ಸೋಲ್ಜೆನಿಟ್ಸಿನ್‌ನ ಪ್ರಸ್ತುತತೆ

Update: 2019-02-16 18:53 GMT

ಹೊಸ ಶತಮಾನದ ಸಾಹಿತ್ಯಪ್ರಿಯರಲ್ಲಿ ಸೋಲ್ಜೆನಿಟ್ಸಿನ್ ಅಷ್ಟೇನೂ ಪ್ರಖ್ಯಾತನಲ್ಲ. ಬಹುಶಃ ಕಟುಸತ್ಯವನ್ನು ಇಷ್ಟಪಡದ, ಕಟುಸತ್ಯವನ್ನು ನುಡಿಯಲು ಅತಿ ಎಚ್ಚರಿಕೆ ವಹಿಸುವ ಇಪ್ಪತ್ತೊಂದನೇ ಶತಮಾನದ ಕಾಲಧರ್ಮವೂ ಇದಕ್ಕೆ ಕಾರಣವಿದ್ದೀತು. ಇದೇನೇ ಇದ್ದರೂ ಭಿನ್ನದನಿಯನ್ನು, ಸೈದ್ಧ್ದಾಂತಿಕ ವಿರೋಧಿಗಳನ್ನು ರಾಷ್ಟ್ರದ್ರೋಹಿಗಳೆಂದು ಸಾರಾಸಗಟಾಗಿ ಖಂಡಿಸಿ ದಮನಿಸುತ್ತಿರುವ, ದಬ್ಬಾಳಿಕೆ ನಡೆಸುತ್ತಿರುವ ಸರ್ವಾಧಿಕಾರ ಪ್ರವೃತ್ತಿಯ ಆಡಳಿತವಿರುವ ಇಂದಿನ ಭಾರತಕ್ಕಂತೂ ಸ್ವಾತಂತ್ರ್ಯ ಪ್ರೇಮಿ ಸೋಲ್ಜೆನಿಟ್ಸಿನ್ ಪ್ರಸ್ತುತನಾಗುತ್ತಾನೆ.


ಜಗತ್ತಿನ ಸಾಹಿತ್ಯದಲ್ಲಿ ರಶ್ಯಾದ ಕಥಾ ಸಾಹಿತ್ಯಕ್ಕೆ ಒಂದು ವಿಶಿಷ್ಟ ಸ್ಥಾನವಿದೆ. ಅಕ್ಟೋಬರ್ ಕ್ರಾಂತಿಪೂರ್ವ(1917)ಕಾಲದಿಂದಲೂ ರಶ್ಯನ್ ಭಾಷೆಯ ಸಾಹಿತ್ಯ ರಚನೆಯಲ್ಲಿ ಅನೇಕರು ತೊಡಗಿಕೊಂಡಿದ್ದರಾದರೂ ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿ ಪುಷ್ಕಿನ್ ರಚನೆಗಳೊಂದಿಗೆ ರಶ್ಯಾ ಸಾಹಿತ್ಯದಲ್ಲಿ ನವಯುಗ ಶುರುವಾಯಿತು. ಟಾಲ್‌ಸ್ಟಾಯ್ ಮತ್ತು ಡಾಸ್ಟೊವಸ್ಕಿ ಆಧುನಿಕ ರಶ್ಯಾ ಸಾಹಿತ್ಯ ಲೋಕದ ಮೂಲಾಧಾರ ಸ್ತಂಭಗಳು. ರಶ್ಯಾದ ಆತ್ಮಗುಣದ ಅರಿವಾಗಬೇಕಾದರೆ, ರಶ್ಯಾದ ಶೀಲ, ಸ್ವಭಾವಗಳು ಗೊತ್ತಾಗಬೇಕಾದರೆ ಈ ಇಬ್ಬರು ಮಹಾನ್ ಗದ್ಯ ಲೇಖಕರನ್ನು ಓದಲೇಬೇಕು ಎನ್ನುತ್ತಾರೆ ಸಾಹಿತ್ಯ ವಿಮರ್ಶಕರು. ನೆಲ,ಜಲ,ವಾಯು ಮೊದಲಾಗಿ ರಶ್ಯಾದ ಪಂಚಭೂತಗಳ ‘ಸಾಕ್ಷಿ ಪ್ರಜ್ಞೆ’ಯಾದ ಈ ಇಬ್ಬರು ಮಹಾನ್ ಲೇಖಕರು ತಮ್ಮ ಕೃತಿಗಳಿಗೆ ಆಯ್ದುಕೊಂಡದ್ದು ನೆಲದ ಸತ್ಯವನ್ನು, ಪ್ರಕೃತಿ ಕಾಣಿಸಿದುದನ್ನು, ಮಾನವ ಹೃದಯವನ್ನು. ಈ ಇಬ್ಬರು ಧೀಮಂತರ ಸಾಲಿನಲ್ಲಿ ನಿಲ್ಲುವ ಇನ್ನೊಬ್ಬ ರಶ್ಯನ್ ಲೇಖಕ ಅಲೆಕ್ಸಾಂಡರ್ ಸೋಲ್ಜೆನಿಟ್ಸಿನ್. ಸೋವಿಯತ್ ರಶ್ಯಾವನ್ನು ಮೋಸಗಾರರ-ವಂಚಕರ ಕೂಟವೆಂದು ಕರೆದು ವ್ಯವಸ್ಥೆಗೆ ಸಡ್ಡುಹೊಡೆದ ಸೋಲ್ಜೆನಿಟ್ಸಿನ್ ಬರೆದದ್ದು ಕ್ರಾಂತಿಯೋತ್ತರ ರಶ್ಯಾದ ಬೀಭತ್ಸವಾದ ಕಠೋರ ಬದುಕನ್ನು. ಸತ್ಯವನ್ನು ನಿರ್ಭಯವಾಗಿ ಬರೆದ ಸೋಲ್ಜೆನಿಟ್ಸಿನ್ ಜನ್ಮಶತಾಬ್ದಿ ಇತ್ತೀಚೆಗೆ ನಡೆಯಿತು..

