ಹುತಾತ್ಮ ಯೋಧನ ಶವ ಪೆಟ್ಟಿಗೆಗೆ ಹೆಗಲು ನೀಡಿದ ರಾಜ್‌ನಾಥ್ ಸಿಂಗ್

Update: 2019-02-15 15:03 GMT

ಹೊಸದಿಲ್ಲಿ, ಫೆ.15: ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಉಗ್ರರ ಕಾರ್‌ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧರ ಪಾರ್ಥಿವ ಶರೀರಗಳಿಗೆ ಇಂದು ಶ್ರೀನಗರ ಸಮೀಪದ ಬಡ್‌ಗಾಮ್‌ನಲ್ಲಿ ವೀರನಮನ ಸಲ್ಲಿಸಲಾಯಿತು.

 ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹಾಗೂ ಜಮ್ಮುಕಾಶ್ಮೀರದ ಪೊಲೀಸ್ ವರಿಷ್ಠ ದಿಲ್‌ಬಾಗ್ ಸಿಂಗ್ ಅವರು ಹುತಾತ್ಮ ಸಿಆರ್‌ಪಿಎಫ್ ಯೋಧರೊಬ್ಬರ ಶವಪೆಟ್ಟಿಗೆಯನ್ನು ಹೊರುವ ಮೂಲಕ ಅಗಲಿದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು.

 ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್‌ನಾಥ್ ಸಿಂಗ್ ಅವರು ಪುಲ್ವಾಮಾ ಘಟನೆಯ ಪ್ರತೀಕಾರವನ್ನು ಸರಕಾರವು ತೀರಿಸಲಿದೆಯೆಂದು ಹೇಳಿದರು. ‘‘ನಮ್ಮ ವೀರ ಸಿಆರ್‌ಪಿಎಫ್ ಯೋಧರ ಪರಮೋನ್ನತ ಬಲಿದಾನವನ್ನು ದೇಶವು ಮರೆಯಲಾರದು. ಅವರ ತ್ಯಾಗವು ವ್ಯರ್ಥವಾಗದು’’ ಎಂದು ಸಿಂಗ್ ಬಡ್‌ಗಾಂವ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.

ಆನಂತರ ಹುತಾತ್ಮ ಯೋಧರ ಶವಪೆಟ್ಟಿಗೆಗಳನ್ನು ಟ್ರಕ್ ಮೂಲಕ ಶ್ರೀನಗರ ವಿಮಾನನಿಲ್ದಾಣಕ್ಕೆ ಕೊಂಡೊಯ್ಯಲಾಯಿತು. ಅಲ್ಲಿಂದ ವಿಶೇಷ ವಿಮಾನದ ಮೂಲಕ ಅವುಗಳನ್ನು ಹೊಸದಿಲ್ಲಿಗೆ ಕೊಂಡೊಯ್ಯಲಾಯಿತು. ಜಮ್ಮುಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, ಗೃಹ ಕಾರ್ಯದರ್ಶಿ ರಾಜೀವ್ ಗೌಬಾ, ಸಿಆರ್‌ಪಿಎಫ್ ಮಹಾನಿರ್ದೇಶಕ ಆರ್.ಆರ್. ಭಟ್ನಾಗರ್ ಹಾಗೂ ದಿಲ್‌ಬಾಗ್ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತೀಕಾರ ತೀರಿಸಲಿದ್ದೇವೆ: ಸಿಆರ್‌ಪಿಎಫ್

 ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಯೋಧರಿಗಾಗಿ ಇಡೀ ದೇಶ ಮರುಗುತ್ತಿರುವಂತೆಯೇ, ಸಿಆರ್‌ಪಿಎಫ್, ಘಟನೆಗೆ ಸಂಬಂಧಿಸಿ ಪ್ರಥಮ ಬಾರಿಗೆ ನೀಡಿದ ಅಧಿಕೃತ ಹೇಳಿಕೆಯೊಂದರಲ್ಲಿ, ‘‘ ಈ ಹೇಯ ದಾಳಿಗೆ ಪ್ರತೀಕಾರ ತೀರಿಸಲಾಗುವುದು’’ ಎಂದು ಹೇಲಿದೆ.

‘‘ನಾವು ಮರೆಯಲಾರೆವು, ನಾವು ಕ್ಷಮಿಸಲಾರೆವು. ಪುಲ್ವಾಮ ದಾಳಿಯ ನಮ್ಮ ಹುತಾತ್ಮರಿಗೆ ನಾವು ವೀರನಮನ ಸಲ್ಲಿಸುತ್ತೇವೆ’’ ಎಂದು ಸಿಆರ್‌ಪಿಎಫ್ ಟ್ವೀಟ್ ಮಾಡಿದೆ.

ಪ್ರತೀಕಾರ: ಪುನರುಚ್ಚರಿಸಿದ ಮೋದಿ

 ಹೊಸದಿಲ್ಲಿಯಲ್ಲಿ ಶುಕ್ರವಾರ ‘ವಂದೇಭಾರತ್ ಎಕ್ಸ್‌ಪ್ರೆಸ್’ ರೈಲನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪುಲ್ವಾಮ ಭಯೋತ್ಪಾದಕ ದಾಳಿಯ ಹಿಂದಿರುವವರು ದೊಡ್ಡ ತಪ್ಪನ್ನು ಎಸಗಿದ್ದಾರೆ ಹಾಗೂ ಇದಕ್ಕಾಗಿ ಅವರು ಭಾರೀ ದೊಡ್ಡ ಬೆಲೆಯನ್ನೇ ತೆರಲಿದ್ದಾರೆಂದು ಹೇಳಿದರು. ಹುತಾತ್ಮ ಯೋಧರ ಗೌರವಾರ್ಥವಾಗಿ ಅವರು ಸಮಾರಂಭದಲ್ಲಿ ಎರಡು ನಿಮಿಷಗಳ ಕಾಲ ವೌನ ಆಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News