ರಫೇಲ್ ಒಪ್ಪಂದ ಯುಪಿಎ ಅವಧಿಗಿಂತ 2.8 ಶೇ. ಅಗ್ಗ: ಸಿಎಜಿ ವರದಿ

Update: 2019-02-13 14:18 GMT

ಹೊಸದಿಲ್ಲಿ,ಫೆ.13: ರಫೇಲ್ ಒಪ್ಪಂದ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಸರಕಾರದ ನಡುವೆ ನಡೆಯುತ್ತಿರುವ ತಿಕ್ಕಾಟದ ನಡುವೆಯೇ ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಮಹಾಲೇಖಪಾಲ(ಸಿಎಜಿ)ರ ವರದಿಯು ಫ್ರಾನ್ಸ್‌ನಿಂದ ರಫೇಲ್ ಯುದ್ಧವಿಮಾನಗಳ ಖರೀದಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವು ಮಾಡಿಕೊಂಡಿರುವ ಒಪ್ಪಂದವು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಶೇ.2.8ರಷ್ಟು ಅಗ್ಗವಾಗಿದೆ ಎಂದು ಹೇಳಿದೆ.

ಬೆಲೆ ವಿವರಗಳನ್ನು ಬಹಿರಂಗಗೊಳಿಸುವಂತಿಲ್ಲ ಎಂಬ ರಕ್ಷಣಾ ಸಚಿವಾಲಯದ ಪ್ರತಿಪಾದನೆಯ ಹಿನ್ನೆಲೆಯಲ್ಲಿ ವರದಿಯು ವಿವಾದದ ಕೇಂದ್ರಬಿಂದುವಾಗಿರುವ ಯುದ್ಧವಿಮಾನಗಳ ಖರೀದಿ ಬೆಲೆಗಳನ್ನು ಒಳಗೊಂಡಿಲ್ಲ. ಬೆಲೆ ವಿವರಗಳಿದ್ದ ವರದಿಯ ಭಾಗವನ್ನು ಪರಿಷ್ಕರಿಸಲಾಗಿದ್ದು,ಇದು ಮತ್ತೊಮ್ಮೆ ಪ್ರತಿಪಕ್ಷ ದಾಳಿಗಳನ್ನು ಪ್ರಚೋದಿಸಬಹುದು.

2016ರಲ್ಲಿ 36 ರಫೇಲ್ ಯುದ್ಧವಿಮಾನಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದ ಸಂದರ್ಭದಲ್ಲಿ ಸಿಎಜಿ ರಾಜೀವ ಮಹರ್ಷಿ ಅವರು ವಿತ್ತ ಕಾರ್ಯದರ್ಶಿಯಾಗಿದ್ದರಿಂದ ಈ ವರದಿಯು ತಾರತಮ್ಯದಿಂದ ಕೂಡಿದೆ ಎಂದಿರುವ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಅದನ್ನು ತಿರಸ್ಕರಿಸಿವೆ. ರಫೇಲ್ ಒಪ್ಪಂದದಲ್ಲಿಯ ಅಕ್ರಮಗಳಲ್ಲಿ ಮಹರ್ಷಿ ಅವರು ಶಾಮೀಲಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

ಎರಡೂ ಒಪ್ಪಂದಗಳಲ್ಲಿ ಯುದ್ಧವಿಮಾನಗಳ ಮೂಲಬೆಲೆಗಳು ಒಂದೇ ಆಗಿವೆ ಎಂದಿರುವ ವರದಿಯು,ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 126 ವಿಮಾನಗಳ ಖರೀದಿಗಾಗಿ ಮಾಡಿಕೊಂಡಿದ್ದ ಒಪ್ಪಂದಕ್ಕೆ ಹೋಲಿಸಿದರೆ 36 ವಿಮಾನಗಳ ಖರೀದಿಗಾಗಿ ಮಾಡಿಕೊಳ್ಳಲಾಗಿರುವ ನೂತನ ಒಪ್ಪಂದದಲ್ಲಿ ಭಾರತಕ್ಕೆ ಅಗತ್ಯವಿರುವ ಮಾರ್ಪಾಡುಗಳನ್ನು ಮಾಡಿಕೊಂಡ ಬಳಿಕವೂ ಶೇ.17.08ರಷ್ಟು ಹಣವನ್ನು ಉಳಿಸಲು ಸಾಧ್ಯವಾಗಿದೆ. ರಫೇಲ್ ಯುದ್ಧವಿಮಾನವನ್ನು ದೇಶದ ರಕ್ಷಣಾ ಅಗತ್ಯಗಳಿಗೆ ಹೆಚ್ಚು ಸೂಕ್ತವಾಗಿಸಲು ಅದರಲ್ಲಿ 13 ನಿರ್ದಿಷ್ಟ ಬದಲಾವಣೆಗಳನ್ನು ಭಾರತವು ಬಯಸಿತ್ತು. ಮೇಲ್ದರ್ಜೆಗೇರಿಸಲಾಗಿರುವ ಈ ವಿಮಾನಗಳ ಬೆಲೆಗಳು ಈಗ ಅಗ್ಗವಾಗಿವೆ ಎಂದು ಹೇಳಿದೆ.