ರಶ್ಯಾದ ಆತ್ಮಸಾಕ್ಷಿಯ ಪಾಲಕ ಎಂದೇ ಖ್ಯಾತನಾದ, ನೊಬೆಲ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಅಲೆಕ್ಸಾಂಡರ್ ಸೋಲ್ಜೆನಿಟ್ಸಿನ್ ಬಂಡಾಯಗಾರ. ಸೋವಿಯತ್ ಆಡಳಿತ ವ್ಯವಸ್ಥೆ ವಿರುದ್ಧ ಲೇಖನಿಯನ್ನು ಮಸೆದವನು. ಸೋಲ್ಜೆನಿಟ್ಸಿನ್ ಆ ನೆಲದ ಸತ್ಯ ಹೊರತು ಬೇರೇನೂ ಬರೆಯಲಾರೆ ಎಂದು ಸತ್ಯ ಪ್ರಕಾಶಕ್ಕೆ ಕಟಿಬದ್ದನಾದ ಲೇಖಕ. ಸಾಹಿತಿಯೊಬ್ಬ ನಿರ್ಭಯವಾಗಿ, ದಯೆ-ದಾಕ್ಷಿಣ್ಯಗಳಿಲ್ಲದೆ ಸತ್ಯವನ್ನು ಬರೆಯಲು ಸ್ಫೂರ್ತಿ ಏನಿರಬಹುದು? ಸೋಲ್ಜೆನಿಟ್ಸಿನ್‌ಗೆ ಇಂಥ ಸ್ಫೂರ್ತಿಗೇನೂ ಕೊರತೆ ಇರಲಿಲ್ಲ. ವಿಶ್ವದ ಅತಿ ಭಯಂಕರ ಎನ್ನಲಾದ ಎರಡನೇ ಮಹಾ ಯುದ್ಧದಲ್ಲಿ ಕೆಂಪಂಗಿ ಸಿಪಾಯಿಯಾಗಿ ಹಿಟ್ಲರನ ರಶ್ಯಾಕ್ಕೆ ದಾಳಿ ಇಟ್ಟದ್ದು, ರಣರಂಗದಿಂದ ಸ್ಟಾಲಿನ್ ರೀತಿನೀತಿಗಳನ್ನು ಟೀಕಿಸಿ ಪತ್ರಗಳನ್ನು ಬರೆಯುತ್ತಿದ್ದುದು, ಸ್ಟಾಲಿನ್ ಕೋಪದ ಕೆಂಗಣ್ಣಿಗೆ ಗುರಿಯಾಗಿ ಕೂಡುದೊಡ್ಡಿಯ(ಕಾನ್ಸೆಂಟ್ರೇಷನ್ ಕ್ಯಾಂಪ್)ಬಂದಿಯಾದ್ದು, ಸ್ಟಾಲಿನ್ ಸತ್ತ ದಿನವೇ ಕೂಡು ದೊಡ್ಡಿಯಿಂದ ಬಂಧಮುಕ್ತನಾದುದು, ಕ್ಯಾನ್ಸರ್ ರೋಗಪೀಡಿತನಾಗಿ ಸೋವಿಯತ್ ಐಸೊಲೇಷನ್ ಆಸ್ಪತ್ರೆಯಲ್ಲಿ ಸಾವಿನೊಂದಿಗೆ ಸೆಣಸಾಡಿದ್ದು-ಹೀಗೆ ಮುಖಕ್ಕೆ ರಾಚಿದ ಕಠೋರ ಸತ್ಯಗಳು ಸೋಲ್ಜೆನಿಟ್ಸಿನ್ ಸಾಹಿತ್ಯಕ್ಕೆ ಸ್ಫೂರ್ತಿಯಾದುದರಲ್ಲಿ ಆಶ್ಚರ್ಯವೇನಿಲ್ಲ. ವ್ಯಕ್ತಿ-ಸಮಷ್ಠಿ ನಡುವಣ ಸಂಘರ್ಷ ಅನಾದಿ-ಅನಂತ. ರಶ್ಯನ್ ಕ್ರಾಂತಿಯ ಆನಂತರದ ಕಾಲದಲ್ಲಿ ಸಾಹಿತಿಗಳು ಎದುರಿಸಿದ ಸಮಸ್ಯೆ ಇಂಥ ಸಂಘರ್ಷವೇ ಆಗಿದೆ. ದೇಶದೊಳಗಣ ರಾಜಕೀಯ ಪರಿಸ್ಥಿತಿ ಮತ್ತು ವ್ಯಕ್ತಿಸ್ವಾತಂತ್ರ್ಯ ಸೃಜನಶೀಲ ಲೇಖಕರನ್ನು ಕಾಡುವ ಚಿರಂತನ ವಸ್ತು.ಇದು ಆ ಕಾಲದ ರಶ್ಯಾ ಲೇಖಕರ ಸಮಸ್ಯೆಯಷ್ಟೇ ಅಲ್ಲ. ದೈತ್ಯ ವ್ಯವಸ್ಥೆಯ ಬುಲ್ಡೋಝರ್ ಗಾಲಿಗಳಿಗೆ ಸಿಕ್ಕಿಬಿದ್ದಿರುವ ವ್ಯಕ್ತಿಯ ಅಳಲು, ಬಂಡವಾಳ ಸಂಸ್ಥೆಗಳ ಕಬಂಧ ಬಾಹುಗಳು, ತಲೆಮೇಲೆ ತೂಗುವ ರಾಷ್ಟ್ರದ್ರೋಹದ ಕತ್ತಿ, ಒಳ್ಳೆಯ ದಿನಗಳು ಬರುತ್ತವೆ ಎನ್ನುವ ಸುಳ್ಳು-ಇಂಥ ಪರಿಸ್ಥಿತಿಯಲ್ಲಿ ಸೃಜನಶೀಲ ಸಾಹಿತಿಯ ಪಾತ್ರವೇನು? ವ್ಯವಸ್ಥೆ ವಿರುದ್ಧ ಸಿಡಿದೇಳುವ ಲೇಖಕರದು ಒಂದು ಬಣವಾದರೆ, ವ್ಯವಸ್ಥೆಯ ದಿಗ್ದರ್ಶನದಂತೆ ಬರೆದು ಕೃತಾರ್ಥರಾಗುವ ಲೇಖಕರ ಇನ್ನೊಂದು ಬಣ. ಅಂದಿನ ಸೋವಿಯತ್ ರಶ್ಯಾವೂ ಇದಕ್ಕೆ ಹೊರತಾಗಿರಲಿಲ್ಲ. ಸೋಲ್ಜೆನಿಟ್ಟಿನ್ ಆತ್ಮಸಾಕ್ಷಿಯ ದನಿಗೆ ಬದ್ಧನಾದ. ಅವನು ಎದುರಿಸಿದ ಭಯಭೀತಿಗಳೇ ಸಾವನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಅವನಲ್ಲಿ ತುಂಬಿದವು. ಇದರಿಂದಾಗಿ ರಶ್ಯಾವನ್ನು ಪ್ರಜಾಪೀಡಕರು ಆಳುತ್ತಿದ್ದಾರೆ ಎಂದು ಜಗತ್ತಿನ ಇತಿಹಾಸದಲ್ಲಿ ದಾಖಲಿಸುವುದು ಅವನಿಗೆ ಸಾಧ್ಯವಾಯಿತು. ಸೋಲ್ಜೆನಿಟ್ಸಿನ್ ವ್ಯಕ್ತಿಯಾಗಿ ಮಾತ್ರವಲ್ಲ ಲೇಖಕನಾಗಿಯೂ ಸತ್ಯವನ್ನು ನುಡಿದು ವರ್ಷಗಟ್ಟಳೆ ಜೈಲಿನಲ್ಲಿ ಕೊಳೆಯಬೇಕಾಯಿತು. ಎಪ್ಪತ್ತರ ದಶಕದಲ್ಲಿ ಕೊಲೆಪಾತಕರನ್ನೂ ಎದುರಿಸಬೇಕಾಯಿತು. ಎದೆಗುಂದಲಿಲ್ಲ. ವ್ಯಕ್ತಿ ಸ್ವಾತಂತ್ರ್ಯ ಮತ್ತು ಕರಾಳ ವ್ಯವಸ್ಥೆಯ ನಡುವಣ ಘೋರಗಳನ್ನು, ‘ಇದನ್ನೆಲ್ಲ ಮರೆಯದಿರಿ’ ಎಂದು ಓದುಗರಿಗೆ ಸಾರಿಸಾರಿ ಹೇಳುವಂತೆ ವ್ಯವಸ್ಥೆಯ ಅಮಾನವೀಯ ಕೃತ್ಯಗಳನ್ನೆಲ್ಲ ತನ್ನ ಕೃತಿಗಳಲ್ಲಿ ದಾಖಲಿಸುತ್ತಲೇ ಹೋದ.

 ಸೋಲ್ಜೆನಿಟ್ಸಿನ್ ಹುಟ್ಟಿದ್ದು 1918ರಲ್ಲಿ(11-12-1918). ಅಂದರೆ ಬೋಲ್ಷೆವಿಕ್ಕರು ರಶ್ಯಾದ ಆಡಳಿತಾಧಿಪತ್ಯವನ್ನು ವಹಿಸಿಕೊಂಡ ಒಂದು ವರ್ಷದ ನಂತರ. ರೊಸ್ತೊವ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನಂತರ, ಜರ್ಮನ್ನರು ರಶ್ಯಾದ ಮೇಲೆ ಆಕ್ರಮಣ ನಡೆಸಿದ ಸಮಯದಲ್ಲಿ ಕೆಂಪು ಸೇನೆ ಸೇರಿದ. 1942ರಲ್ಲಿ ಫಿರಂಗಿ ತುಕಡಿಯೊಂದರ ದಳಪತಿಯಾದ. ಮೂರು ವರ್ಷಗಳ ಸೈನಿಕ ಜೀವನದಲ್ಲಿ ಸೋಲ್ಜೆನಿಟ್ಸಿನ್ ಎರಡು ಸಲ ಶೌರ್ಯ-ಪರಾಕ್ರಮಗಳಿಗಾಗಿ ಪ್ರಶಸ್ತಿ ಪಡೆದ. 1945ರಲ್ಲಿ ನಿರಾಧಾರಿತ ರಾಜಕೀಯ ಆಪಾದನೆಗಳ ಮೇಲೆ ಪೂರ್ವ ಪ್ರಷ್ಯಾದಲ್ಲಿ ಅವನನ್ನು ಬಂಧಿಸಲಾಯಿತು. ಸ್ಟಾಲಿನ್ ಆಡಳಿತದ ರೀತಿನೀತಿಗಳ ಬಗ್ಗೆ ಕಟು ಟೀಕೆ ಮಾಡಿದ್ದೇ ಬಂಧನಕ್ಕೆ ಕಾರಣ. ಎಂಟು ವರ್ಷ ಸಶ್ರಮ ದುಡಿಮೆಯ ಶಿಕ್ಷೆ ವಿಧಿಸಿ ಸೈಬೀರಿಯಾದ ಬೆಂಗಾಡಿನಲ್ಲಿನ ಕೂಡುದೊಡ್ಡಿಗೆ ಕಳುಹಿಸಲಾಯಿತು. ಕೂಡುದೊಡ್ಡಿಯ ದಾರುಣ ಅನುಭವದ ಅಭಿವ್ಯಕ್ತಿ ‘ಒನ್ ಡೇ ಇನ್ ದಿ ಲೈಫ್ ಆಫ್ ಇವಾನ್ ದಿ ಡೆನಿಸೊವಿಚ್’. ಸೋವಿಯತ್ ಸಮಾಜಕ್ಕೆ ಅಂಟಿಕೊಂಡಿದ್ದ ಕ್ಯಾನ್ಸರ್ ವ್ಯಾಧಿಯ ನೋವು ಸಂವೇದನಾಶೀಲ ಲೇಖಕನಾದ ಸೋಲ್ಜೆನಿಟ್ಸಿನ್ನನ ಹೃದಯವನ್ನು ಕೊರೆಯುತ್ತಿತ್ತು. ಈ ವೇದನೆಗೆ ತುತ್ತಾಗಿ ಮಾಗಿದ ಮನಸ್ಸು ಸಾಹಿತ್ಯ ಲೋಕದಲ್ಲಿ ಅಭಿವ್ಯಕ್ತಿ ಪಡೆಯಿತು.

