ಪರೀಕ್ಷಾ ಪರ್ವ: ನಿಮಗೆ ನೀವೇ ರೋಲ್ ಮಾಡೆಲ್

Update: 2019-02-13 18:32 GMT

ವಿದ್ಯಾರ್ಥಿಗಳು ಕನಸಿನ ಲೋಕದಲ್ಲಿ ವಿಹರಿಸುವುದು ಸಹಜ. ಕಾಲ್ಪನಿಕ ಲೋಕದಲ್ಲಿ ಮಹಲ್‌ಗಳನ್ನು ಕಟ್ಟುವುದು ಸರ್ವೇ ಸಾಮಾನ್ಯವಾದ ಸಂಗತಿ. ಆದರೆ ಅಂತಹ ಕನಸುಗಳು ನನಸಾಗುವುದು ವಿರಳ. ‘‘ನಿದ್ರೆಯಲ್ಲಿ ಬೀಳುವುದು ನಿಜವಾದ ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದುವೇ ನಿಜವಾದ ಕನಸು’’-ಇದು ಎ.ಪಿ.ಜೆ ಅಬ್ದುಲ್ ಕಲಾಂರವರ ಪ್ರಸಿದ್ಧ ಮಾತು. ಯಾವುದೋ ಮೇರು ವ್ಯಕ್ತಿಗಳನ್ನು, ಜನಪ್ರಿಯ ಜನರನ್ನು ನಿಮ್ಮ ರೋಲ್ ಮಾಡೆಲ್‌ಗಳನ್ನಾಗಿ ಮಾಡಿಕೊಳ್ಳುವ ಬದಲು ನಿಮ್ಮನ್ನು ನೀವೇ ಏಕೆ ರೋಲ್ ಮಾಡೆಲ್‌ಗಳನ್ನಾಗಿ ಮಾಡಿಕೊಳ್ಳಬಾರದು? ನಿಮ್ಮ ತಂದೆ-ತಾಯಿಯೇ ಏಕೆ ನಿಮಗೆ ಆದರ್ಶರಾಗಬಾರದು? ಪ್ರಸಿದ್ಧ ಗಾಯಕ ನೌಷಾದ್ ಬಳಿ ಬಂದು ಅಭಿಮಾನಿಗಳು ನಾನು ಕೂಡಾ ನಿಮ್ಮಂತಾಗಬೇಕು ಎಂದು ಹೇಳುತ್ತಿದ್ದರು. ಅದಕ್ಕೆ ನೌಷಾದ್, ‘‘ನೀವು ನನ್ನಂತಾಗಬೇಡಿ, ನೀವು ನೀವೇ ಆಗಿ ಅಥವಾ ನನ್ನನ್ನೂ ಮೀರಿಸುವ ಗಾಯಕರಾಗಿ ನನ್ನಂತಹವರಾದರೆ ನೀವು ನನ್ನ ನಕಲಿಗಳಾಗಿ ಬಿಡುತ್ತೀರಿ’’ ಎಂದು ಸಲಹೆ ನೀಡುತ್ತಿದ್ದರು.
ವಿದ್ಯಾರ್ಥಿಗಳೇ, ನಿಮಗೆ ನಿಮ್ಮ ಬಗ್ಗೆ ಅಭಿಮಾನವು, ಹೆಮ್ಮೆಯೂ ಇರಬೇಕು. ನಿಮ್ಮಲ್ಲಿನ ಸಾಮರ್ಥ್ಯದ ಬಗ್ಗೆ ಅರಿವು, ನಂಬಿಕೆ ಇರಬೇಕು. ನಿಮ್ಮಲ್ಲಿ ಅಪಾರವಾದ ಶಕ್ತಿಯಿದೆ. ಸಾಧಿಸುವ ಹಂಬಲವಿದ್ದರೆ ನಿಮಗೆ ದಾರಿ ಒಂದಲ್ಲ ಸಾವಿರವಿದೆ. ಆ ದಾರಿಯಲ್ಲಿ ಪರೀಕ್ಷೆಯೂ ಕೂಡಾ ಒಂದು ಮೈಲುಗಲ್ಲು. ಈ ಮೈಲುಗಲ್ಲನ್ನು ದಾಟುವುದು ಅನಿವಾರ್ಯವೂ ಸಾಧ್ಯವಾದುದೂ ಆಗಿದೆ.
ನಿಮ್ಮ ಈ ವಯಸ್ಸಿನಲ್ಲಿ ಅಪಾರವಾದುದನ್ನು ನೆನಪಿನಲ್ಲಿಡಬಹುದು. ಬಹುಮುಖವಾಗಿ ಚಿಂತಿಸಬಹುದು. ಸುಂದರವಾಗಿ ಬರೆಯಬಹುದು. ಆಕರ್ಷಕವಾಗಿ ಚಿತ್ರ ಬಿಡಿಸಬಹುದು. ಇವೆಲ್ಲವೂ ನಿಮ್ಮಲ್ಲಿರುವ ಅಗಾಧವಾದ ಶಕ್ತಿಯಾಗಿದೆ. ನೀವು ಕ್ರಮಬದ್ಧವಾಗಿ ಕಲಿತರೆ, ಬರೆದರೆ ನಿಮ್ಮ ಈಗಿನ ಅಂಕಗಳಿಗಿಂತಲೂ ಮಿಗಿಲಾದ ಅಂಕ ಪಡೆಯಬಹುದು. ಅದಕ್ಕಾಗಿ ನೀವು ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ನಿಮ್ಮ ಸ್ವಂತಿಕೆಯನ್ನು ಬೇರೆಯವರಿಗೆ ಒತ್ತೆ ಇಡದೆ ನೀವೇ ನಿಮಗಾಗಿ ಬೆಳೆಸಿಕೊಳ್ಳಬೇಕು. ಆಗಲೇ ನಿಮಗೆ ನಿಮ್ಮ ಸಾಮರ್ಥ್ಯದ ಬಗ್ಗೆ ಅರಿವಾಗುವುದು.

Writer - ಎ. ಆರ್. ಅನಂತಾಡಿ

contributor

Editor - ಎ. ಆರ್. ಅನಂತಾಡಿ

contributor

Similar News