ಆರ್‌ ಕಾಂ ವಿರುದ್ಧ ಎರಿಕ್ಸ್‌ನ್ ನ ನ್ಯಾಯಾಂಗ ನಿಂದನೆ ಅರ್ಜಿ ಆದೇಶ ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Update: 2019-02-13 15:44 GMT

ಹೊಸದಿಲ್ಲಿ, ಫೆ. 13: ತನ್ನ 550 ಕೋಟಿ ರೂಪಾಯಿ ಬಾಕಿಯನ್ನು ಪಾವತಿ ಮಾಡದೇ ಇರುವ ರಿಲಾಯನ್ಸ್ ಕಮ್ಯೂನಿಕೇಶನ್ ಲಿಮಿಟೆಡ್‌ ಅಧ್ಯಕ್ಷ ಅನಿಲ್ ಅಂಬಾನಿ ಹಾಗೂ ಇತರ ಇಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ಕೈಗೊಳ್ಳುವಂತೆ ಕೋರಿ ಎರಿಕ್ಸನ್ ಇಂಡಿಯಾ ಸಲ್ಲಿಸಿದ್ದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಬುಧವಾರ ಕಾಯ್ದಿರಿಸಿದೆ.

ಈ ಪ್ರಕರಣದ ತೀರ್ಪು ಕಾಯ್ದಿರಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಹಾಗೂ ವಿನೀತ್ ಸರಣ್ ಅವರನ್ನು ಒಳಗೊಂಡ ಪೀಠ ಹೇಳಿದೆ. ನ್ಯಾಯಾಲಯದ ವಿಚಾರಣೆ ವೇಳೆ ಎರಿಕ್ಸನ್ ಇಂಡಿಯಾ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ದುಶ್ಯಂತ್ ದವೆ, ಸುಪ್ರೀಂ ಕೋರ್ಟ್‌ನ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಲಾಗಿದೆ ಹಾಗೂ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. ರಿಲಾಯನ್ಸ್ ಕಮ್ಯೂನಿಕೇಶನ್ ಲಿಮಿಟೆಡ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಪ್ರತಿ ವಾದ ಮುಂಡಿಸಿದರು.

ಸುಪ್ರೀಂ ಕೋರ್ಟ್‌ನ ಯಾವುದೇ ಆದೇಶ ಉಲ್ಲಂಘಿಸದೇ ಇರುವುದರಿಂದ ನ್ಯಾಯಾಂಗ ನಿಂದನೆಯಾಗಿಲ್ಲ ಎಂದು ಅವರು ಹೇಳಿದರು. ವಿಚಾರಣೆ ಸಂದರ್ಭ ಅಂಬಾನಿ ರಿಲಾಯನ್ಸ್ ಟೆಲಿಕಾಂ ಲಿಮಿಟೆಡ್‌ ಅಧ್ಯಕ್ಷ ಸತೀಶ್ ಸೇಥ್ ಹಾಗೂ ರಿಲಾಯನ್ಸ್ ಇನ್‌ಫ್ರಾಟೆಲ್ ಲಿಮಿಟೆಡ್‌ನ ಅಧ್ಯಕ್ಷ ಛಾಯಾ ವಿರಾನಿ ಉಪಸ್ಥಿತರಿದ್ದರು. 2018 ಡಿಸೆಂಬರ್ 15ರ ಒಳಗೆ ಬಾಕಿ ಪಾವತಿಸುವಂತೆ ಹಾಗೂ ವಿಳಂಬವಾಗಿರುವ ಪಾವತಿಗೆ ವಾರ್ಷಿಕ ಶೇ. 12 ಬಡ್ಡಿ ನೀಡುವಂತೆ ಸುಪ್ರೀಂ ಕೋರ್ಟ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಿಲಾಯನ್ಸ್ ಕಮ್ಯೂನಿಕೇಶನ್ ಲಿಮಿಟೆಡ್‌ಗೆ ನಿರ್ದೇಶನ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News