‘ಎ ಡೇ ಇನ್ ದಿ ಲೈಫ್ ಆಫ್ ಇವಾನ್ ದಿ ಡೆನಿಸೊವಿಚ್’(1962),‘ಇನ್ ದಿ ಫಸ್ಟ್ ಸರ್ಕಲ್’(1968),‘ಕ್ಯಾನ್ಸರ್ ವಾರ್ಡ್’(1968), ಮೂರು ಸಂಪುಟಗಳಲ್ಲಿನ ದಿ ಗುಲಾಗ್ ಆರ್ಚಿಪೆಲಾಗೊ(1958-1968) ದಿ ಓಕ್ ಆ್ಯಂಡ್ ದಿ ಕಾರ್ಫ(1975)-ಮಾನವ ಹೃದಯದ ವ್ಯಾಪಾರಗಳನ್ನು, ಬದುಕಿನ ಕಟು ಸತ್ಯಗಳನ್ನು ಎಳೆಎಳೆಯಾಗಿ ಬಿಡಿಸಿ ತೋರುವ ಕುಶಲಕರ್ಮಿ ಲೇಖಕ ಸೋಲ್ಜೆನಿಟ್ಸಿನ್ನನ ಪ್ರಮುಖ ಕೃತಿಗಳು. ‘ದಿ ಗುಲಾಗ್ ಆರ್ಚಿಪೆಲಾಗೂ’ ಕೃತಿಯನ್ನು ನೊಬೆಲ್ ಪ್ರಶಸ್ತಿ ಸಮಿತಿ ಶ್ರೇಷ್ಠ ಮಾನವ ಸಾಹಿತ್ಯ ಕೃತಿ ಎಂದು ಪರಿಗಣಿಸಿ 1974ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ನೀಡಿತು. ಮಾನವಕುಲವನ್ನು ಶೋಷಣೆಯಿಂದ ಮುಕ್ತಗೊಳಿಸುವ ಸಮತಾ ಸಮಾಜದ ಕ್ರಾಂತಿವೀರರ ಮಾತು-ಕೃತಿಗಳ ನಡುವಣ ಅಂತರದ ವಿರುದ್ಧ ದನಿ ಎತ್ತಿ, ಅಮಾನುಷ ಆಡಳಿತದ ವಿರುದ್ಧ ಬಂಡಾಯ ಸಾರಿದ ಸೋಲ್ಜೆನಿಟ್ಸಿನ್, ವ್ಯಕ್ತಿ-ಸಮಾಜ ಸಮಷ್ಟಿ ಮತ್ತು ಸ್ವಾತಂತ್ರ್ಯಗಳ ನೆಲೆಯಲ್ಲಿ ಸತ್ಯಾನ್ವಾಷಣೆ ಮತ್ತು ಸತ್ಯ ದಾಖಲಿಸುತ್ತಿದ್ದ ಸಮಯದಲ್ಲೇ, ಅತ್ತ ಪಾಶ್ಚಾತ್ಯ ಲೇಖಕರು ಸೋವಿಯತ್ ರಷ್ಯಾದ ವಿದ್ಯಮಾನಗಳಿಗೆ ಮೂಕ ಸಾಕ್ಷಿಯಾಗಿದ್ದರು.

