ಪುಲ್ವಾಮಾ ದಾಳಿ: 5 ದಿನದ ಹಿಂದೆಯಷ್ಟೇ ಕರ್ತವ್ಯಕ್ಕೆ ಮರಳಿದ್ದ ಕೇರಳದ ಯೋಧ ಹುತಾತ್ಮ

Update: 2019-02-15 14:32 GMT

ತಿರುವನಂತಪುರಂ, ಫೆ.15: ಜಮ್ಮು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿರುವ ಕೇರಳದ ಯೋಧ ವಸಂತ ಕುಮಾರ್ ರಜೆ ಮುಗಿಸಿ ಫೆಬ್ರವರಿ 9ರಂದು ಕರ್ತವ್ಯಕ್ಕೆ ಮರಳಿದ್ದರು . ದೇಶಕ್ಕಾಗಿ ತಮ್ಮ ಮಗ ಬಲಿದಾನಗೈದಿರುವುದು ತಮಗೆಲ್ಲಾ ಹೆಮ್ಮೆ ತಂದಿದೆ ಎಂದು ಮೃತಯೋಧನ ಕುಟುಂಬದವರು ಹೇಳಿದ್ದಾರೆ.

ಕೇರಳ ಪಶು ಮತ್ತು ಪ್ರಾಣಿವಿಜ್ಞಾನ ವಿವಿಯ ಬಳಿಯಿರುವ ವೈಥಿರಿ ಎಂಬ ಗ್ರಾಮದ ವಾಸುದೇವನ್ ಮತ್ತು ಶಾಂತಾ ದಂಪತಿ ಪುತ್ರನಾಗಿರುವ ವಸಂತ ಕುಮಾರ್ ಎರಡು ವರ್ಷದಲ್ಲಿ ನಿವೃತ್ತರಾಗಲಿದ್ದರು. ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಭಯೋತ್ಪಾದಕರ ದಾಳಿಯಲ್ಲಿ ಬಲಿಯಾದ ಯೋಧರಲ್ಲಿ ವಸಂತ ಕುಮಾರ್ ಕೂಡಾ ಸೇರಿದ್ದು, ಅವರ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ ಎಂದು ದಿಲ್ಲಿಯಲ್ಲಿರುವ ಕೆಲವು ಸ್ನೇಹಿತರು ಕರೆ ಮಾಡಿ ತಿಳಿಸಿದ್ದರು. ಗುರುವಾರ ಸಂಜೆ 5 ಗಂಟೆಯ ವೇಳೆಗೆ ಅಧಿಕೃತ ಸುದ್ದಿ ದೊರಕಿದೆ ಎಂದು ವಸಂತ ಕುಮಾರ್ ಅವರ ಸಂಬಂಧಿ ಸಜೀವನ್ ತಿಳಿಸಿದ್ದಾರೆ.

2001ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದ ವಸಂತ ಕುಮಾರ್, 82ನೇ ಬಟಾಲಿಯನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಭಡ್ತಿ ನೀಡಿ ಮತ್ತೊಂದು ಬೆಟಾಲಿಯನ್‌ಗೆ ವರ್ಗಾಯಿಸಲಾಗಿತ್ತು. ಈ ಮಧ್ಯೆ ರಜೆ ದೊರೆತ ಹಿನ್ನೆಲೆಯಲ್ಲಿ ವಯನಾಡ್‌ನಲ್ಲಿರುವ ಮನೆಗೆ ಆಗಮಿಸಿದ್ದ ವಸಂತ ಕುಮಾರ್ ಫೆ.9ರಂದು ಇಡುಕ್ಕಿ ಮೂಲಕ ಶ್ರೀನಗರಕ್ಕೆ ಹಿಂತಿರುಗಿದ್ದರು.

ಮೃತ ಯೋಧನ ಪಾರ್ಥಿವ ಶರೀರ ಕೇರಳಕ್ಕೆ ತಲುಪಿದ ಬಳಿಕ ರಾಜ್ಯ ಸರಕಾರದ ವತಿಯಿಂದ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News