ಸದನದಲ್ಲಿ ಪ್ರಧಾನಿ ಮೋದಿ ಅಂತಿಮ ಭಾಷಣ: ರಾಹುಲ್ ವಿರುದ್ಧ ಟೀಕಾಪ್ರಹಾರ

Update: 2019-02-13 15:49 GMT

ಹೊಸದಿಲ್ಲಿ,ಫೆ.13: 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಬುಧವಾರ ಲೋಕಸಭೆಯಲ್ಲಿ ತನ್ನ ಅಂತಿಮ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು,ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕಟುವಾಗಿ ಟೀಕಿಸಿದರು. ಸಂಸತ್ತಿನ ಬಜೆಟ್ ಅಧಿವೇಶನ ಇಂದು ಅಂತ್ಯಗೊಂಡಿದ್ದು,ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ತನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿದರೆ ‘ಭೂಕಂಪ’ ಸಂಭವಿಸುತ್ತದೆ ಎಂಬ ರಾಹುಲ್ ಅವರ 2016ರ ಹೇಳಿಕೆಯನ್ನು ವ್ಯಂಗ್ಯವಾಡಿದ ಮೋದಿ,ಕಳೆದ ಐದು ವರ್ಷಗಳಲ್ಲಿ ಭೂಕಂಪ ಸಂಭವಿಸಿಲ್ಲ ಎಂದು ಹೇಳಿದರು. ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಪ್ರಸ್ತಾಪಿಸಿದ ಅವರು,ದೊಡ್ಡ ವ್ಯಕ್ತಿಗಳು ವಿಮಾನವನ್ನು ಹಾರಿಸಲು ಪ್ರಯತ್ನಿಸಿದ್ದರು. ಆದರೆ ಪ್ರಜಾಪ್ರಭುತ್ವದ ಶಕ್ತಿ ಹೇಗಿದೆಯೆಂದರೆ ಈ ಸರಕಾರವನ್ನು ಪದಚ್ಯುತಗೊಳಿಸಲು ಯಾವುದೇ ವಿಮಾನಕ್ಕೆ ಸಾಧ್ಯವಾಗಲಿಲ್ಲ ಎಂದು ಛೇಡಿಸಿದರು.

ಸಂಸತ್ತಿನಲ್ಲಿ ತನ್ನನ್ನು ಅಪ್ಪಿಕೊಂಡಿದ್ದಕ್ಕಾಗಿಯೂ ರಾಹುಲ್ ವಿರುದ್ಧ ಮೋದಿ ಟೀಕಾಪ್ರಹಾರ ನಡೆಸಿದರು. ಕಳೆದ ವರ್ಷದ ಜುಲೈನಲ್ಲಿ ತನ್ನ ಉಗ್ರ ಭಾಷಣಕ್ಕೆ ಆಡಳಿತ ಪಕ್ಷವು ಅಡ್ಡಿಪಡಿಸುತ್ತಿದ್ದಾಗ ಬಿಜೆಪಿಯ ಬಗ್ಗೆ ತನಗೆ ಯಾವುದೇ ದ್ವೇಷವಿಲ್ಲ ಎಂದು ಘೋಷಿಸಿದ್ದ ರಾಹುಲ್ ಮೋದಿಯವರಿದ್ದಲ್ಲಿಗೆ ತೆರಳಿ ಅವರು ತನ್ನ ಆಸನದಲ್ಲಿ ಕುಳಿತಿದ್ದಂತೆಯೇ ಅವರನ್ನು ಅಪ್ಪಿಕೊಂಡಿದ್ದರು. ದಿಗ್ಭ್ರಮೆಗೊಂಡಿದ್ದ ಮೋದಿ ಬಳಿಕ ಚೇತರಿಸಿಕೊಂಡು ರಾಹುಲ್‌ಗೆ ಹಸ್ತಲಾಘವ ನೀಡಿದ್ದರು. ತನ್ನ ಆಸನಕ್ಕೆ ಮರಳಿದ್ದ ರಾಹುಲ್ ತನ್ನ ಪಕ್ಷ ಸಹೋದ್ಯೋಗಿಯತ್ತ ಮುಗುಳ್ನಗು ಬೀರುತ್ತ ಕಣ್ಣು ಮಿಟುಕಿಸಿದ್ದರು.

ಮೊದಲ ಬಾರಿಗೆ ಲೋಕಸಭೆಯ ಸದಸ್ಯನಾಗಿ ಈ ಅನುಭವ ತನಗೆ ಹೊಸದಾಗಿತ್ತು ಎಂದು ಹೇಳಿದ ಮೋದಿ,ಅಪ್ಪಿಕೊಳ್ಳುವುದಕ್ಕೂ ಬಲವಂತದಿಂದ ಅಪ್ಪಿಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದರು.

ಬಹುಮತದ ಸರಕಾರಕ್ಕೆ ಒತ್ತು ನೀಡಿದ ಅವರು,ತನ್ನ ಸರಕಾರವು ಬಹುಮತವನ್ನು ಹೊಂದಿದ್ದರಿಂದ ಜಾಗತಿಕವಾಗಿ ಭಾರತದ ವರ್ಚಸ್ಸು ಉತ್ತಮಗೊಂಡಿತ್ತು. ಸುದೀರ್ಘ ಕಾಲ ಮತದಾರರ ಅಸ್ಪಷ್ಟ ತೀರ್ಪುಗಳಿಂದಾಗಿ ಭಾರತವು ಜಾಗತಿಕವಾಗಿ ಹಿನ್ನಡೆ ಅನುಭವಿಸಿತ್ತು. ಬಹುಮತದ ಸರಕಾರದಿಂದಾಗಿ ಇಡೀ ಜಗತ್ತು ಅದನ್ನೀಗ ಗಂಭೀರವಾಗಿ ಪರಿಗಣಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News