ಸಾರ್ತ್ರೆ, ಬರ್ನಾಡ್ ಷಾ, ಮೊದಲಾದವರು, ಸ್ಟಾಲಿನ್ ಕಾಲದ ಕಗ್ಗೊಲೆಗಳನ್ನು ಕಂಡೂ ಕಾಣದಂತೆ ರಶ್ಯಾದಲ್ಲಿ ಭೂ ಲೋಕದ ನಂದನವನವೊಂದು ಸಮತಾ ಸಮಾಜದ ಗಾಳಿ, ನೀರು, ಗೊಬ್ಬರವನ್ನುಂಡು ಸೃಷ್ಟಿಯಾಗುತ್ತಿದೆ ಎಂದು ಪ್ರಶಂಸೆ ಗೈಯುತ್ತಿದ್ದುದು ಇತಿಹಾಸದ ಒಂದು ವ್ಯಂಗ್ಯ. ಪಾಶ್ಚಾತ್ಯ ಜಗತ್ತು ಸೋವಿಯತ್ ಒಕ್ಕೂಟದ ಸಮತಾ ಸಮಾಜ, ಕೂಡೊಕ್ಕಲು ಬೇಸಾಯ ಮೊದಲಾದವುಗಳನ್ನು ಹಾಡಿಹೊಗಳುತ್ತ್ತಿದ್ದಾಗ ಅಲ್ಲಿನ ವಾಸ್ತವ ಬೇರೆಯದೇ ಆಗಿತ್ತು. 1917-1921ರ ಅವಧಿಯ ಲೆನಿನ್ ಕ್ರಾಂತಿ, ಗುಂಡಿನದಾಳಿ ಮತ್ತು ಚಿತ್ರಹಿಂಸೆಯಲ್ಲಿ ಆರರಿಂದ ಹನ್ನೆರಡು ದಶ ಲಕ್ಷ ಜನರನ್ನು ಬಲಿತಗೆದುಕೊಂಡಿತ್ತು. ಓಲ್ಗಾ ಪ್ರಾಂತದಲ್ಲಿ ಮಾನವ ನಿರ್ಮಿತ ಬರದಿಂದಾಗಿ ಹದಿಮೂರು ದಶಲಕ್ಷ ಜನ ಸತ್ತಿದ್ದರು(1922-23). 1922ರಿಂದ 1928ರ ನಡುವಣ ಅವಧಿಯಲ್ಲಿ ಕ್ರೈಸ್ತ ಪುರೋಹಿತರು ಮೊದಲ್ಗೊಂಡಂತೆ 2ರಿಂದ3 ದಶಲಕ್ಷ ಮಂದಿ ವಿವಿಧ ವರ್ಗದ ಜನರು ‘ಕ್ರಾಂತಿ’ಗೆ ಬಲಿಯಾಗಿದ್ದರು. ಹದಿನಾರು ದಶಲಕ್ಷ ಮಂದಿ ಜಮೀನ್ದಾರರನ್ನು ವ್ಯವಸ್ಥಿತ ಗುಂಡಿನ ದಾಳಿ ಅಥವಾ ಕ್ಷಾಮಡಾಮರಗಳಿಂದ ನಿರ್ನಾಮಗೊಳಿಸಲಾಗಿತ್ತು. 1943-1953ರ ನಡುವಣ ಅವಧಿಯಲ್ಲಿ ಸ್ಟಾಲಿನ್‌ನ ಕೂಡುದೊಡ್ಡಿಗಳಲ್ಲಿ ಸತ್ತವರ ಸಂಖ್ಯೆ ಹನ್ನೊಂದು ದಶಲಕ್ಷ.

ಈ ಅಂಕಣಕಾರ ಕನ್ನಡಕ್ಕೆ ಅನುವಾದಿಸಿರುವ ‘ಇವಾನ್ ಡೆನಿಸೊವಿಚ್ ನ ಜೀವನದಲ್ಲಿ ಒಂದು ದಿನ’, ಇವಾನ್ ಎಂಬ ಒಬ್ಬ ಸಾಮಾನ್ಯ ಪ್ರಜೆಯ ಹತ್ತುವರ್ಷಗಳ ಕೂಡುದೊಡ್ಡಿ ಜೀವನದ ಒಂದು ದಿನದ ಬದುಕನ್ನು ನಿರೂಪಿಸುತ್ತದೆ. ಇವಾನ್ ಒಬ್ಬ ಸಾಮಾನ್ಯ ಪ್ರಜೆ. ಎರಡನೆ ವಿಶ್ವ ಸಮರದ ಕಾಲದಲ್ಲಿ ಉಳಿದೆಲ್ಲ ರಶ್ಯನ್ನರಂತೆ ಕೆಂಪು ಸೇನೆ ಸೇರಿ ಪಶ್ಚಿಮ ರಣರಂಗದಲ್ಲಿ ಹಸಿವು ಹಾಗೂ ಉಗ್ರ ಚಳಿಯನ್ನು ಎದುರಿಸಿ ತಾಯ್ನಿಡಿಗಾಗಿ ಹೋರಾಡಿದ ಧೀರ ಸೈನಿಕ. 1945ರಲ್ಲಿ ಇವಾನ್ ಮತ್ತು ಅವನ ಮಿತ್ರರನ್ನು ಜರ್ಮನ್ನರು ಸೆರೆಹಿಡಿಯುತ್ತಾರೆ. ಕೆಲವು ದಿನಗಳ ನಂತರ ಇವಾನ್ ಮತ್ತು ಅವನ ಮಿತ್ರರು ಜರ್ಮನ್ನರ ಸೆರೆಯಿಂದ ತಪ್ಪಿಸಿಕೊಂಡು ರಶ್ಯಾಕ್ಕೆ ವಾಪಸಾಗುತ್ತಾರೆ. ತಾಯ್ನಾಡಿನಲ್ಲಿ ಇವರಿಗೆ ಕಾದಿದ್ದು ವಿರೋಚಿತ ಸ್ವಾಗತವಲ್ಲ. ಸ್ಟಾಲಿನ್ ಆಧಿಪತ್ಯವನ್ನು ಟೀಕಿಸಿದ ಆರೋಪದ ಮೇಲೆ ಇವರನ್ನು ದೇಶದ್ರೋಹದ ಆರೋಪದ ಮೇಲೆ ಪೊಲೀಸರು ಬಂಧಿಸುತ್ತಾರೆ. ಅಸಹಾಯಕನಾದ ಇವಾನ್ ಸತ್ಯ ಮತ್ತು ಬದುಕು ಇವರೆಡರಲ್ಲಿ ಬದುಕನ್ನು ಅಪ್ಪಿಕೊಳ್ಳುತ್ತಾನೆ.