ಹಿಂದಿನ ಒಪ್ಪಂದಕ್ಕೆ ಹೋಲಿಸಿದರೆ ಈಗಿನ ಒಪ್ಪಂದವು ತಾಂತ್ರಿಕ ಬೆಂಬಲ ಪ್ಯಾಕೇಜ್ ಮತ್ತು ಸಾಧನೆ ಆಧರಿತ ಲಾಜಿಸ್ಟಿಕ್ಸ್‌ಗೆ ಸಂಬಂಧಿಸಿದಂತೆ ಶೇ.6.54ರಷ್ಟು ದುಬಾರಿಯಾಗಿದೆ ಎಂದೂ ವರದಿಯು ತಿಳಿಸಿದೆ.

126 ಯುದ್ಧವಿಮಾನಗಳ ಖರೀದಿಗಾಗಿ ಹಿಂದಿನ ಸರಕಾರವು ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸುವಂತೆ ರಕ್ಷಣಾ ಸಚಿವಾಲಯದ ತಂಡವು ಮಾರ್ಚ್,2015ರಲ್ಲಿ ಮಾಡಿದ್ದ ಶಿಫಾರಸನ್ನು ಉಲ್ಲೇಖಿಸಿರುವ ಸಿಎಜಿ ವರದಿಯು, ಡಸಾಲ್ಟ್ ಏವಿಯೇಷನ್ ಅತ್ಯಂತ ಕಡಿಮೆ ಬಿಡ್‌ಗಳನ್ನು ಸಲ್ಲಿಸಿದ್ದ ಕಂಪನಿಯಾಗಿರಲಿಲ್ಲ ಮತ್ತು ಇನ್ನೋರ್ವ ಬಿಡ್‌ದಾರ ಯುರೋಪಿಯನ್ ಏರೋನಾಟಿಕ್ ಡಿಫೆನ್ಸ್ ಆ್ಯಂಡ್ ಸ್ಪೇಸ್ ಕಂಪನಿಯು ಟೆಂಡರ್ ಅಗತ್ಯಗಳನ್ನು ಪೂರ್ಣವಾಗಿ ಪಾಲಿಸಿರಲಿಲ್ಲ ಎಂದು ತಂಡವು ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂದಿದೆ.

ಭಾರತೀಯ ವಾಯುಪಡೆಯು ತನ್ನ ಗುಣಾತ್ಮಕ ಅಗತ್ಯಗಳನ್ನು ಸೂಕ್ತವಾಗಿ ವ್ಯಾಖ್ಯಾನಿಸಿರಲಿಲ್ಲ, ಹೀಗಾಗಿ ಯಾವುದೇ ಬಿಡ್‌ ದಾರರಿಗೆ ಮಾನದಂಡಗಳನ್ನು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿರಲಿಲ್ಲ ಎಂದೂ ವರದಿಯು ಬೆಟ್ಟು ಮಾಡಿದೆ. ಮೊದಲ 18 ಯುದ್ಧವಿಮಾನಗಳ ಪೂರೈಕೆಗಾಗಿ ಯುಪಿಎ ಸರಕಾರವು ನಿಗದಿಗೊಳಿಸಿದ್ದ ಅವಧಿಗೆ ಹೋಲಿಸಿದರೆ ಎನ್‌ಡಿಎ ಸರಕಾರದ ಗಡುವು ಐದು ತಿಂಗಳು ಕಡಿಮೆಯಿದೆ ಎಂದೂ ವರದಿಯು ಹೇಳಿದೆ.

‘ಮಹಾ ಝೂಟ್‌ಬಂಧನ್’ನ ಸುಳ್ಳುಗಳು ಬಯಲು:ಜೇಟ್ಲಿ

ಸರಣಿ ಟ್ವೀಟ್‌ಗಳಲ್ಲಿ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು,ಸಿಎಜಿ ವರದಿಯು ‘ಮಹಾ ಝೂಟ್‌ಬಂಧನ್’ನ ಸುಳ್ಳುಗಳನ್ನು ಬಯಲುಗೊಳಿಸಿದೆ ಎಂದು ಹೇಳಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ತಪ್ಪು,ಸಿಎಜಿ ತಪ್ಪು ಮತ್ತು ಒಂದು ಕುಟುಂಬವು ಮಾತ್ರ ಸರಿ ಎಂದು ಹೇಳುವಂತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಜೇಟ್ಲಿ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News