಜೆಪಿಯ ಪ್ರಾಬಲ್ಯದ ಸೂಚನೆಯಾಗಿದೆ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News