ಸತ್ಯಹೇಳಿ ತುಪಾಕಿಗೆ ಬಲಿಯಾಗುವ ಬದಲು ‘ತಪ್ಪೊಪ್ಪಿಕೊಂಡು’ ಕೂಡುದೊಡ್ಡಿ ಸೇರುತ್ತಾನೆ. ಇವಾನನ ಕೂಡುದೊಡ್ಡಿಯ ಒಂದು ದಿನದ ಅನುಭವ ಅನ್ಯಾಯಕ್ಕೆ ತುತ್ತಾದವನೊಬ್ಬನ ಒಂದು ವಿರಳ ಘಟನೆಯಲ್ಲ. ಇದು, ಸ್ಟಾಲಿನ್ನನ ಆಡಳಿತಾವಧಿಯಲ್ಲಿ ಸಾವಿರಾರು ಮಂದಿ ರಶ್ಯನ್ನರು ಬೇಹುಷಾರಿನಿಂದ ಆಡಿರಬಹುದಾದ ಒಂದೇ ಒಂದು ಸ್ಟಾಲಿನ್ ವಿರೋಧಿ ಮಾತಿಗೂ ಅನುಭವಿಸಿದ ಕೂಡು ದೊಡ್ಡಿಯ ಶಿಕ್ಷೆಯ ಸಂಕೇತ. ಹೀಗಾಗಿ ಈ ಕಾದಂಬರಿ ರಶ್ಯಾದ ಪ್ರತಿ ಕುಟುಂದಲ್ಲೂ ಒಬ್ಬರಲ್ಲ ಒಬ್ಬರು ಅನುಭವಿಸಿದ ಕೂಡುದೊಡ್ಡಿಯ ದಾರುಣ ಬದುಕನ್ನು ನೆನಪಿಸುವ ರಾಷ್ಟ್ರೀಯ ದುಃಸ್ವಪ್ನವಾಗಿತ್ತು. ಇದನ್ನು ನೆನೆಯುವುದು ಯಾರಿಗೂ ಬೇಡವಾಗಿತ್ತು. ಸೋಲ್ಜೆನಿಟ್ಸಿನ್ನನ ಈ ಕಾದಂಬರಿಯನ್ನು ಪ್ರಕಟಿಸುವ ಧೈರ್ಯವನ್ನು ಯಾರೂ ಮಾಡಲಿಲ್ಲ.ಕೊನೆಗೊಮ್ಮೆ, ರಶ್ಯಾ ಸಾಹಿತ್ಯ ಲೋಕದಲ್ಲಿ ಸುಧಾರಣಾವಾದಿ ಪತ್ರಿಕೆಯೆಂದು ಖ್ಯಾತವಾಗಿದ್ದ ‘ನೋಯಿಮಿರ’ ಸಂಪಾದಕ ಇದನ್ನು ಪ್ರಕಟಿಸಲು ಒಪ್ಪಿದ. ಆದರೆ ಆತನೂ ಪ್ರಕಟಿಸುವಷ್ಟು ಸ್ವತಂತ್ರನಿರಲಿಲ್ಲ. ಹಸ್ತಪ್ರತಿಯನ್ನು ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಗೆ ಕಳುಹಿಸಲಾಯಿತು. ಪ್ರಕಟಣೆ ಬಗ್ಗೆ ಸಮಿತಿಯಲ್ಲಿ ಒಮ್ಮತ ವ್ಯಕ್ತವಾಗಲಿಲ್ಲ. ಹಸ್ತಪ್ರತಿಯನ್ನು ಓದಿದ ಅಂದಿನ ಪ್ರಧಾನ ಮಂತ್ರಿ ನಿಕಿಟ ಕೃಶ್ಚೇವ್ ಒಂದು ಸಾಲನ್ನೂ ಕತ್ತರಿಸಿದಂತೆ ಪ್ರಕಟಿಸಲು ಅನುಮತಿ ನೀಡಿದರು, ಬೆಳಗಾಗುವುದರಲ್ಲಿ ಅನಾಮಧೇಯ ಲೇಖಕನೊಬ್ಬ ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದಿದ್ದ.

ಕೃಶ್ಚೇವರ ಮಧ್ಯಪ್ರವೇಶದಿಂದ ಪ್ರಕಾಶಮಾನಕ್ಕೆ ಬಂದ ಸೋಲ್ಜೆನಿಟ್ಸಿನ್ ‘ಮೆಟ್ರಿಯೋನಳ ಮನೆ’ ಮೊದಲಾದ ಕತೆ ಕಾದಂಬರಿಗಳನ್ನು ಬರೆದ. ರಶ್ಯಾದ ಆಡಳಿತ ವ್ಯವಸ್ಥೆಯ ಕಟುಟೀಕಾಕಾರನಾಗಿದ್ದ ಸೋಲ್ಜೆನಿಟ್ಸಿನ್ ಸರಕಾರದ ಆಗ್ರಹಕ್ಕೆ ತುತ್ತಾದ. ಸರಕಾರಿ ಕೃಪಾಪೋಷಿತ ಸಂಸ್ಥೆಯಾಗಿದ್ದ ಸೋವಿಯತ್ ಲೇಖಕರ ಸಂಘ ಅವನನ್ನು ಸಂಘದ ಸದಸ್ಯತ್ವದಿಂದ ಉಚ್ಚಾಟಿಸಿತು. ‘ಎ ಡೇ ಇನ್ ದಿ ಲೈಫ್ ಆಫ್ ಇವಾನ್ ದಿ ಡೆನಿಸೊವಿಚ್’, ‘ಫಸ್ಟ್ ಸರ್ಕಲ್’, ‘ಕ್ಯಾನ್ಸರ್ ವಾರ್ಡ್’, ‘ಗುಲಾಗ್ ಆರ್ಚಿಪಲಾಗೊ’-ಇಂಥ ಕೃತಿಗಳ ಮೂಲಕ ದೇಶದ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡುತಿದ್ದಾನೆ, ಮಿಥ್ಯಾಪವಾದ ಹೊರಿಸುತ್ತಿದ್ದಾನೆ ಎಂದು ಸರಕಾರ ಭಾವಿಸಿತು. ರಾಜಕೀಯ ವಿರೋಧಿಗಳಿಗೆ ನೀಡುವ ಕೂಡುದೊಡ್ಡಿಯ ಸಶ್ರಮ ದುಡಿಮೆಯ ಶಿಕ್ಷಾ ಪದ್ಧತಿಗೆ ರಶ್ಯನ್ ಭಾಷೆಯಲ್ಲಿ ಗುಲಾಗ್ ಎಂದು ಕರೆಯಲಾಗುತ್ತದೆ. ‘ಇವಾನ್ ದಿ ಡೆನಿಸೊವಿಚ್ ಜೀವನದಲ್ಲಿ ಒಂದು ದಿನ’ ಹಾಗೂ ‘ಗುಲಾಗ್ ಆರ್ಚಿಪಲಾಗೊ’ ಕೃತಿಗಳಲ್ಲಿ ಮೂಡಿ ಬಂದಿದ್ದ ರಶ್ಯಾದ ಕೂಡುದೊಡ್ಡಿಯ ಅಮಾನುಷ ಸಶ್ರಮ ದುಡಿಮೆ ಶಿಕ್ಷೆಯ ಚಿತ್ರಣ ಸೋವಿಯತ್ ರಶ್ಯಾದ ಕರಾಳ ಜಗತ್ತನ್ನು ಪ್ರಪಂಚಕ್ಕೆ ಎತ್ತಿ ತೋರಿಸಿ ವ್ಯವಸ್ಥೆಯನ್ನು ಕಂಗೆಡಿಸಿತ್ತು. ಅದೇ ವೇಳೆಗೆ ಪ್ರಕಟವಾದ ನೊಬೆಲ್ ಸಾಹಿತ್ಯ ಪ್ರಶಸ್ತಿ ಸರಕಾರದ ಸಿಟ್ಟನ್ನು ನೆತ್ತಿಗೇರಿಸಿರಬೇಕು. ಸರಕಾರ ಸೋಲ್ಜೆನಿಟ್ಸಿನ್ನನನ್ನು ದೇಶಭ್ರಷ್ಟನೆಂದು ಘೋಷಿಸಿತು. ಸೋಲ್ಜೆನಿಟ್ಸಿನ್ ಅಮೆರಿಕದಲ್ಲಿ ಆಶ್ರಯ ಪಡೆದ.

ಎದೆಗುಂದದೆ ‘ಗುಲಾಬ್ ಆರ್ಚಿಪಲಾಗೊ’ ಮುಂದಿನ ಭಾಗಗಳನ್ನು ಬರೆದ. ಈ ಮಹಾನ್ ಕೃತಿ ರಶ್ಯಾದಲ್ಲಿನ ಸರಕಾರಿ ಪ್ರಾಯೋಜಿತ ಕೂಡುದೊಡ್ಡಿಯ ಅಮಾನುಷ ಶಿಕ್ಷೆಯ ಭಯಾನಕ ಬದುಕನ್ನು ಇಡೀ ಜಗತ್ತಿಗೆ ಅನಾವರಣಗೊಳಿಸಿತ್ತು. ಪ್ರತ್ಯಕ್ಷ ಅನುಭವಗಳು, ನೆನಪುಗಳು, ವರದಿಗಳು, 227 ಸಾಕ್ಷ್ಯಗಳನ್ನು ಆಧರಿಸಿದ ’ಗುಲಾಗ್ ಆರ್ಚಿಪೆಲಾಗೊ’ ಶತಮಾನದ ಸೋವಿಯತ್ ರಶ್ಯಾದ ಇತಿಹಾಸದ ಕಟುವ್ಯಾಖ್ಯಾನವಾಗಿ ನಾಗರಿಕ ಸಮಾಜ ತಲೆತಗ್ಗಿಸುವಂತಾಯಿತು. ಕಾಲಬದಲಾದಂತೆ 1994ರಲ್ಲಿ ಸೋಲ್ಜೆನಿಟ್ಸಿನ್ ಗಡಿಪಾರು ಶಿಕ್ಷೆಯಿಂದ ಮುಕ್ತನಾಗಿ ತಾಯ್ನಿಡಿಗೆ ಹಿಂದಿರುಗಿದಾಗ ಅವನಿಗೆ ಎದುರಾದದ್ದು ಬೋರಿಸ್ ಎಲಿತ್ಸಿನ್ ಅಧ್ಯಕ್ಷತೆಯ ಆಡಳಿತ. ಪಾಶ್ವಾತ್ಯ ಮಾದರಿಯ ಮಾರುಕಟ್ಟೆ ಆಧರಿತ ಅರ್ಥವ್ಯವಸ್ಥೆ ರಶ್ಯನ್ನರ ಬದುಕನ್ನು ಹಾಳುಮಾಡುತ್ತಿರುವುದನ್ನು ಕಂಡು ವ್ಯಗ್ರನಾದ.ಎಲಿತ್ಸಿನ್ ನೀತಿಗಳಿಂದ ಭ್ರಮನಿರಸನಗೊಂಡ ಸೋಲ್ಜೆನಿಟ್ಸಿನ್ ಪುತಿನ್ ಸಹಾನುಭೂತಿಪರನಾದ. ಪಾಶ್ವಾತ್ಯ ಮಾದರಿಯ ಪ್ರಜಾಸತ್ತಾತ್ಮಕ ಮಾದರಿಗಳನ್ನು ತ್ಯಜಿಸುವಂತೆ, ಪ್ರಜೆಗಳ ನೈತಿಕ ಆರೋಗ್ಯಕ್ಕೆ ಹೆಚ್ಚು ಗಮನಕೊಡುವಂತೆ ಸರಕಾರವನ್ನು ಆಗ್ರಹಪಡಿಸಿದ. ಅವನ ಆ ನಂತರದ ಬರವಣಿಗೆಯೂ ವ್ಯಕ್ತಿಗತ ಸ್ವಾತಂತ್ರ್ಯಕ್ಕಿಂತ ವ್ಯವಸ್ಥೆಯ ಅಧಿಕಾರಬಲ ಮತ್ತು ಆತ್ಮರಕ್ಷಣೆಗೆ ಪ್ರಾಮುಖ್ಯಕೊಡುವ ಪ್ರವೃತ್ತಿಯತ್ತ ವಾಲಿದ್ದರಿಂದ ಪಶ್ಚಿಮ ರಾಷ್ಟ್ರಗಳಲ್ಲಿ ಅವನ ಖ್ಯಾತಿ ಇಳಿಮುಖವಾಯಿತು.

