ಮಹಾಘಟಬಂಧನ್ 2.0 ರ್ಯಾಲಿಯಲ್ಲಿ ವಿಪಕ್ಷಗಳ ಭಿನ್ನಾಭಿಪ್ರಾಯ ಬಹಿರಂಗ

Update: 2019-02-13 16:28 GMT

ಹೊಸದಿಲ್ಲಿ, ಫೆ.13: ವಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಲು ಬುಧವಾರ ಹೊಸದಿಲ್ಲಿಯ ಜಂತರ್‌ ಮಂತರ್ ‌ನಲ್ಲಿ ಆಯೋಜಿಸಲಾಗಿದ್ದ ‘ಮಹಾಘಟಬಂಧನ '2.0' ರ್ಯಾಲಿಯು ವಿಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ಪ್ರದರ್ಶಿಸುವ ವೇದಿಕೆಯಾಗಿ ಮಾರ್ಪಟ್ಟಿತು.

ಈ ಅಭಿಯಾನದ ಹಿಂದಿನ ಪ್ರಮುಖ ಶಕ್ತಿಯಾಗಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಳಿಗ್ಗೆ ಗೈರುಹಾಜರಾಗಿದ್ದು ಸಂಜೆ ಎಡಪಕ್ಷಗಳ ಮುಖಂಡರು ಅಲ್ಲಿಂದ ತೆರಳಿದ ಬಳಿಕವಷ್ಟೇ ರ್ಯಾಲಿಯಲ್ಲಿ ಕಾಣಿಸಿಕೊಂಡರು. ರ್ಯಾಲಿಯ ಆತಿಥೇಯತ್ವ ವಹಿಸಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು ಅವರ ಅಕ್ಕಪಕ್ಕ ಎಡಪಕ್ಷಗಳ ಮುಖಂಡರಾದ ಸೀತಾರಾಮ ಯೆಚೂರಿ ಮತ್ತು ಎ ರಾಜಾ ಆಸೀನರಾಗಿದ್ದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೆಳಿಗ್ಗೆ ರ್ಯಾಲಿಯಲ್ಲಿ ಪಾಲ್ಗೊಂಡರು.

ಟಿಎಂಸಿ ಮತ್ತು ಕಾಂಗ್ರೆಸ್ ಮಧ್ಯೆ ರಾಜ್ಯದಲ್ಲಿ ಸಂಬಂಧ ಹದಗೆಟ್ಟಿದೆ. ಜನವರಿ 19ರಂದು ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ರ್ಯಾಲಿಗೆ ಕಾಂಗ್ರೆಸ್ ಪಕ್ಷವನ್ನು ಆಹ್ವಾನಿಸಿರಲಿಲ್ಲ. ಆದರೂ ಕಾಂಗ್ರೆಸ್ ತನ್ನ ಪ್ರತಿನಿಧಿಯಾಗಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಭಿಷೇಕ್ ಸಿಂಗ್ವಿಯವರನ್ನು ಕಳಿಸಿತ್ತು. ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಪ.ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಟಿಎಂಸಿ ಪಕ್ಷವನ್ನು ಟೀಕಿಸಿದ್ದರಿಂದ ಆಕ್ರೋಶಗೊಂಡಿದ್ದ ಮಮತಾ ಬ್ಯಾನರ್ಜಿ, ಬುಧವಾರ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ತನಗೆ ಇದಿರಾದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರಲ್ಲಿ ‘ಇದನ್ನು ನೆನಪಲ್ಲಿ ಇಟ್ಟುಕೊಳ್ಳುತ್ತೇನೆ ’ ಎಂದು ಹೇಳಿ ತಮ್ಮ ಸಿಟ್ಟನ್ನು ಪ್ರದರ್ಶಿಸಿದರು.

ಎಡಪಕ್ಷಗಳು ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ನಡುವೆಯೂ ವೈಮನಸ್ಸಿದೆ. ಕೋಲ್ಕತಾ ಪೊಲೀಸರು ಹಾಗೂ ಸಿಬಿಐ ಪ್ರಕರಣದಲ್ಲಿ ಕೇಂದ್ರ ಸರಕಾರದ ವಿರುದ್ಧ ಮುನಿಸಿಕೊಂಡಿದ್ದ ಮಮತಾ ಕೋಲ್ಕತಾದಲ್ಲಿ ಧರಣಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಎಡಪಕ್ಷಗಳ ಮುಖಂಡ ಯೆಚೂರಿ ಎರಡೂ ಕಡೆಯವರ ನಿಲುವನ್ನು ಟೀಕಿಸಿದ್ದರು. 

ಮೋದಿ ಬಾಬುವಿನಿಂದ ದೇಶ ರಕ್ಷಿಸಲು ಗಾಂಧಿ ಬಾಪುಗೆ ಮೊರೆ: ಮಮತಾ

 ಮಂಗಳವಾರ ರಾತ್ರಿಯಿಂದ ದಿಲ್ಲಿಯಲ್ಲಿ ಬೀಡುಬಿಟ್ಟಿರುವ ಮಮತಾ ಬ್ಯಾನರ್ಜಿ ಬುಧವಾರ ಬೆಳಿಗ್ಗೆ ಸಂಸದ್ ಭವನದ ಆವರಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯೆದುರು ಪ್ರಾರ್ಥನೆ ನಡೆಸಿದರು. ಹಾಲಿ ಸಂಸತ್ತಿನ ಕಡೆಯ ದಿನ ಇದಾಗಿದೆ. ಬಿಜೆಪಿಯನ್ನು ನಿವಾರಿಸಿ ಮೋದಿ ಬಾಬುವಿನಿಂದ ದೇಶವನ್ನು ರಕ್ಷಿಸಬೇಕೆಂದು ಬಾಪುವನ್ನು ಪ್ರಾರ್ಥಿಸಿದ್ದೇನೆ ಎಂದು ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News