ಸೋಲ್ಜೆನಿಟ್ಸಿನ್ ದೇಶಭ್ರಷ್ಟನಾಗಿ ಅಮೆರಿಕದಲ್ಲಿ ಹೆಚ್ಚುಕಾಲ ಬಾಳ್ವೆಮಾಡಿದ್ದರೂ ಆ ದೇಶದ ಬಗ್ಗೆಯಾಗಲೀ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆಯಾಗಲಿ ಅವನಲ್ಲಿ ಹೆಚ್ಚಿನ ಒಲವು ಮೂಡಿರಲಿಲ್ಲ.ತಾಯ್ನಿಡಿನ ದಮನ-ದಬ್ಬಾಳಿಕೆಗಳ ಆಡಳಿತ ಅಸಹ್ಯವೆನಿಸಿದಂತೆಯೇ ಪಶ್ಚಿಮದ ಭೋಗಸಂಸ್ಕೃತಿಯೂ ಅವನಿಗೆ ಅಸಹ್ಯವೂ ತಿರಸ್ಕರಣೀಯವೂ ಆಗಿತ್ತು. ಸೋಲ್ಜೆನಿಟ್ಸಿನ್ ಗಡಿಪಾರು ಶಿಕ್ಷೆಯಿಂದ ಮುಕ್ತನಾದುದಕ್ಕೂ ಸ್ಟಾಲಿನ್ ನೀತಿಗೆ ವಿದಾಯ ಹೇಳಿದ ನಿಕಟ ಕೃಶ್ಚೇವರ ಆಡಳಿತಕ್ಕೂ ನಿಕಟವಾದ ನಂಟಿದೆ ಎನ್ನುತ್ತಾರೆ ಇತಿಹಾಸಕಾರರು.

ಕೃಶ್ಚೇವ್ ಸೋಲ್ಜೆನಿಟ್ಸಿನ್ ಬಗ್ಗೆ ಉದಾರಿಯಾಗಿದ್ದ ಎಂಬುದಂತೂ ನಿಜ. ಸೋಲ್ಜೆನಿಟ್ಸಿನ್ನನ ಕೂಡುದೊಡ್ಡಿ ಬದುಕಿನ ಹೃದಯಂಗಮ ಸಾಹಿತ್ಯ ಪಾಶ್ಚಾತ್ಯರಲ್ಲಿ ಸಮಾಜವಾದದ ಬಗ್ಗೆ ಭ್ರಮನಿರಸನಕ್ಕೆ ಪುಟಕೊಟ್ಟಿತ್ತು. ಆಖೈರಾಗಿ ಸಮಾಜವಾದಿ ಸೋವಿಯತ್ ಒಕ್ಕೂಟದ ಪತನವಾದಾಗ ಕಮ್ಯುನಿಸ್ಟ್ ಸಿದ್ಧಾಂತ ಪ್ರಣೀತ ಸಮತಾ ಸಮಾಜದ ಭ್ರಮೆ ಸಂಪೂರ್ಣವಾಗಿ ಅಳಿದುಹೋಗಿತ್ತು. ಹೊಸ ಶತಮಾನದ ಸಾಹಿತ್ಯಪ್ರಿಯರಲ್ಲಿ ಸೋಲ್ಜೆನಿಟ್ಸಿನ್ ಅಷ್ಟೇನೂ ಪ್ರಖ್ಯಾತನಲ್ಲ. ಬಹುಶಃ ಕಟುಸತ್ಯವನ್ನು ಇಷ್ಟಪಡದ, ಕಟುಸತ್ಯವನ್ನು ನುಡಿಯಲು ಅತಿ ಎಚ್ಚರಿಕೆ ವಹಿಸುವ ಇಪ್ಪತ್ತೊಂದನೇ ಶತಮಾನದ ಕಾಲಧರ್ಮವೂ ಇದಕ್ಕೆ ಕಾರಣವಿದ್ದೀತು. ಇದೇನೇ ಇದ್ದರೂ ಭಿನ್ನದನಿಯನ್ನು, ಸೈದ್ಧ್ದಾಂತಿಕ ವಿರೋಧಿಗಳನ್ನು ರಾಷ್ಟ್ರದ್ರೋಹಿಗಳೆಂದು ಸಾರಾಸಗಟಾಗಿ ಖಂಡಿಸಿ ದಮನಿಸುತ್ತಿರುವ, ದಬ್ಬಾಳಿಕೆ ನಡೆಸುತ್ತಿರುವ ಸರ್ವಾಧಿಕಾರ ಪ್ರವೃತ್ತಿಯ ಆಡಳಿತವಿರುವ ಇಂದಿನ ಭಾರತಕ್ಕಂತೂ ಸ್ವಾತಂತ್ರ್ಯ ಪ್ರೇಮಿ ಸೋಲ್ಜೆನಿಟ್ಸಿನ್ ಪ್ರಸ್ತುತನಾಗುತ್ತಾನೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News